ಸಚಿವ ಕುಮಾರಸ್ವಾಮಿ ಭೂ ಕಬಳಿಕೆ ಪ್ರಕರಣ; ಕಂದಾಯ ಇಲಾಖೆ ಪ್ರ.ಕಾ.ಗೆ ಜೈಲಿಗೆ ಕಳುಹಿಸುವ ಎಚ್ಚರಿಕೆ ನೀಡಿದ ಹೈಕೋರ್ಟ್‌

Most read




ಬೆಂಗಳೂರು: ಪ್ರತಿವಾದಿಗಳಾದ ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಮತ್ತು ಅವರ ಸಂಬಂಧಿಗಳು ತುಂಬಾ ಪ್ರಭಾವಿಗಳು ಮತ್ತು ಉನ್ನತ ಹುದ್ದೆಯಲ್ಲಿದ್ದಾರೆ ಎಂದು ನೀವು ಐದು ವರ್ಷ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನು ಎರಡು ವಾರ ಸಮಯ ಕೊಡುತ್ತೇನೆ. ಅಷ್ಟರೊಳಗೆ ನಿಮ್ಮ ಕೈಲಿ ಆಗುವುದಾರೆ ತಿಳಿಸಿ, ಇಲ್ಲವೇ ಅಸಮರ್ಥರು ಎಂದಾದರೂ ಹೇಳಿ. ಆಗ ನಿಮ್ಮನ್ನು ಎಲ್ಲಿಗೆ ಕಳಿಸಬೇಕೊ ಅಲ್ಲಿಗೇ ಕಳಿಸುತ್ತೇನೆ. ಹದಿನೈದು ದಿನ ಜೈಲಿನಲ್ಲಿ ಇದ್ದು ಬಂದರೆ ನೀವೆಲ್ಲರೂ ಸರಿಹೋಗುತ್ತೀರಿ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ ಅವರಿಗೆ ಹೈಕೋರ್ಟ್‌ ಕಠಿಣ ಮಾತುಗಳಲ್ಲಿ ಎಚ್ಚರಿಕೆ ನೀಡಿದೆ.

ಮಾಜಿ ಮುಖ್ಯಮಂತ್ರಿಗಳೂ ಆಗಿರುವ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಅವರ ಸಂಬಂಧಿ ಮಾಜಿ ಶಾಸಕ ಡಿ.ಸಿ.ತಮ್ಮಣ್ಣ ಮತ್ತಿತರರು ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿ ವ್ಯಾಪ್ತಿಯಲ್ಲಿ 14 ಎಕರೆ ಸರ್ಕಾರಿ ಜಮೀನು ಒತ್ತುವರಿ ಮಾಡಿದ್ದಾರೆ ಎಂಬ ಆರೋಪಕ್ಕೆ
ಸಂಬಂಧಿಸಿದ ಅರ್ಜಿ ವಿಚಾರಣೆ ಬುಧವಾರ ನಡೆಯಿತು. ಈ ಸಂದರ್ಭದಲ್ಲಿ ಖುದ್ದು ಹಾಜರಿದ್ದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ ಅವರಿಗೆ ಹೈಕೋರ್ಟ್‌ ಈ ರೀತಿ ಎಚ್ಚರಿಕೆ ನೀಡಿತು.

ಭೂ ಕಬಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ನೀಡಿರುವ ಆದೇಶ ಜಾರಿಗೊಳಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆಕ್ಷೇಪಿಸಿ ಸಾಮಾಜಿಕ ಹೋರಾಟಗಾರ ಎಸ್‌.ಆರ್‌.ಹಿರೇಮಠ ನೇತೃತ್ವದ ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿರುವ ಸಿವಿಲ್‌
ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾಯಮೂರ್ತಿ ಕೆ.ಸೋಮಶೇಖರ್‌ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ನ್ಯಾಯಾಂಗ ನಿಂದನೆ ಮೊಕದ್ದಮೆಗಳಲ್ಲಿ ಆಡಳಿತಶಾಹಿಗೆ ಕಿಂಚಿತ್ತೂ ದಯೆ ತೋರಬಾರದು ಎಂದು ಉಲ್ಲೇಖವಿದೆ. ನಿಮ್ಮ ವಿರುದ್ಧ ಈಗಲೇ ನ್ಯಾಯಾಂಗ ನಿಂದನೆಯ ದೋಷಾರೋಪ ನಿಗದಿಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡುತ್ತೇನೆ. ನೀವೆಲ್ಲಾ ಕೋರ್ಟ್‌ ಆದೇಶಗಳನ್ನು ಪಾಲನೆ ಮಾಡುವವರೆಗೂ ನಿಮ್ಮ ಸಂಬಳಕ್ಕೆ ಕತ್ತರಿ ಹಾಕಿದರೆ ಅರಿವಾಗುತ್ತದೆ ಎಂದು ಕಿಡಿ ಕಾರಿದರು.


ಒಂದು ಹಂತದಲ್ಲಿ ಕಠಾರಿಯಾ, ಸರ್‌, ವ್ಯವಸ್ಥೆ ತುಂಬಾ ಹದಗೆಟ್ಟಿದೆ. ಒಂದು ವರ್ಷದಲ್ಲಿ ನಾವು 14 ಎಕರೆಗೂ ಹೆಚ್ಚು ಅಕ್ರಮಿತ ಸರ್ಕಾರಿ ಭೂಮಿಯನ್ನು ವಶಕ್ಕೆ ಪಡೆದಿದ್ದೇವೆ. ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ಕೈಗೊಳ್ಳಲು ವಿಶೇಷ ತನಿಖಾ ದಳ (ಎಸ್‌ಐಟಿ) ರಚನೆ ಮಾಡಿದ್ದೇವೆ ಎಂದು ಹೇಳಿದರು. ನ್ಯಾ.ಸೋಮಶೇಖರ್, ಇ–ಖಾತಾ ಎಂಬ ವ್ಯವಸ್ಥೆಯೇ ಭ್ರಷ್ಟಾಚಾರದ ಕೂಪವಾಗಿದೆ. ಮೊದಲು ಪೂರ್ವಗ್ರಹಪೀಡಿತ ಭಾವನೆಗಳ ಭ್ರಷ್ಟ ಪರಿಧಿಯಿಂದ ಹೊರಬನ್ನಿ ಎಂದರು. ನಂತರ ನ್ಯಾ.ಸೋಮಶೇಖರ್‌ ಅವರು ವಿಚಾರಣೆಯನ್ನು ಫೆಬ್ರುವರಿ 21ಕ್ಕೆ ಮುಂದೂಡಿದರು.

More articles

Latest article