ಸ್ಕೂಟರ್ ಗೆ ಕೆ.ಎಸ್.ಆರ್.ಟಿ.ಸಿ ಬಸ್ ಡಿಕ್ಕಿ; ಇಬ್ಬರು ಮಕ್ಕಳು ಸಾವು

Most read

ರಾಮನಗರ: ರಾಮನಗರ ತಾಲ್ಲೂಕಿನ ರಾಮನಗರ-ಕನಕಪುರ ಮುಖ್ಯ ರಸ್ತೆಯ ಅಚ್ಚಲು ಕ್ರಾಸ್ ನಲ್ಲಿ ಇಂದು ಬೆಳಿಗ್ಗೆ ಕೆ.ಎಸ್.ಆರ್.ಟಿ.ಸಿ ಬಸ್ ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ‌ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ. ಪ್ರದೀಪ್ (5) ಮತ್ತು ಭವ್ಯ (3) ಮೃತ ಮಕ್ಕಳು. ಇಬ್ಬರೂ ತಮಿಳುನಾಡಿನ ಡೆಂಕಣಿಕೋಟೆಯ ಬೋಕಸಂದ್ರ ಗ್ರಾಮದ ಭೈರಪ್ಪ ಅವರ ಮಕ್ಕಳು ಎಂದು ತಿಳಿದು ಬಂದಿದೆ.

ಈ ಮಕ್ಕಳು ತಮ್ಮ ಸಂಬಂಧಿ ಅಚ್ಚಲು ದೊಡ್ಡಿ ಕಾಲೊನಿಯ ಗೋವಿಂದ ಅವರ ಮನೆಗೆ ಬಂದಿದ್ದರು. ರಾಮನಗರ ತಾಲ್ಲೂಕಿನ ಲಕ್ಕಪ್ಪನಹಳ್ಳಿಯ ಕೋಳಿ ಫಾರಂನಲ್ಲಿ‌ ಕೆಲಸ ಮಾಡುತ್ತಿದ್ದ ಗೋವಿಂದ ಅವರು ಬೆಳಿಗ್ಗೆ 9 ಗಂಟೆ ಸುಮಾರಿಗೆ ಮಕ್ಕಳು ಹಾಗೂ ಸ್ನೇಹಿತ ಮಧು ಅವರನ್ನು ಕರೆದುಕೊಂಡು ತಮ್ಮ ಟಿವಿಎಸ್ ಎಕ್ಸೆಲ್ ಸ್ಕೂಟರ್ ನಲ್ಲಿ ಫಾರಂಗೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಮಾರ್ಗಮಧ್ಯೆ ಗ್ರಾಮದ ತಿರುವಿನಲ್ಲಿ ಎದುರಿಗೆ ವೇಗವಾಗಿ ಬಂದ ಕನಕಪುರ ಕಡೆಗೆ ಹೊರಟಿದ್ದ ಬಸ್ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಮುಂಭಾಗದಲ್ಲಿ ಕುಳಿತಿದ್ದ ಮಕ್ಕಳಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಹೇಳಿದ್ದಾರೆ.

ಘಟನೆಯಲ್ಲಿ ಮಧು ಅವರಿಗೆ ಗಂಭೀರವಾಗಿ ಗಾಯಗೊಂಡಿದ್ದು, ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಪ್ರಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಮಂಡ್ಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಗೋವಿಂದ ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಕ್ಕಳ ಶವಗಳನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿ, ಅವರ ಕುಟುಂಬದವರಿಗೆ ಮಾಹಿತಿ ನೀಡಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಶವಗಳನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗುವುದು. ಘಟನೆಗೆ ಸಂಬಂಧಿಸಿದಂತೆ ಬಸ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಬಸ್‌ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

More articles

Latest article