ನವದೆಹಲಿ, ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆದ ಮಹಾಕುಂಭ ಮೇಳಕ್ಕೆ ಹೋಗಿದ್ದ ಸುಮಾರು 1,000 ಹಿಂದೂ ಭಕ್ತರು ಕಾಣೆಯಾಗಿದ್ದಾರೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಹೇಳಿಕೆ ನೀಡಿದಾಗ ಈ ಜನರನ್ನು ಹುಡುಕುವ ಬಗ್ಗೆ ಮಾತನಾಡಬೇಕಿತ್ತಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.
ಮಹಾಕುಂಭ ಮೇಳವು ದೇಶದಲ್ಲಿ ಏಕತೆಯ ಮನೋಭಾವವನ್ನು ಬಲಪಡಿಸಿತು ಮತ್ತು ಇಷ್ಟೊಂದು ದೊಡ್ಡ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸುವ ಭಾರತದ ಸಾಮರ್ಥ್ಯವನ್ನು ಪ್ರಶ್ನಿಸುವವರಿಗೆ ಸೂಕ್ತ ಉತ್ತರವನ್ನು ನೀಡಿತು ಎಂದು ಪ್ರಧಾನಿ ಮೋದಿ ಹೇಳಿದ ಒಂದು ದಿನದ ನಂತರ ಯಾದವ್ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
ಲೋಕಸಭೆಯಲ್ಲಿ ಹೇಳಿಕೆ ನೀಡಿದ್ದ ಮೋದಿ, ಮಹಾಕುಂಭ ಮೇಳದ ಯಶಸ್ಸು ಸರ್ಕಾರ ಮತ್ತು ಸಮಾಜದ ಅಸಂಖ್ಯಾತ ಜನರ ಕೊಡುಗೆಗಳ ಪರಿಣಾಮವಾಗಿದೆ ಎಂದು ಹೇಳಿದ್ದರು. ಮಹಾಕುಂಭಕ್ಕಾಗಿ ಭಾರತ ಸರ್ಕಾರವು ನಿಗದಿಪಡಿಸಿದ ಬಜೆಟ್ ಎಷ್ಟು ಎಂಬುದು ದೊಡ್ಡ ಪ್ರಶ್ನೆಯಾಗಿದೆ ಎಂದು ಅಖಿಲೇಶ್ ಹೇಳಿದ್ದಾರೆ.
ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ವಾಹನಗಳನ್ನು ಎಲ್ಲಿ ನಿಲ್ಲಿಸಬೇಕೆಂದು ನಿರ್ಧರಿಸುತ್ತಿದ್ದರು ಎಂಬುದು ನಿಮಗೆ ತಿಳಿದಿದೆಯೇ? ಐಪಿಎಸ್ ಅಧಿಕಾರಿಗಳು ಭಕ್ತರು ಸ್ನಾನ ಮಾಡಲು ಹೋಗುವುದನ್ನು ತಡೆಯುತ್ತಿದ್ದರು. ಅವರಿಗೆ ಅನುಕೂಲ ಮಾಡಿಕೊಡುವ ಸಾಮರ್ಥ್ಯ ನಮ್ಮಲ್ಲಿ ಇಲ್ಲ ಎಂದು ಹೇಳುತ್ತಿದ್ದರು. ಮಹಾಕುಂಭದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ಕುಟುಂಬಗಳಿಗೆ ಬಿಜೆಪಿ ಮತ್ತು ಅದರ ಜನರು ಸಹಾಯ ಮಾಡಬೇಕು ಎಂದು ಎಂದು ಅಖಿಲೇಶ್ ಸಂಸತ್ ಭವನದ ಆವರಣದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಕುಂಭಮೇಳಕ್ಕೆ ಬಂದಿದ್ದ 1000 ಹಿಂದೂಗಳು ಕಾಣೆಯಾಗಿದ್ದಾರೆ. ಅವರು ಎಲ್ಲಿಹೋದರು ಎಂಬ ಬಗ್ಗೆ ಮಾಹಿತಿ ಇಲ್ಲ. ಕಾಣೆಯಾದ 1000 ಜನರ ಬಗ್ಗೆ ಬಿಜೆಪಿ ಮಾಹಿತಿ ನೀಡಬೇಕು. ಸರ್ಕಾರವು ಕಾಣೆಯಾದ ಹಿಂದೂ ಸಹೋದರರನ್ನು ಹುಡುಕಿ ಅವರನ್ನು ಅವರ ಕುಟುಂಬಗಳೊಂದಿಗೆ ಸೇರಿಸಬೇಕು. ಜನರು ಕಾಣೆಯಾದವರ ಪೋಸ್ಟರ್‌ಗಳನ್ನು ಹಾಕುತ್ತಿದ್ದಾರೆ, ಆದರೆ, ಸರ್ಕಾರ ಅವುಗಳನ್ನು ತೆಗೆದುಹಾಕುತ್ತಿದೆ ಎಂದು ಅಖಿಲೇಶ್ ಆರೋಪಿಸಿದ್ದಾರೆ.