ರಾಜಿ ಮಾಡಿಕೊಂಡ ಮುಖ್ಯಸ್ಥ ಆಶೋಕ್‌ ಖೇಣಿ, ಟಿ. ವೆಂಕಟೇಶ್‌, ದೊರೈರಾಜು, ಡಾ.ಎಚ್‌. ಎನ್.ಕೃಷ್ಣ, ರವಿ ಗಣಿಗ; ಕಾರಣ ಏನು ?

Most read

ಬೆಂಗಳೂರು: ಆದಿ ಚುಂಚನಗಿರಿ ಮಠಾಧೀಶರಾದ ಬಾಲಗಂಗಾಧರನಾಥ ಸ್ವಾಮೀಜಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ನೈಸ್‌‍ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಅಶೋಕ್‌ ಖೇಣಿ ಅವರು ಬಿಜಿಎಸ್‌‍ ಗ್ಲೋಬಲ್‌ ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕೆಲವರು ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣವನ್ನು ರಾಜಿ ಮಾಡಿಕೊಳ್ಳುವ ಮೂಲಕ ಇತ್ಯರ್ಥ ಪಡಿಸಿಕೊಳ್ಳಲಾಗಿದೆ.

ಶುಕ್ರವಾರ ಬೆಂಗಳೂರಿನ ವಿಶೇಷ ಜನಪ್ರತಿನಿಧಿಗಳ  ನ್ಯಾಯಾಲಯದ ಮುಂದೆ  ಹಾಜರಾದ ನೈಸ್‌‍ ಸಂಸ್ಥೆ ಮುಖ್ಯಸ್ಥ ಆಶೋಕ್‌ ಖೇಣಿ, ಈ ಸಂಜೆ ಪತ್ರಿಕೆ ಸಂಪಾದಕ ಟಿ. ವೆಂಕಟೇಶ್‌, ಹಿರಿಯ ವಕೀಲ ದೊರೈರಾಜು, ಕೆಪಿಎಸ್‌‍ಸಿ ಮಾಜಿ  ಅಧ್ಯಕ್ಷ ಡಾ.ಎಚ್‌.ಎನ್.ಕೃಷ್ಣ, ಮಂಡ್ಯ ಶಾಸಕ ರವಿ ಗಣಿಗ ಸೇರಿದಂತೆ ಮತ್ತಿತರರು ಹಾಜರಾಗಿದ್ದರು.

ಎರಡೂ ಕಡೆಯವರು ರಾಜಿ ಸಂಧಾನಕ್ಕೆ ಸಮತಿಸಿದರೆ ಅಭ್ಯಂತರವಿಲ್ಲ ಎಂದು ಜನಪ್ರತಿನಿಧಿ ನ್ಯಾಯಾಲಯದ ನ್ಯಾಯಾಧೀಶರು ಪ್ರಕರಣವನ್ನು ಇತ್ಯರ್ಥಗೊಳಿಸಿದರು. ಬಳಿಕ ಎಲ್ಲಾ ಕಕ್ಷಿದಾರರು ಹೊರಗಡೆ ನಗುಮುಖದಿಂದ ಹಸ್ತಲಾಘವ ಮಾಡಿದರು.

 2013 ಫೆಬ್ರವರಿ 14ರಂದು ಆದಿಚುಂಚನಗಿರಿ ಪೀಠದ ಪೀಠಾಧ್ಯಕ್ಷರಾದ ಡಾ.ಬಾಲಗಂಗಾಧರನಾಥ ಸ್ವಾಮೀಜಿಯವರು ನಿಧನರಾದಾಗ ಆಸ್ಪತ್ರೆಗೆ ಅಶೋಕ್‌ ಖೇಣಿ ಭೇಟಿ ನೀಡಿದ್ದ ವೇಳೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರೂ ಆಸ್ಪತ್ರೆಯಲ್ಲಿದ್ದರು.  ಈ ವೇಳೆ ಖೇಣಿ, ಏನು ಗೌಡರೇ, ಆಸ್ಪತ್ರೆಯಲ್ಲೂ ರಾಜಕೀಯ ಮಾಡುತ್ತಿದ್ದೀರಿ ಎಂದು ದೇವೇಗೌಡರನ್ನು ಪ್ರಶ್ನಿಸಿದ್ದರು. ಇದರಿಂದ ಕುಪಿತರಾದ ದೇವೇಗೌಡರ ಹಿಂಬಾಲಕರು ಖೇಣಿ ಅವರ ಮೇಲೆ ಹಲ್ಲೆ ನಡೆಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದರು.

