ಕೋಲಾರ: ಕೋಲಾರದ ಜಿಲ್ಲಾ ಆಸ್ಪತ್ರೆಯಲ್ಲಿಆಗ ತಾನೇ ಜನಿಸಿದ ಹೆಣ್ಣು ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಮಗುವಿನ ಹೆತ್ತ ತಾಯಿ ಪರಾರಿಯಾಗಿರುವುದಾಗಿ ವರದಿಯಾಗಿದೆ.
ಈ ಮಹಿಳೆ ಜೂ.12 ರಂದು ಸಂಜೆ ಜಿಲ್ಲಾಸ್ಪತ್ರೆಗೆ ಹೆರಿಗೆಗಾಗಿ ದಾಖಲಾಗಿದ್ದರು. ಯಾವುದೇ ವಿಳಾಸ ನೀಡದ ಈಕೆ ತನ್ನ ಹೆಸರನ್ನು ಮೌನಿಕಾ ಎಂದು ಬರೆಸಿದ್ದರು. ಆಸ್ಪತ್ರೆಯಲ್ಲಿ ನಾರ್ಮಲ್ ಹೆರಿಗೆಯಾಗಿದೆ.
ಕೋಲಾರಕ್ಕೆ ಮದುವೆ ಕಾರ್ಯಕ್ರಮಕ್ಕೆ ಎಂದು ಆಗಮಿಸಿದ್ದು, ಹೆರಿಗೆ ನೋವು ಎಂದು ದಾಖಲಾಗಿದ್ದರು. ಈಕೆಯ ಜತೆ ಓರ್ವ ವೃದ್ಧೆ ಇದ್ದರು.
ತುರ್ತು ಹೆರಿಗೆ ಇದ್ದ ಕಾರಣ ಮಾನವೀಯತೆ ದೃಷ್ಟಿಯಿಂದ ಡಾ.ಶಾಂತ ಅವರು ಹೆರಿಗೆ ಮಾಡಿಸಿದ್ದರು. ಹೆರಿಗೆ ಬಳಿಕ ನಾನು ಚಿಕ್ಕಬಳ್ಳಾಪುರ ಜಿಲ್ಲೆಯ ಪೇರೆಸಂದ್ರದ ನಿವಾಸಿಯಾಗಿದ್ದು, ತನ್ನ ಪತಿ ಶ್ರೀನಿವಾಸ್ ಎಂದು ತಿಳಿಸಿ ಸುಳ್ಳು ಮೊಬೈಲ್ ನಂಬರ್ ನೀಡಿದ್ದರು. ವರ್ಷದ ಈಕೆ ನಿನ್ನೆ ಮುಂಜಾನೆ 5 ಗಂಟೆಯಲ್ಲಿ ಟೀ ಕುಡಿದು ಬರುವುದಾಗಿ ತಿಳಿಸಿ ವೃದ್ಧೆಯ ಜತೆ ಪರಾರಿಯಾಗಿದ್ದಾರೆ.
ಈಕೆ ಕೊಟ್ಟಿದ್ದ ಮೊಬೈಲ್ ನಂಬರ್ ಗೆ ಕರೆ ಮಾಡಿದರೆ ಮತ್ತೊಬ್ಬರು ಕರೆ ಸ್ವೀಕರಿಸುತ್ತಿದ್ದಾರೆ. ಮಗು 1.5 ಕೆಜಿ ಇದ್ದು, ಬೇರೊಬ್ಬ ತಾಯಿಯ ಎದೆ ಹಾಲು ಕುಡಿಸಿ ವೈದ್ಯರು ಆರೈಕೆ ಮಾಡುತ್ತಿದ್ದಾರೆ.
ನಂತರ ಆಸ್ಪತ್ರೆಯ ಸಿಬ್ಬಂದಿ ದೂರು ದಾಖಲಿಸಿದ್ದಾರೆ. ಸಿಸಿ ಟಿವಿ ದೃಶ್ಯಗಳನ್ನು ಆಧರಿಸಿ ತಾಯಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.