ಹೊಸದಿಲ್ಲಿ: ಕೆವೆಂಟರ್ ಗ್ರೂಪ್ ಕಂಪನೀಸ್ (Keventer Group) ಎಂಬ ಪಶ್ವಿಮ ಬಂಗಾಳದ ಸಂಸ್ಥೆ ತನ್ನ ವಾರ್ಷಿಕ ಆದಾಯದ ನೂರು ಪಟ್ಟು ಹಣವನ್ನು ಚುನಾವಣಾ ಬಾಂಡ್ ಗಳ (Electoral Bonds) ಮೂಲಕ ದೇಣಿಗೆ ನೀಡಿರುವುದು ಬೆಳಕಿಗೆ ಬಂದಿದೆ.
2017ರಲ್ಲಿ ಜಾರಿಗೆ ತರಲಾದ ಚುನಾವಣಾ ಬಾಂಡ್ ಯೋಜನೆಯನ್ನು ಅಸಂವಿಧಾನಿಕ ಎಂದು ಹೇಳುವ ಮೂಲಕ ರದ್ದುಪಡಿಸಿದ್ದ ಸುಪ್ರೀಂ ಕೋರ್ಟ್ ಸಂಬಂಧ ಪಟ್ಟ ಮಾಹಿತಿಗಳನ್ನು ಬಹಿರಂಗಪಡಿಸುವಂತೆ ಚುನಾವಣಾ ಆಯೋಗಕ್ಕೆ ಆದೇಶಿಸಿತ್ತು. ನಿನ್ನೆ ಚುನಾವಣಾ ಆಯೋಗ ದೇಣಿಗೆ ಮಾಹಿತಿಗಳನ್ನು ಬಹಿರಂಗಪಡಿಸಿದ್ದು ಹಲವು ಆಶ್ವರ್ಯಕರ ವಿದ್ಯಮಾನಗಳು ಹೊರಬಂದಿವೆ.
ಕೆವೆಂಟರ್ ಗ್ರೂಪ್ ಆಫ್ ಕಂಪನೀಸ್ ನ ಮೂರು ಸಂಸ್ಥೆಗಳು ಪಶ್ಚಿಮ ಬಂಗಾಳದಲ್ಲಿ ಒಂದೇ ವಿಳಾಸದಲ್ಲಿ ನೋಂದಾವಣೆಗೊಂಡಿವೆ. ಕೆವೆಂಟರ್ ಫುಡ್ ಪಾರ್ಕ್ ಇನ್ಫ್ರಾ ಪ್ರೈವೇಟ್ ಲಿಮಿಟೆಡ್, ಮದನ್ ಲಾಲ್ ಲಿಮಿಟೆಡ್ ಮತ್ತು ಎಂಕೆಜೆ ಎಂಟರ್ ಪ್ರೈಸಸ್ ಲಿಮಿಟೆಡ್ -ಈ ಮೂರು ಸಂಸ್ಥೆಗಳು ಸೇರಿ ಒಟ್ಟು 500 ಕೋಟಿ ರುಪಾಯಿಗಳನ್ನು ಚುನಾವಣಾ ಬಾಂಡ್ ಗಳಿಗಾಗಿ ಹರಿಸಿವೆ. ಕೆವೆಂಟರ್ ಪುಡ್ ಪಾರ್ಕ್ 195 ಕೋಟಿ ರುಪಾಯಿ ದೇಣಿಗೆ ನೀಡಿದರೆ ಮದನ್ ಲಾಲ್ ಲಿಮಿಟೆಡ್ 185.5 ಕೋಟಿಗಳನ್ನು 2109-20ನೇ ಸಾಲಿನಲ್ಲಿ ರಾಜಕೀಯ ಪಕ್ಷಗಳಿಗೆ (ಪಕ್ಷಕ್ಕೆ) ದೇಣಿಗೆ ನೀಡಿದೆ. ತಮಾಷೆ ಎಂದರೆ ಈ ವಿತ್ತೀಯ ವರ್ಷದಲ್ಲಿ ಈ ಮೂರು ಸಂಸ್ಥೆಗಳ ಲಾಭ ಕೇವಲ 1.84 ಕೋಟಿ ರುಪಾಯಿಗಳು! ಎರಡು ಕೋಟಿ ಲಾಭವನ್ನೂ ನೋಡದ ಸಂಸ್ಥೆಗಳು 380.5 ಕೋಟಿ ರುಪಾಯಿ ದೇಣಿಗೆ ಕೊಟ್ಟಿದ್ದು ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ.
