ವೇಮಗಲ್ (ಕೋಲಾರ): ಇತ್ತೀಚೆಗಷ್ಟೇ ಮುಕ್ತಾಯವಾದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ, ಇನ್ವೆಸ್ಟ್ ಕರ್ನಾಟಕ-25ರ ಒಟ್ಟಾರೆ 10.27 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಯ ಭಾಗವಾಗಿದ್ದ ರೂ. 315 ಕೋಟಿ ರೂ.ಗಳ ಜರ್ಮನಿ ಮೂಲದ ಕ್ರೋನ್ಸ್ ಕಂಪನಿಯ ಬಾಟ್ಲಿಂಗ್ ಯಂತ್ರಗಳ ಉತ್ಪಾದನಾ ಘಟಕ ನಿರ್ಮಾಣದ ಅನುಷ್ಠಾನ ಗುರುವಾರ ಆರಂಭಗೊಂಡಿದೆ. ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿ ಕಂಪನಿ ನಿರ್ಮಿಸಲಿರುವ ಬಾಟ್ಲಿಂಗ್ ಯಂತ್ರಗಳ ಉತ್ಪಾದನಾ ಘಟಕಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಭೂಮಿಪೂಜೆ ನೆರವೇರಿಸುವುದರೊಂದಿಗೆ ಈ ಕಾರ್ಯಯೋಜನೆಗೆ ಚಾಲನೆ ನೀಡಲಾಯಿತು.
ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದ ವೇಳೆ ಈ ಒಪ್ಪಂದ ಏರ್ಪಡುವ ಮುನ್ನ, ಸಚಿವರ ನಿಯೋಗವು ಕಳೆದ ಡಿಸೆಂಬರ್ ನಲ್ಲಿ ಜರ್ಮನಿ ರೋಡ್ ಷೋ ವೇಳೆ ಕಂಪನಿಯ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿತ್ತು. ಆ ಸಂದರ್ಭದಲ್ಲಿ ನ್ಯೂಟ್ರಾಬ್ಲಿಂಗ್ ನಲ್ಲಿರುವ ಕಂಪನಿಯ ಪ್ರಧಾನ ಕಚೇರಿಯಲ್ಲಿ ಪೂರ್ವಭಾವಿ ಒಪ್ಪಂದ ಏರ್ಪಟ್ಟಿತ್ತು. ಇದೀಗ, ಉತ್ಪಾದನಾ ಘಟಕ ಸ್ಥಾಪನೆಗೆ ಭೂಮಿ ಪೂಜೆ ನೆರವೇರುವ ಮೂಲಕ, ಜಿಮ್ ನಲ್ಲಿ ಏರ್ಪಟ್ಟಿರುವ ಹೂಡಿಕೆ ಒಪ್ಪಂದಗಳನ್ನು ವಾಸ್ತವದಲ್ಲಿ ಕಾರ್ಯರೂಪಕ್ಕೆ ಇಳಿಸಲು ಸರ್ಕಾರ ಒತ್ತು ನೀಡಲಿದೆ ಎಂಬ ಸಚಿವ ಪಾಟೀಲರ ಹೇಳಿಕೆಗೆ ಇದು ಪೂರಕವಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಪಾಟೀಲ, ಕೈಗಾರಿಕಾ ಅಗತ್ಯಗಳಿಗೆ ಬೇಕಾಗುವ ಬಾಟ್ಲಿಂಗ್ ಮತ್ತು ಶುದ್ಧೀಕರಣ ಸಾಧನಗಳ ತಯಾರಿಕೆಗೆ ದೇಶದಲ್ಲಿ ಅಪಾರ ಬೇಡಿಕೆ ಇದೆ. ಇದನ್ನು ಮನಗಂಡು ಕ್ರೋನ್ಸ್, ರಾಜ್ಯದಲ್ಲಿ ಈ ಸ್ಥಾವರ ಆರಂಭಿಸಲು ಮುಂದಾಗಿದೆ. ಇದರಿಂದ ಬಂಡವಾಳ ಹೂಡಿಕೆಯ ಜತೆಗೆ ಸ್ಥಳೀಯರಿಗೆ ಉದ್ಯೋಗ ಸೃಷ್ಟಿಯೂ ಆಗಲಿದೆ. ವೇಮಗಲ್ ಕೈಗಾರಿಕಾ ಪ್ರದೇಶವು ಬೆಂಗಳೂರಿಗೆ ಕೂಡ ಹತ್ತಿರದಲ್ಲಿ ಇರುವುದರಿಂದ ಮತ್ತಷ್ಟು ಅನುಕೂಲವಾಗಲಿದೆ ಎಂದರು.
