ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಒಂದು ಪ್ರತ್ಯೇಕ ರೂಮ್ ಮಾಡಿ, 47 ಜನರ ಪೋನ್ ಕದ್ದಾಲಿಕೆ ಮಾಡಿಸಿದ್ದಾರೆ. ಆ 47 ಜನ ಯಾರು ಕುಮಾರಸ್ವಾಮಿ ಹೇಳಲಿ, ಇಲ್ಲ ಅಂದರೆ ನಾವೇ ಹೇಳುತ್ತೇವೆ. ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿಯವರ ಪೋನ್ ಕೂಡ ಕದ್ದಾಲಿಕೆ ಮಾಡಿದ್ದಾರೆ. ಒಂದು ವೇಳೆ ಮಾಡಿಸಿಲ್ಲ ಎಂದರೆ ಕಾಲಭೈರವೇಶ್ವರನ ಮೇಲೆ ಆಣೆ ಮಾಡಿ ಹೇಳಲಿ. ನಾವು ತಲೆ ಬಾಗುತ್ತೇವೆ ಎಂದು ಮಾಗಡಿ ಶಾಸಕ ಬಾಲಕೃಷ್ಣ ಸವಾಲೆಸೆದಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಪೋನ್ ಕದ್ದಾಲಿಕೆ ಮಾಡುವುದು ಕಾನೂನು ಬಾಹಿರ. ಪೊಲೀಸ್ ಇಲಾಖೆಗೆ ಮಾತ್ರ ಪೋನ್ ಟ್ಯಾಪ್ ಮಾಡಲು ಅವಕಾಶ ಇರುತ್ತದೆ. ಕಳ್ಳರ ಚಟುವಟಿಕೆಗಳನ್ನ ನೋಡಲು ಮಾಡಿಸುತ್ತಾರೆ. ಯಾರ ಕಡೆಯಿಂದ ಕದ್ದಾಲಿಕೆ ಮಾಡಿಸಿದ್ದಾರೆ, ಎಷ್ಟು ಜನರ ಪೋನ್ ಕದ್ದಾಲಿಕೆ ಆಗಿದೆ ಎಂದು ನನಗೆ ಗೊತ್ತಿದೆ, ಕುಮಾರಸ್ವಾಮಿಯವರು ಸತ್ಯ ನುಡಿಯಲಿ ಎಂದು ಹೇಳಿದರು.
ನಮ್ಮದು ಕುಟುಂಬದ ಪಕ್ಷ ಅಲ್ಲ, ರಾಷ್ಟ್ರೀಯ ಪಕ್ಷ. ನಾಯಕತ್ವ ತೀರ್ಮಾನ ಮಾಡುವುದು ಹೈಕಮಾಂಡ್ ಮತ್ತು ಶಾಸಕರು. ಯಾರೋ ನಾಲ್ಕು ಜನ ಕುಟುಂಬದ ಸದಸ್ಯರಲ್ಲ. ಡಿ.ಕೆ. ಶಿವಕುಮಾರ್ ಸಿಎಂ ಆಗುವುದನ್ನು ಯಾರಾದರೂ ತಪ್ಪಿಸಿದರೆ ಅದು ಕುಮಾರಸ್ವಾಮಿಯವರ ಕುಟುಂಬವೇ.
ವಾಮ ಮಾರ್ಗ ಸೇರಿದಂತೆ ಯಾವುದಾದರೂ ದಾರಿಯಿಂದ ತಪ್ಪಿಸುವ ಇಂಥ ಪ್ರಯತ್ನ ಕುಮಾರಸ್ವಾಮಿ ಕುಟುಂಬ ಮಾಡುತ್ತದೆ. ಬೇರೆಯವರ ಕುಟುಂಬ ಡಿಕೆಶಿ ಅವರನ್ನು ಒಪ್ಪುತ್ತಾರೆ. ವಿರೋಧ ಮಾಡುವುದು ಕುಮಾರಸ್ವಾಮಿ ಕುಟುಂಬ ಮಾತ್ರ ಎಂದು ಬಾಲಕೃಷ್ಣ ಕಿಡಿಕಾರಿದರು.
ಬಾಂಬೆಗೆ ಹೋದಾಗ ಡಿಕೆ ಶಿವಕುಮಾರ್ ಅವರಿಗೆ ನೀವೇ ಸಿಎಂ ಆಗಿ ನಾವು ಮತ್ತೆ ವಾಪಸ್ ಕಾಂಗ್ರೆಸ್ ಗೆ ಬರುತ್ತೇವೆ ಎಂದು ಹೇಳಿದ್ದರು. ಕುಮಾರಸ್ವಾಮಿ ಅವರನ್ನ ಸಿಎಂ ಮಾಡಲಾಗಿದೆ ಹಾಗಾಗಿ ಬೇಡ ಎಂದು ಡಿ.ಕೆ. ಶಿವಕುಮಾರ್ ಅವರು ಹೇಳಿದ್ದರು. ಆದರೆ ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಆಗುವ ಅವಕಾಶ ದೊರೆತರೆ ಕುಮಾರಸ್ವಾಮಿ, ದೇವೇಗೌಡರ ಕುಟುಂಬವೇ ತಪ್ಪಿಸುವ ಪ್ರಯತ್ನ ಮಾಡುತ್ತದೆ. ಡಿಕೆ ಶಿವಕುಮಾರ್ ಆಗಬಾರದು. ನಮ್ಮ ಸಮಾಜದಲ್ಲಿ ಬೇರೆ ಯಾರು ಸಿಎಂ ಆಗಬಾರದು ಎಂಬ ಮನಸ್ಥಿತಿ ಆ ಕುಟುಂಬ ಹೊಂದಿದೆ ಎಂದು ಅವರು ನುಡಿದರು.
