ಲಖನೌ: ಮಹಾಕುಂಭ ಮೇಳದಲ್ಲಿ ಕಾಲ್ತುಳಿತ ಸಂಭವಿಸಿ 30 ಮಂದಿ ಅಸು ನೀಗಿದ ಬಳಿಕ ಎಚ್ಚೆತ್ತುಕೊಂಡ ಉತ್ತರಪ್ರದೇಶ ಸರ್ಕಾರ ಕುಂಭಮೇಳ ಯಾತ್ರಾರ್ಥಿಗಳಿಗೆ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ. ಪ್ರಯಾಗ್ ರಾಜ್ ಮಾತ್ರವಲ್ಲದೆ ಹತ್ತಿರದ ವಾರಾಣಸಿ, ಚಿತ್ರಕೂಟ, ಅಯೋಧ್ಯೆಯಲ್ಲೂ ಭಕ್ತ ಸಾಗರ ಹರಿದು ಬರುತ್ತಿರುವ ಕಾರಣ ಯಾವುದೇ ಅನಾಹುತ ನಡೆಯದಂತೆ ತಡೆಯಲು ಅಧಿಕಾರಿಗಳು ಎಚ್ಚರಿಕೆವಹಿಸಿದ್ದಾರೆ.
ಹೊಸ ಮಾರ್ಗಸೂಚಿಗಳು: ಮಹಾಕುಂಭ ಮೇಳ ನಡೆಯುವಲ್ಲಿ ಆಂಬುಲೆನ್ಸ್ ಹೊರತುಪಡಿಸಿ ಉಳಿದ ಎಲ್ಲಾ ರೀತಿಯ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದ್ದು, ‘ನೋ ವೇಹಿಕಲ್ ಝೋನ್’ ಎಂದು ಘೋಷಿಸಲಾಗಿದೆ. ಎಲ್ಲಾ ವಿವಿಐಪಿ ಪಾಸ್‌ಗಳನ್ನು ರದ್ದುಪಡಿಸಲಾಗಿದೆ. ವಾಹನಗಳ ಸಂಚಾರಕ್ಕೆ ‘ಒನ್ ವೇ’ ನಿಯಮ ಜಾರಿಗೊಳಿಸಲಾಗಿದ್ದು, ವಾಹನಗಳ ಪ್ರವೇಶ ಹಾಗೂ ನಿರ್ಗಮನಕ್ಕೆ ಪ್ರತ್ಯೇಕ ದಾರಿ ಕಲ್ಪಿಸಲಾಗಿದೆ. ವಿವಿಧ ಪ್ರದೇಶಗಳಿಂದ ಪ್ರಯಾಗ್‌ರಾಜ್‌ಗೆ ಬರುವ ಗಡಿಯಲ್ಲೇ ವಾಹನಗಳನ್ನು ತಡೆಯಲಾಗುತ್ತಿದೆ. ಈ ಎಲ್ಲಾ ಭದ್ರತಾ ಮಾರ್ಗಸೂಚಿಗಳು, ಫೆ. 3ರಂದು ವಸಂತ ಪಂಚಮಿಯ ಮೂರನೇ ಅಮೃತ ಸ್ನಾನದವರೆಗೂ ಜಾರಿಯಲ್ಲಿರಲಿದೆ. ಜನರ ನಿಯಂತ್ರಣಕ್ಕೆ ಹೆಚ್ಚುವರಿ ಅಧಿಕಾರಿಗಳನ್ನು ಸರ್ಕಾರ ನೇಮಿಸಲಾಗಿದೆ. ರಾಜ್ಯ ಸರ್ಕಾರ ಈಗಾಗಲೇ ಮೇಳದಿಂದ ತೆರಳುವವರಿಗೆ ವಿವಿಧ ಪ್ರದೇಶಗಳಿಗೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಿದೆ. ಜೊತೆಗೆ ವಾರಾಣಸಿಯ ರೈಲು ನಿಲ್ದಾಣಗಳಲ್ಲಿ ಜನರಿಗೆ ರಾತ್ರಿ ಉಳಿಯಲು ವ್ಯವಸ್ಥೆ ಮಾಡಲಾಗಿದೆ. ಚಿತ್ರಕೂಟದಿಂದ ಆಗಮಿಸುವ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.