ಆಸ್ಪತ್ರೆಯಿಂದ ಹೊರಬಂದ ನಂತರ ಮತ್ತೆ ಖೇಣಿ ಅವರ ಮೇಲೆ ಕೆಲವರು ಹಲ್ಲೆ ನಡೆಸಲು ಮುಂದಾದರು. ಈ ವೇಳೆ ಪೊಲೀಸರ ರಕ್ಷಣೆಯಲ್ಲಿ ಅವರನ್ನು ಕಾರಿಗೆ ಹತ್ತಿಸಿ ಕಳುಹಿಸಲಾಗಿತ್ತು.  ತಮ ಮೇಲೆ ಹಲ್ಲೆ ನಡೆಸಿದ್ದಾರೆಂದು ದೂರಿ ಅಶೋಕ್‌ ಖೇಣಿ ಅವರು  ನೀಡಿದ ದೂರನ್ನು ನ್ಯಾಯಾಲಯ ವಿಚಾರಣೆ ನಡೆಸಿತ್ತು. ಈ ವೇಳೆ ಹಲ್ಲೆ ನಡೆದ ಸಂಬಂಧ ದೂರು ದಾಖಲಾಗಿದ್ದರೂ, ತನಿಖೆ ಕೈಗೊಳ್ಳದ ಪೊಲೀಸರ ಕ್ರಮಕ್ಕೆ ನ್ಯಾಯಾಧೀಶರು ಆಕ್ಷೇಪ ವ್ಯಕ್ತಪಡಿಸಿದ್ದರು.

ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ವಕೀಲ ಎ.ಪಿ. ರಂಗನಾಥ, ಬೆಂಬಲಿಗರಾದ ಎಚ್‌.ಎನ್‌. ಕೃಷ್ಣ, ಟಿ.ವೆಂಕಟೇಶ್‌ ಸೇರಿದಂತೆ ಇತರರ ವಿರುದ್ಧ ತನಿಖೆ ನಡೆಸಿ ವರದಿ ನೀಡುವಂತೆ ನ್ಯಾಯಾಲಯ ಸೂಚನೆ ನೀಡಿತ್ತು.

 ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಜ.14ರಂದು ದೈವಾಧೀನರಾಗಿದ್ದರು. ಅಶೋಕ್‌ ಖೇಣಿ ಬಿಜಿಎಸ್‌‍ ಆಸ್ಪತ್ರೆಗೆ ಆಗಮಿಸಿದ ವೇಳೆ ಮಾಜಿ ಪ್ರಧಾನಿ ದೇವೇಗೌಡರನ್ನು ಕುರಿತು ಕೀಳು ಮಟ್ಟದ ಭಾಷೆಯಲ್ಲಿ ಮಾತನಾಡಿದರು ಎಂಬ ಆರೋಪದ ಮೇಲೆ ಖೇಣಿ ಅವರ ಮೇಲೆ ಕೆಲವರು ಹಲ್ಲೆ ನಡೆಸಿದ್ದರು. ಈ ಬಗ್ಗೆ ಖೇಣಿ, ದೇವೇಗೌಡ ಮತ್ತವರ ಬೆಂಬಲಿಗರ ವಿರುದ್ಧ ಜ.16ರಂದು ಕೆಂಗೇರಿ ಪೊಲೀಸ್‌‍ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಿಸಿದ್ದರು.

More articles

Latest article