ಪ್ರಯಾಗ್ ರಾಜ್: ಮಹಾಕುಂಭ ಮೇಳದಲ್ಲಿ ಪುಣ್ಯಸ್ನಾನ ಮಾಡಲು ಆಗಮಿಸುತ್ತಿರುವ ಭಕ್ತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಪ್ರಯಾಗ್ ರಾಜ್ ಗೆ ಸಂಪರ್ಕಿಸುವ ಎಲ್ಲ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಬಿಹಾರದ ಸಾಸಾರಾಂ– ರೋಹ್ಟಗಿ ಜಿಲ್ಲೆಗಳ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದ್ದು, ಪ್ರಯಾಣಿಕರು ಪರದಾಡುತ್ತಿದ್ದಾರೆ. ಸುಮಾರು 45 ಕಿ.ಮೀ.ವರೆಗೂ ಸಂಚಾರ ದಟ್ಟಣೆ ಉಂಟಾಗಿದೆ ಎಂದು ಬಿಹಾರ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಉತ್ತರ ಪ್ರದೇಶ ಸರ್ಕಾರ ಪ್ರಯಾಗ್ ರಾಜ್ ಮಾರ್ಗದಲ್ಲಿ ಬೃಹತ್ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ. ಇದರಿಂದಾಗಿ ಗಡಿ ಜಿಲ್ಲೆಗಳಾದ ಸಾಸಾರಾಂ, ರೋಹ್ಟಗಿ ಜಿಲ್ಲೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಯಿತು ಎಂದು ಬಿಹಾರ ಪೊಲೀಸರು ತಿಳಿಸಿದ್ದಾರೆ.
ಕೆಲ ಭಕ್ತರು ಕಾಲ್ನಡಿಗೆಯಲ್ಲಿ ಪ್ರಯಾಗ್ ರಾಜ್ ನತ್ತ ಹೆಜ್ಜೆ ಹಾಕುತ್ತಿದ್ದರೆ ಮತ್ತೆ ಕೆಲವರು ರಸ್ತೆ ಬದಿಯಲ್ಲೇ ವಿಶ್ರಾಂಮತಿ ಪಡೆಯುತ್ತಿದ್ದಾರೆ. ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರೆ. ಪ್ರಯಾಗ್‌ರಾಜ್‌ನತ್ತ ಕೋಟ್ಯಂತರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದರಿಂದ ಸೋಮವಾರ 300 ಕಿ.ಮೀ.ವರೆಗೂ ಸಂಚಾರ ದಟ್ಟಣೆ ಉಂಟಾಗಿತ್ತು. 48 ಗಂಟೆಗಳಿಂದ ಹೆದ್ದಾರಿಯಲ್ಲಿ ಸಿಲುಕಿದ್ದೇವೆ. 50 ಕಿ.ಮೀ. ಅಂತರ ಕ್ರಮಿಸಲು 10ರಿಂದ 12 ಗಂಟೆ ಸಮಯ ಬೇಕಾಯಿತು ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ.
ಕುಂಭಮೇಳಕ್ಕೆ ತೆರಳಿದ್ದ ಭಕ್ತರ ಸಾವು:
ಕುಂಭಮೇಳದಲ್ಲಿ ಭಾಗವಹಿಸಿ ಪುಣ್ಯಸ್ನಾನ ಮಾಡಲು ಪ್ರಯಾಗ್‌ರಾಜ್‌ಗೆ ತೆರಳುತ್ತಿದ್ದ ಮೂವರು ಮಹಿಳೆಯರಿಗೆ ಅಪರಚಿತ ವಾಹನ ಡಿಕ್ಕಿಯಾಗಿ ಆ ಮೂವರೂ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಾಗನಾಥ್‌ಪುರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಗಳವಾರ ನಸುಕಿನ ಜಾವ ನಡೆದಿದೆ. ಮೃತ ಮಹಿಳೆಯರನ್ನು ಪಶ್ಚಿಮ ಬಂಗಾಳ ಮೂಲದ ಜಾಗೋರಿ ಮಹತೋ, ಕುಂತಿ ಮಹತೋ ಹಾಗೂ ಅಲ್ಪನಾ ಮಹತೋ ಎಂದು ಗುರುತಿಸಲಾಗಿದೆ.
ಈ ಮಹಿಳೆಯರು ಹೊರಟಿದ್ದ ಬಸ್ ನಾಗನಾಥ್‌ಪುರ್ ರಾಷ್ಟ್ರೀಯ ಹೆದ್ದಾರಿಯ ಪೆಟ್ರೋಲ್ ಬಂಕ್ ಬಳಿ ಕೆಲಕಾಲ ನಿಂತಿತ್ತು. ಈ ಸಂದರ್ಭದಲ್ಲಿ ಕೆಲವು ಮಹಿಳೆಯರು ಮೂತ್ರ ವಿಸರ್ಜನೆ ಮಾಡಲು ತೆರಳಿದ್ದರು. ಮೂತ್ರ ವಿಸರ್ಜನೆ ಮಾಡಿ ಬರುವಾಗ ಡಿವೈಡರ್ ಬಳಿ ಅಪರಿಚಿತ ವಾಹನ ಅವರ ಮೇಲೆ ಹರಿದಿದೆ ಎಂದು ಸ್ಥಳೀಯ ಉತ್ತರಾಂ ಪೊಲೀಸ್ ಠಾಣಾಧಿಕಾರಿ ಪಂಕಜ್ ಕುಮಾರ್ ತ್ರಿಪಾಠಿ ತಿಳಿಸಿದ್ದಾರೆ. ಮೃತರು ಪಶ್ಚಿಮ ಬಂಗಾಳದ ಪುರಾಲಿಯಾ ಎಂಬ ಗ್ರಾಮದದ್ದು, ಕುಟುಂಬ ಸಮೇತ ಕುಂಭಮೇಳದಲ್ಲಿ ಭಾಗವಹಿಸಲು ತೆರಳುತ್ತಿದ್ದರು ಎಂದು ತಿಳಿಸಿದ್ದಾರೆ.