ಕುಮಾರಸ್ವಾಮಿಯವರು ಸಿಎಂ ಆಗ್ತಾರೆ ಎಂದು ದೇವೇಗೌಡರನ್ನು, ಕುಮಾರಸ್ವಾಮಿ ಅವರನ್ನು ಒಕ್ಕಲಿಗರು ಬೆಂಬಲಿಸುತ್ತಾ ಬಂದಿದ್ದರು. ಈಗ ಜೆಡಿಎಸ್ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ. ಬಿಜೆಪಿಯವರು ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲ್ಲ ವಿಜಯೇಂದ್ರ ಅವರು ರೇಸ್ ಅಲ್ಲಿ ಇದ್ದಾರೆ.
ಒಕ್ಕಲಿಗರು ಕಾಂಗ್ರೆಸ್ ಪರವಾಗಿ ನಿಂತಿದ್ದಾರೆ. ನಾವು ಸಹ ಡಿಕೆ ಶಿವಕುಮಾರ್ ಅವರನ್ನು ಒಂದು ದಿನ ಸಿಎಂ ಮಾಡಬೇಕು ಎಂದು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಕುಮಾರಸ್ವಾಮಿ ಅವರಿಗೆ ಅವಕಾಶ ಇಲ್ಲ, ಡಿಕೆಶಿ ಅವರಿಗೆ ಇದೆ. ಜನಾಂಗ ಬೆಂಬಲಿಸಿದರೆ ಖಂಡಿತ ನಮ್ಮ ನಾಯಕರಿಗೆ ಉನ್ನತ ಸ್ಥಾನ ಸಿಗುವುದರಲ್ಲಿ ಅನುಮಾನವಿಲ್ಲ ಎಂದಿದ್ದಾರೆ.
ಒಕ್ಕಲಿಗ ಸಮುದಾಯ ಕೈ ಹಿಡಿದಿದ್ರೆ ಡಿಕೆಶಿ ಸಿಎಂ ಆಗುತ್ತಾರಾ ಎಂಬ ಪ್ರಶ್ನೆಗೆ ಖಂಡಿತ ಎಂದ ಬಾಲಕೃಷ್ಣ, ಜೆಡಿಎಸ್ ಗೆ ಅಸ್ತಿತ್ವ ಇಲ್ಲ, ಡಿಕೆಶಿ ಅವರೇ ಒಕ್ಕಲಿಗ ನಾಯಕರು. ಸಿಎಂ ಸಿದ್ದರಾಮಯ್ಯ ಅವರಿಗೆ ಕುರುಬ ಸೇರಿದಂತೆ ಅಹಿಂದದವರು ಕೈ ಹಿಡಿದಿದ್ದಾರೆ. ಕಾಂಗ್ರೆಸ್ ನಲ್ಲಿ ಡಿ.ಕೆ. ಶಿವಕುಮಾರ್ ಅವರಿಗೆ ಅವಕಾಶ ಕೊಡುವ ಬಗ್ಗೆ ಚರ್ಚೆಯಿದೆ ಎಂದಿದ್ದಾರೆ.
ಸರ್ಕಾರ ಪತನದ ವಿಚಾರವಾಗಿ ಮಾತನಾಡಿ, ಎಲ್ಲರೂ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ ನಾವು ನಮ್ಮ ಪ್ರಯತ್ನವನ್ನು ಮಾಡುತ್ತೇವೆ. ಅಧಿಕಾರಕ್ಕೆ ಬಂದಾಗಿಂದ ಇವತ್ತು ಹೋಗುತ್ತೆ ನಾಳೆ ಹೋಗುತ್ತೆ ಎಂದು ಹೇಳುತ್ತಲೇ ಇದ್ದಾರೆ. ಈ ಹಿಂದೆ ಜೆ.ಎಚ್ ಪಟೇಲ್ ಒಂದು ಕಥೆಯನ್ನ ಹೇಳಿದ್ರು. ಒಂದು ದೊಡ್ಡ ಗೂಳಿ ಹೋಗ್ತಾ ಇರುತ್ತೆ, ಹಿಂದೆ ನಾಯಿಗಳು ಬೊಗಳುತ್ತಾ ಹೋಗ್ತಾ ಇರುತ್ತವೆ. ಬೀಳ್ತದೆ ಬೀಳ್ತದೆ ಎಂದು ಕಾಯ್ಕೊಂಡು ನಾಯಿಗಳು ಹೋಗ್ತಾ ಇರ್ತಾವೆ. ಅದು ಬೀಳಲಿಲ್ಲ ನಾಯಿಗಳಿಗೆ ಸಿಗಲಿಲ್ಲ. ಆ ರೀತಿ ಪ್ರಯತ್ನಗಳು ಮಾಡ್ತಾ ಇರ್ತಾರೆ. ಆ ಪ್ರಯತ್ನ ಫಲಿಸಲ್ಲ ನಮ್ಮ ಸರ್ಕಾರ ಸುಭದ್ರವಾಗಿರುತ್ತದೆ ಎಂದಿದ್ದಾರೆ.