ತಾವು ಮೂರು ತಿಂಗಳ ಹಿಂದೆ ಇತ್ತೀಚೆಗೆ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಪೂರ್ವಭಾವಿಯಾಗಿ ಜರ್ಮನಿಯಲ್ಲಿ ರೋಡ್-ಶೋ ನಡೆಸಿದಾಗ, ಅಲ್ಲಿ ಕ್ರೋನ್ಸ್ ಕಂಪನಿಯ ಕೇಂದ್ರ ಕಚೇರಿಗೆ ಭೇಟಿ ನೀಡಿ, ವ್ಯವಸ್ಥೆಯನ್ನು ವೀಕ್ಷಿಸಿದ್ದೆ. ಪ್ರಿಸಿಷನ್ ಎಂಜಿನಿಯರಿಂಗ್ ಮತ್ತು ನಾವೀನ್ಯತೆಗಳಿಗೆ ಹೆಸರು ಮಾಡಿರುವ ಕಂಪನಿಯು ಭಾರತದಲ್ಲಿನ ತನ್ನ ನೂತನ ಉತ್ಪಾದನಾ ಸ್ಥಾವರವನ್ನು ಆರಂಭಿಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಜರ್ಮನಿಯಲ್ಲಿ ಏನಿದೆಯೋ ಅವೆಲ್ಲವೂ ನಮ್ಮಲ್ಲೂ ಬರಬೇಕು. ಇದಕ್ಕಾಗಿ ಸರಕಾರವು ಎಲ್ಲ ಬೆಂಬಲವನ್ನೂ ಕೊಡಲು ಬದ್ಧವಾಗಿದೆ ಎಂದು ಹೇಳಿದ್ದೆ. ಆ ಪ್ರಕಾರ ಇವತ್ತು ಈ ಸಂಸ್ಥೆ ನಿರ್ಮಾಣಕ್ಕೆ ನಾಂದಿಯಾಗಿದೆ ಎಂದು ಅವರು ನುಡಿದಿದ್ದಾರೆ.
ಕಂಪನಿಯು ಹಂತ ಹಂತವಾಗಿ 315 ಕೋಟಿ ರೂಪಾಯಿ ಹೂಡಿಕೆ ಮಾಡಲಿದ್ದು, 550 ಮಂದಿಗೆ ಉದ್ಯೋಗ ಸಿಗಲಿದೆ. ನಿಮಿಷಕ್ಕೆ ನೂರಾರು ಬಾಟಲಿ ಉತ್ಪಾದಿಸುವ ಯಂತ್ರಗಳನ್ನು ಇಲ್ಲಿ ಉತ್ಪಾದಿಸಲಾಗುತ್ತದೆ ಎಂದು ಅವರು ಹೇಳಿದರು. ಸ್ಥಳೀಯ ಹಾಗೂ ಭೂಮಿ ಕಳೆದುಕೊಂಡ ರೈತರ ಮಕ್ಕಳಿಗೆ ಉದ್ಯೋಗ ನೀಡಬೇಕೆಂದೂ ಸಚಿವರು ಕ್ರೋನ್ಸ್ ಪ್ರತಿನಿಧಿಗಳಲ್ಲಿ ಮನವಿ ಮಾಡಿದರು. ಇದನ್ನು ಆದ್ಯತೆ ಮೇಲೆ ಮಾಡಬೇಕು ಎಂದೂ ಅವರು ಕೋರಿದರು.
