ಲಾಲ್‌ ಬಾಗ್‌ ನ ಕೆರೆಯಲ್ಲಿ ತೇಲುವ ತೋಟಗಳು: ಈ ತೋಟಗಳು ಹೇಗಿರಲಿವೆ? ಇಲ್ಲಿದೆ ವಿವರ

Most read

ಬೆಂಗಳೂರು: ಬೆಂಗಳೂರಿನ ಸುಪ್ರಸಿದ್ದ ಲಾಲ್‌ ಬಾಗ್‌ ನ ಕೆರೆಯಲ್ಲಿ ಇನ್ನು ಮುಂದೆ ತೇಲುವ ತೋಟಗಳನ್ನು ಕಾಣಬಹುದು. ತೋಟಗಾರಿಕಾ ಇಲಾಖೆ 30 ಎಕರೆಯಲ್ಲಿ ಹರಡಿರುವ ಕೆರೆಯಲ್ಲಿ ತೇಲುವ ತೋಟಗಳನ್ನು ನಿರ್ಮಿಸಲು ಮುಂದಾಗಿದೆ. ಕೆರೆಯ ಸುತ್ತಮುತ್ತಲಿನ ಪರಿಸರವನ್ನು ಸಂರಕ್ಷಿಸಲು ಮತ್ತು ಸುಂದರಗೊಳಿಸುವ ನಿಟ್ಟಿನಲ್ಲಿ ಈ ಪ್ರಯತ್ನಕ್ಕೆ ಕೈ ಹಾಕಿದ್ದು, 22 ತೇಲುವ ತೋಟಗಳನ್ನು ನಿರ್ಮಿಸಲು ಖಾಸಗಿ ಸಂಸ್ಥೆಯೊಂದಕ್ಕೆ ವಹಿಸಲಾಗಿದೆ.

12*15 ಮತ್ತು 6*4 ಅಳತೆಯಲ್ಲಿ ತೇಲುವ ತೋಟಗಳನ್ನು ನಿರ್ಮಿಸಿ ಕನ್ನಾ ಇಂಡಿಕಾ ಗಿಡಗಳನ್ನು ನೆಡಲಾಗುತ್ತದೆ.
ಈಗಾಗಲೇ ಶೇ. 80 ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, 1 ತಿಂಗಳಲ್ಲಿ ತೇಲುವ ತೋಟಗಳು ಕೆರೆಯಲ್ಲಿ ತೇಲಲಿವೆ. ಈ ತೇಲುವ ತೋಟಗಳಲ್ಲಿ ಸಸ್ಯಗಳನ್ನು ನೆಟ್ಟು ಕೆರೆಗೆ ಬಿಡಲಾಗುತ್ತದೆ. ಕನ್ನಾ ಇಂಡಿಕಾ ಸಸ್ಯಗಳೇ ಏಕೆಂದರೆ ಈ ಸಸ್ಯಗಳು ಜಲ ಸ್ನೇಹಿ ಮತ್ತು ಅಗ್ಗದ ಬೆಲೆಗೆ ಲಭ್ಯವಾಗುತ್ತವೆ. ಒಮ್ಮೆ ನೀರಿನೊಳಗೆ ಬೇರುಗಳು ಇಳಿದರೆ ಸಸ್ಯಗಳೇ ನೀರಿನಿಂದ ನೇರವಾಗಿ ತಮಗೆ ಬೇಕಾದ ಪೌಷ್ಠಿಕಾಂಶಗಳನ್ನು ಹೀರಿಕೊಳ್ಳುತ್ತವೆ. ಈ ಸಸ್ಯಗಳು ವರ್ಷವಿಡೀ ಹೂಗಳನ್ನು ಬಿಡುತ್ತವೆ ಮತ್ತು ನೀರನ್ನು ಅತ್ಯಂತ ಸಮರ್ಥವಾಗಿ ಶುದ್ದೀಕರಿಸುವ ಗುಣವನ್ನು ಹೊಂದಿವೆ ಎಂದು ತೋಟಗಾರಿಕಾ ಇಲಾಖೆ ನಿರ್ದೇಶಕ ಎಂ. ಜಗದೀಶ್‌ ಹೇಳುತ್ತಾರೆ.

ಒಂದೊಂದು ಪ್ಯಾನೆಲ್‌ ನಲ್ಲಿ ಒಂದೊಂದು ಬಣ್ಣದ ಹೂಗಳ ಸಸಿಗಳನ್ನು ನೆಡಲಾಗುತ್ತದೆ. ಪ್ರತಿಯೊಂದು ಪ್ಯಾನೆಲ್‌ ಗೂ ಪಿವಿಸಿ ಪೈಪ್‌ ಗಳನ್ನು ಅಳವಡಿಸಲಾಗುತ್ತದೆ. ಇದರಿಂದ ನೀರಿನಲ್ಲಿ ಪಾಚಿ ಬೆಳೆಯುವುದು ಕಡಿಮೆಯಾಗುತ್ತದೆ ಮತ್ತು ಬಾತುಕೋಳಿಯಂತಹ ಪಕ್ಷಿಗಳನ್ನು ಆಕರ್ಷಿಸುತ್ತದೆ ಎನ್ನುತ್ತಾರೆ. ಇದರಿಂದ ಕೆರೆಯ ಸೌಂದರ್ಯ ಹೆಚ್ಚುತ್ತದೆ. ಒಮ್ಮೆ ಗಿಡಗಳನ್ನು ನೆಟ್ಟರೆ 3 ರಿಂದ 4 ತಿಂಗಳಲ್ಲಿ ಪೊದೆಯ ರೀತಿಯಲ್ಲಿ ಬೆಳೆಯುತ್ತವೆ. ನಂತರ ಹೂ ಬಿಡುತ್ತವೆ ಎಂದೂ ಅವರು ವಿವರಿಸಿದ್ದಾರೆ.

ಈ ಗಿಡಗಳು ಅಧಿಕ ಪ್ರಮಾಣದಲ್ಲಿ ಆಮ್ಲಜನಕವನ್ನು ಹೊರಬಿಡುತ್ತವೆ. ಮೂರು ನಾಲ್ಕು ತಿಂಗಳಿಗೊಮ್ಮೆ ಹಣ್ಣಾದ ಮತ್ತು ಉದುರಿದ ಎಲೆ ಮತ್ತು ಹೂಗಳನ್ನು ಸ್ವಚ್ಛಗೊಳಸುವ ಕೆಲಸ ಮಾತ್ರ ಮಾಡಬೇಕಾಗುತ್ತದೆ. ಪ್ರಯೋಗಾರ್ಥವಾಗಿ ಎರಡು ಮೂರು ಪ್ಯಾನೆಲ್‌ ಗಳಲ್ಲಿ ಅಲೋಕಾಸಿಯಾ ಗಿಡಗಳನ್ನು ಬೆಳೆಸಲಾಗುತ್ತದೆ ಎಂದು ಜಗದೀಶ್‌ ತಿಳಿಸಿದ್ದಾರೆ

More articles

Latest article