ಕೋಲ್ಕತ್ತಾದಲ್ಲಿ ತನ್ನ ಪ್ರಧಾನ ಕಚೇರಿ ಹೊಂದಿರುವ ಕೆವೆಂಟರ್ ಸಂಸ್ಥೆ ಡೈರಿ, ಸಂಸ್ಕೃರಿತ ಆಹಾರ ಪದಾರ್ಥಗಳ ತಯಾರಿಕೆಯನ್ನು ನಡೆಸುತ್ತವೆ. ಮೂರೂ ಸಂಸ್ಥೆಗಳಲ್ಲಿ ರಾಧೆ ಶಾಮ್ ಖೇತನ್ ಎಂಬುವವರು ನಿರ್ದೇಶಕರಾಗಿದ್ದಾರೆ. ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ಕೆವೆಂಟರ್ ರಿಯಾಲಿಟಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯೂ ಇದೇ ರಾಧೆ ಶ್ಯಾಮ್ ಖೇತನ್ ಆಗಿದ್ದಾರೆ.
ಪಶ್ಚಿಮ ಬಂಗಾಳ (West Bengal) ಸರ್ಕಾರದ ಸ್ವಾಮ್ಯದಲ್ಲಿದ್ದ ಮೆಟ್ರೋ ಡೈರಿ (Metro Dairy) ಎಂಬ ಸಂಸ್ಥೆಯ ಶೇ.47ರಷ್ಟು ಶೇರುಗಳನ್ನು ಕೆವೆಂಟರ್ ಆಗ್ರೋ ಎಂಬ ಸಂಸ್ಥೆಗೆ ಮಾರಾಟ ಮಾಡಿತ್ತು. ಇದು ವಿವಾದಕ್ಕೆ ಕಾರಣವಾಗಿತ್ತು. ನಂತರ ಮೆಟ್ರೋ ಡೈರಿಯ ಶೇ.15ರಷ್ಟು ಶೇರುಗಳನ್ನು ಸಿಂಗಾಪುರ ಮೂಲಕದ ಖಾಸಗಿ ಸಂಸ್ಥೆಯೊಂದಕ್ಕೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗಿತ್ತು.
2018ರಲ್ಲಿ ಕೋಲ್ಕತಾ ಹೈಕೋರ್ಟ್ ನಲ್ಲಿ ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯೊಂದನ್ನು ಹೂಡಿ, ಕೆವೆಂಟರ್ ಜೊತೆಗಿನ ವ್ಯವಹಾರದಲ್ಲಿ ಸರ್ಕಾರಕ್ಕೆ 500 ಕೋಟಿ ರುಪಾಯಿ ನಷ್ಟವಾಗಿದೆ, ಈ ಕುರಿತು ತನಿಖೆಗೆ ಆದೇಶಿಸಬೇಕು ಎಂದು ಕೋರಿದ್ದರು.
ಇದಾದ ನಂತರ ಜಾರಿ ನಿರ್ದೇಶನಾಲಯ (ಇಡಿ) ಅಖಾಡಕ್ಕೆ ಇಳಿದು ಕೆವೆಂಟರ್ ಕುರಿತು ತನಿಖೆ ಆರಂಭಿಸಿತ್ತು. ಇಡಿ ತನಿಖೆ ಆರಂಭವಾಗುತ್ತಿದ್ದಂತೆ ಕೆವೆಂಟರ್ ಚುನಾವಣಾ ಬಾಂಡ್ ಮೂಲಕ ರಾಜಕೀಯ ಪಕ್ಷಗಳಿಗೆ (ಪಕ್ಷಕ್ಕೆ) ದೇಣಿಗೆ ನೀಡಲು ಆರಂಭಿಸಿತು.