ಕೋಲಾರ: ನಗರದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಹರಿಯಾಣ ಹಾಗೂ ರಾಜಸ್ಥಾನ ಮೂಲದ 8 ಆರೋಪಿಗಳನ್ನು ಬಂಧಿಸಿ ಅವರಿಂದ ಸುಮಾರು 20 ಲಕ್ಷ ರೂ. ಮೌಲ್ಯದ 20.ಕೆ.ಜಿ. 580 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಾದಕವಸ್ತು ಮಾರಾಟದ ಜಾಲವನ್ನು ಪತ್ತೆ ಹಚ್ಚಲು ವಿಶೇಷ ತಂಡ ಇದೇ 18 ರಂದು ಟಮಕ ಕೈಗಾರಿಕಾ ಪ್ರದೇಶದಲ್ಲಿ ಬಾಲಾಜಿ ರೈಸ್ ಮಿಲ್ ಮುಂಭಾಗದ ರಸ್ತೆಯಲ್ಲಿ ನಿಂತಿದ್ದ ಕಾರೊಂದನ್ನು ವಶಪಡಿಸಿಕೊಂಡು ಕಾರಿನಲ್ಲಿದ್ದ ಎಂಟು ಆರೋಪಿಗಳು ಮತ್ತು ಸರಕನ್ನು ವಶಪಡಿಸಿಕೊಂಡಿದೆ.
ಗಾಂಜಾ ಮಾರಾಟದ ಪ್ರಮುಖ ಆರೋಪಿಗಳಾದ ಕೋಲಾರ ನಗರದ ನ್ಯಾಮತ್ ಬೀ ದರ್ಗಾ ನಿವಾಸಿ ನಿಜಾಮುದ್ದೀನ್ ಮತ್ತು ಮುಬಾರಕ್ ಎಂಬಿಬ್ಬರು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳು ಗಾಂಜಾ ಸಾಗಾಟ ಮತ್ತು ಮಾರಾಟ ಮಾಡುವುದರ ಜತೆಗೆ ವಾಹನದ ನಂಬರ್ ಪ್ಲೇಟ್ ಬದಲಾಯಿಸಿ ಹಸುಕಳ್ಳತನವನ್ನೂ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ಎಸ್ ಪಿ ನಿಖಿಲ್ ಅವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ರಕ್ಷಣಾಧಿಕಾರಿಗಳಾದ ರವಿಶಂಕರ್ˌ ಜಗದೀಶ್ ಹಾಗೂ ಉಪಾಧೀಕ್ಷಕ ನಾಗ್ತೆರವರ ಮಾರ್ಗದರ್ಶನದಲ್ಲಿ ಈ ದಾಳಿ ನಡೆದಿದೆ.