ಕೊಡಗಿನಲ್ಲಿನ ಭಾರೀ ಮಳೆಯಿಂದಾಗಿ ಈಗಾಗಲೇ ಬಹುತೇಕ ತುಂಬಿರುವ ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯ ಹಾಗೂ ಮೈಸೂರು ಜಿಲ್ಲೆಯ ಕಬಿನಿ ಜಲಾಶಯ ಭರ್ತಿಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 27ರ ಶನಿವಾರದಂದು ಬಾಗಿನ ಅರ್ಪಣೆ ಮಾಡುವ ಕಾರ್ಯಕ್ರಮಗಳು ನಿಗದಿಯಾಗಿವೆ. ಕೃಷ್ಣರಾಜ ಸಾಗರದ ಹಿನ್ನೆಲೆಯಲ್ಲಿ ಕಾವೇರಿ ನದಿಗೆ ವಾರಣಾಸಿ ಗಂಗಾರತಿ ಮಾದರಿಯಲ್ಲಿಯೇ ಕಾವೇರಿ ಆರತಿ ಮಾಡಲು ಕರ್ನಾಟಕ ಸರ್ಕಾರ ಚಿಂತನೆ ನಡೆಸುತ್ತಿದ್ದು, ಮುಖ್ಯಮಂತ್ರಿಗಳು ಇದನ್ನು ಪ್ರಕಟಿಸುವ ಸಾಧ್ಯತೆಯಿದೆ.
ಈ ವೇಳೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ರೈತರ ಜೀವನಾಡಿಯಾಗಿರುವ ಕಾವೇರಿ ತಾಯಿಗೆ ಪುಣ್ಯ ಕ್ಷೇತ್ರ ವಾರಣಾಸಿಯಲ್ಲಿ ಮಾಡುವ ಗಂಗಾರತಿ ಮಾದರಿಯ ರೀತಿ ಕಾವೇರಿ ಆರತಿ ಮಾಡಲು ಚಿಂತಿಸಲಾಗುತ್ತಿದೆ ಎಂದು ತಿಳಿಸಿದರು.
ಕಾವೇರಿ ಆರತಿಯನ್ನು ಪ್ರಾರಂಭಿಸಲು ಮಂಡ್ಯ ಹಾಗೂ ಕೊಡಗು ಜಿಲ್ಲೆಯ ಸ್ಥಳೀಯ ಶಾಸಕರು ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳ ತಂಡ ರಚಿಸಿ ಕಾವೇರಿ ಆರತಿ ಪ್ರಾರಂಭಿಸಲು ಒಂದು ತಿಂಗಳೊಳಗೆ ವರದಿ ನೀಡಲು ತಿಳಿಸಲಾಗುವುದು ಎಂದರು.
ಹಿಂದಿನ ವರ್ಷ ಬರ ಹಾಗೂ ಮಳೆ ಕೊರತೆಯಿಂದ ಜಲಾಶಯ ತುಂಬಿರಲಿಲ್ಲ, ಈ ಕಾರಣದಿಂದಾಗಿ ಬಾಗಿನ ಅರ್ಪಣೆಯಾಗಿರಲಿಲ್ಲ.
1657 ಕೆರೆಗಳನ್ನು ತುಂಬಿಸಲು ಕ್ರಮ
ಈ ಬಾರಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮವಾಗಿ ಮಳೆಯಾಗುತ್ತಿದ್ದು, ಕೆ.ಆರ್.ಎಸ್. ಜಲಾಶಯ ಭರ್ತಿಯಾಗುತ್ತಿದೆ. ಜಲಾಶಯದಿಂದ ನೀರು ಬಿಡುಗಡೆ ಮಾಡಿ ಅಧಿಕಾರಿಗಳಿಗೆ ಸೂಚನೆ ನೀಡಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಬರುವ 1657 ಕೆರೆಗಳನ್ನು ತುಂಬಿಸಲಾಗುವುದು ಎಂದು ಡಿಕೆಶಿ ಹೇಳಿದರು.