ಕೌಟುಂಬಿಕ ಕಲಹ; ಕೆಎಸ್ ಡಿಎಲ್‌ ಉದ್ಯೋಗಿ ಆತ್ಮಹತ್ಯೆ

Most read



ಬೆಂಗಳೂರು: ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್‌ನ(ಕೆಎಸ್‌ಡಿಎಲ್‌) ಮಾರುಕಟ್ಟೆ ವಿಭಾಗದ ಅಧಿಕಾರಿಯೊಬ್ಬರು ಕೌಟುಂಬಿಕ ಕಲಹದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 40 ವರ್ಷದ ಅಮೃತ್ ಶಿರೂರ್ ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ. ಕೌಟುಂಬಿಕ ಕಲಹದಿಂದ ಬೇಸತ್ತು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ ಮೂಲದ ಅಮೃತ್ ಅವರು ಕೆಎಸ್‌ಡಿಎಲ್‌ನಲ್ಲಿ ಮಾರುಕಟ್ಟೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಮಹಾಲಕ್ಷ್ಮಿ ಲೇ ಔಟ್‌ನ ಮುನೇಶ್ವರ ಬ್ಲಾಕ್‌ನ 4ನೇ ಮುಖ್ಯರಸ್ತೆಯ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಡಿ.28ರಂದು ಆತ್ಮಹತ್ಯೆ ಮಾಡಿಕೊಂಡಿದ್ದು,  ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.  ತಮ್ಮ ಮನೆಯಲ್ಲಿ ಬಾಡಿಗೆಗೆ ಇದ್ದ ಅಮೃತ್ ಅವರು ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮನೆ ಮಾಲೀಕರು ದೂರು ನೀಡಿದ್ದರು. ಬಿಎನ್ಎಸ್ಎಸ್ ಕಲಂ 194 ಅಡಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಹತ್ತು ವರ್ಷದಿಂದ ಕೆಎಸ್‌ಡಿಎಲ್‌ನಲ್ಲಿ ಅಮೃತ್ ಅವರು ಕೆಲಸ ಮಾಡುತ್ತಿದ್ದರು. ಮೊದಲ ಪತ್ನಿಗೆ ಡೈವೋರ್ಸ್ ನೀಡಿದ್ದ ಅವರು ಎರಡನೇ ವಿವಾಹ ಮಾಡಿಕೊಂಡಿದ್ದರು. ಆದರೆ ಈ ವಿವಾಹದಿಂದಲೂ ಅವರು ಬದುಕಿನಲ್ಲಿ ನೆಮ್ಮದಿ ಕಂಡುಕೊಂಡಿರಲಿಲ್ಲ. ಆದ್ದರಿಂದ ಕೌಟುಂಬಿಕ ಕಲಹದಿಂದ ಬೇಸತ್ತು, ಎರಡನೇ ಪತ್ನಿಗೂ ವಿಚ್ಛೇದನ ನೀಡಲು ಮುಂದಾಗಿದ್ದರು. ಡೈವೋರ್ಸ್‌ ಕುರಿತು ವಿಚಾರಣೆ ನಡೆಯುತ್ತಿರುವಾಗಲೇ ಆತ್ಮಹತ್ಯೆಗ ಶರಣಾಗಿದ್ದಾರೆ.

ಇವರು  ಬಾಡಿಗೆ ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದು ಮಾನಸಿಕವಾಗಿ ಜರ್ಝರಿತರಾಗಿದ್ದರು ಎಂದು ತಿಳಿದು ಬಂದಿದೆ. ಸ್ಥಳದಲ್ಲಿ ಡೆತ್‌ ನೋಟ್‌ ಲಭ್ಯವಾಗಿದೆ. ಕೈಯಲ್ಲಿ ಡೆತ್‌ ನೋಟ್‌ ಹಿಡಿದುಕೊಂಡೇ ಅವರು ಆತ್ಮಹತ್ಯೆಗ ಶರಣಾಗಿದ್ದಾರೆ. ಪೋಷಕರಿಗೆ ಒಳ್ಳೆಯ ಮಗನಾಗಲಿಲ್ಲ. ಹೆಂಡತಿಗೆ ಒಳ್ಳೆಯ ಗಂಡನಾಗಲಿಲ್ಲ. ನನ್ನ ಸಾವಿಗೆ ನಾನೇ ಕಾರಣ ಎಂದು ಮರಣ ಪತ್ರದಲ್ಲಿ ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಕುರಿತು ತನಿಖೆ ನಡೆಯುತ್ತಿದೆ.

More articles

Latest article