ವೇಮಗಲ್ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಕರ್ನಾಟಕವನ್ನು ಉತ್ಪಾದನಾ ವಲಯದಲ್ಲಿ ಯಾವ ರೀತಿ ಅಭಿವೃದ್ಧಿ ಮಾಡಬೇಕು ಎಂಬುದರ ಬಗ್ಗೆಯೂ ಸದ್ಯದಲ್ಲೇ ಪರಿಣಿತರ ಚರ್ಚೆ ಕೂಡ ಮಾಡಲಾಗುವುದು ಎಂದ ಅವರು, ಸಿಎಸ್ ಆರ್ ಹಣ ಕೂಡ ಸ್ಥಳೀಯರ ಅಭಿವೃದ್ಧಿಗೆ ಬಳಸುವಂತೆ ಸಚಿವರು ಸಂಬಂಧಪಟ್ಟ ಕಂಪೆನಿಯ ಅಧಿಕಾರಿಗಳಿಗೆ ಸೂಚಿಸಿದರು.
ನಮ್ಮಲ್ಲಿ ನೂತನ ಕೈಗಾರಿಕಾ ನೀತಿಯನ್ನು ಜಾರಿಗೆ ತರಲಾಗಿದ್ದು, ಉದ್ದಿಮೆಗಳಿಗೆ ಬಂಡವಾಳದ ಮೇಲೆ ಸಹಾಯಧನ ಅಥವಾ ಉತ್ಪಾದನೆಗೆ ತಕ್ಕ ಪ್ರೋತ್ಸಾಹನ ಭತ್ಯೆ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಮುಕ್ತ ಅವಕಾಶ ಕೊಡಲಾಗಿದೆ. ಜೊತೆಗೆ ಅಗತ್ಯ ಅನುಮೋದನೆಗಳನ್ನು ತ್ವರಿತ ಗತಿಯಲ್ಲಿ ನೀಡಲು ಪರಿಷ್ಕೃತ ಏಕಗವಾಕ್ಷಿ ವ್ಯವಸ್ಥೆಯನ್ನೂ ತರಲಾಗಿದೆ. ಕ್ರೋನ್ಸ್ ಕಂಪನಿಯು ನಮ್ಮಲ್ಲಿ ಮುಂಬರುವ ದಿನಗಳಲ್ಲಿ ಅಪಾರ ಹೂಡಿಕೆ ಮಾಡುವ ನಿರೀಕ್ಷೆ ಇದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.
ಕ್ರೋನ್ಸ್ ಕಂಪನಿಯು ಆಹಾರ ಮತ್ತು ಪಾನೀಯ ಕ್ಷೇತ್ರಗಳಲ್ಲಿ ಕಳೆದ 23 ವರ್ಷಗಳಿಂದಲೂ ಭಾರತದಲ್ಲಿ ನಲೆ ಹೊಂದಿದೆ. ಕಂಪನಿಯ ಡಿಜಿಟಲ್ ವಿಭಾಗದ ಕೇಂದ್ರ ಕಚೇರಿಯು ಬೆಂಗಳೂರಿನಲ್ಲೇ ಇದೆ. ಇದು ಕಂಪನಿಯ ಸಾಫ್ಟ್ ವೇರ್ ಅಭಿವೃದ್ಧಿ, ಐಟಿ ಭದ್ರತೆ ಮತ್ತು ಡಿಜಿಟಲ್ ಪರಿಹಾರಗಳಿಗೆ ಬಲ ತುಂಬಿದೆ. ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಅಸ್ತಿತ್ವಕ್ಕೆ ಬರಲಿರುವ ಉತ್ಪಾದನಾ ಘಟಕವು ಭಾರತದಲ್ಲಿ ಕಂಪನಿಯ ಸ್ಥಾನಮಾನಗಳನ್ನು ಮತ್ತಷ್ಟು ಬಲಪಡಿಸಿ, ರಾಜ್ಯದ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡಲಿದೆ ಎಂದು ಅವರು ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಕ್ರೋನ್ಸ್ ಆಡಳಿತ ಮಂಡಳಿ ನಿರ್ದೇಶಕರಾದ ರೊಲ್ಫ್ಸ್ ಗೋಲ್ಡ್ ಬ್ರೋನರ್, ಮಾರ್ಕಸ್ ವಿಂಟರ್, ಯೋಜನಾ ನಿರ್ದೇಶಕ ಡೇವಿಡ್ ಕ್ರಿಮ್ಮರ್, ಕ್ರೋನ್ಸ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಹರೀಶ ಹನುಗೋಡು, ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ, ಕೆಐಎಡಿಬಿ ಸಿಇಒ ಡಾ.ಮಹೇಶ ಮುಂತಾದವರು ಉಪಸ್ಥಿತರಿದ್ದರು.