ಬೆಂಗಳೂರು: ಪ್ರಜ್ವಲನ ಕಾಮಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಪಾಪದ ಕೊಡ ತುಂಬಿತ್ತು’ ಎಂಬ ಹೇಳಿಕೆ ನೀಡಿದ್ದ ಹಾಸನದ ಜನಪ್ರಿಯ ಜಿಲ್ಲಾಧಿಕಾರಿ ಸತ್ಯಭಾಮಾ ಅವರ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಾಲಿಗೆ ಹರಿಬಿಟ್ಟು ಮಾತಾಡಿದ್ದಾರೆ.
ಜೆಡಿಎಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಅವರು, ಕೋಲಾರದಲ್ಲಿದ್ದಾಗ ಗಂಡ- ಹೆಂಡತಿ ಏನು ಮಾಡಿದ್ದೀರಾ ಅಂತ ನನಗೆ ಗೊತ್ತಿದೆ. ಯಾವುದೋ ಸಮಿತಿ ಅವರ ಮನವಿ ಪಡೆದು ವ್ಯಂಗ್ಯ ಮಾಡ್ತೀರಾ ಡಿಸಿ ಅವ್ರೇ. ನಿಮ್ಮ ಯೋಗ್ಯತೆ ನನಗೆ ಚೆನ್ನಾಗಿ ಗೊತ್ತು ಎಂದು ಒಬ್ಬ ಮಹಿಳಾ ಅಧಿಕಾರಿಯ ಯೋಗ್ಯತೆಯ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡಿದ್ದಾರೆ.
ಹಲವು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹಾಗೂ ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸುವಂತೆ ಆಗ್ರಹಿಸಿ ಹಾಸನದಲ್ಲಿ ಜನಪರ ಸಂಘಟನೆಗಳು ಪ್ರತಿಭಟನೆ ನಡೆಸಿದ ನಂತರ ಕಾರ್ಯಕರ್ತರಿಂದ ಸತ್ಯಭಾಮಾ ಅವರು ಮನವಿ ಪತ್ರ ಸ್ವೀಕರಿಸಿದ್ದರು.
ಆ ಸಂದರ್ಭದಲ್ಲಿ ಅವರು ಭಗವಾನ್ ಕೃಷ್ಣ ಶಿಶುಪಾಲನಿಗೆ 100 ತಪ್ಪುಗಳನ್ನು ಮಾಡಲು ಅವಕಾಶ ಮಾಡಿಕೊಟ್ಟನು, ಆದರೆ ಅವನ ‘ಪಾಪಗಳ ಕೊಡ’ ತುಂಬಿದ್ದರಿಂದ ಅವನನ್ನು ಶಿಕ್ಷಿಸಿದನು ಎಂದು ಮಾರ್ಮಿಕವಾಗಿ ನುಡಿದಿದ್ದರು. ಜಿಲ್ಲಾಧಿಕಾರಿಗಳ ಈ ಮಾತುಗಳಿಗೆ ರಾಜ್ಯಾದ್ಯಂತ ವ್ಯಾಪಕ ಬೆಂಬಲ, ಮೆಚ್ಚುಗೆ ವ್ಯಕ್ತವಾಗಿತ್ತು.
ನಂತರ ಈ ಹೇಳಿಕೆ ಕುರಿತು ಕೆಲ ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ ನಾನು ಮೊದಲು ಒಬ್ಬ ಹೆಣ್ಣುಮಗಳು, ನಂತರ ಅಧಿಕಾರಿ ಎಂದು ಸತ್ಯಭಾಮಾ ಹೇಳಿದ್ದರು.
ಇಡೀ ದೇಶದ ಅಂತಃಸಾಕ್ಷಿಯನ್ನೇ ಕಲಕಿರುವ ಪ್ರಜ್ವಲ್ ಕಾಮಕಾಂಡದ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದಲ್ಲದೆ, ಎಲ್ಲೆಡೆ ಪ್ರತಿಭಟನೆಗಳು ನಡೆದಿದ್ದವು.
ಹೆಣ್ಣುಮಕ್ಕಳ ಘನತೆಯ ರಕ್ಷಣೆ ಕುರಿತು ಮಾತನಾಡಿದ್ದ ಮಹಿಳಾ ಅಧಿಕಾರಿಯ ಯೋಗ್ಯತೆ ಬಗ್ಗೆ ಮಾಜಿ ಮುಖ್ಯಮಂತ್ರಿಯೊಬ್ಬರು ಪ್ರಶ್ನಿಸುತ್ತಿರುವುದು ವಿವಾದಕ್ಕೆ ಕಾರಣವಾಗಿದೆ. ತೆನೆ ಹೊತ್ತ ಮಹಿಳೆಯನ್ನೇ ಚಿಹ್ನೆಯಾಗಿಸಿಕೊಂಡಿರುವ ಜೆಡಿಎಸ್ ಪಕ್ಷ ಮಹಿಳೆಯರಿಗೆ ಕೊಡುವ ಗೌರವ ಇದೇನಾ ಎಂಬ ಪ್ರಶ್ನೆಯೂ ಉದ್ಭವಿಸಿದೆ.