ದಿಲ್ಲಿ ಅಬಕಾರಿ ನೀತಿ ಹಗರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿರುವ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಇಡಿ ಕೇಸ್ ನಿಂದ ಜಾಮೀನು ಪಡೆದಿರುವ ಕೇಜ್ರಿವಾಲ್ ಈಗ ಸಿಬಿಐ ಕೈಗೆ ಸಿಲುಕಿಕೊಂಡಿದ್ದು, ಜಾಮೀನು ಸಿಕ್ಕಿರೂ ಬಿಡುಗಡೆ ಭಾಗ್ಯ ಇಲ್ಲದಂತಾಗಿದೆ.
ವಿಚಾರಣೆ ಆಲಿಸಿದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದಿಪಾಂಕರ್ ದತ್ತಾ ಅವರನ್ನು ಒಳಗೊಂಡ ನ್ಯಾಯಪೀಠವು, ಚುನಾಯಿತ ವ್ಯಕ್ತಿ 90 ದಿನಗಳನ್ನು ಜೈಲಿನಲ್ಲಿಯೇ ಕಳೆದಿದ್ದಾರೆ. ಅವರು ತಮ್ಮ ಹುದ್ದೆಯಲ್ಲಿ ಮುಂದುವರೆಯಬೇಕೆ ಬೇಡವೆ ಎಂಬುದು ಅವರಿಗೆ ಬಿಟ್ಟ ವಿಚಾರ. ಜೀವಿಸುವ ಹಕ್ಕನ್ನು ನಾವು ಪರಿಗಣಿಸುತ್ತೇವೆ. ಹಾಗಾಗಿ ಕೇಜ್ರಿವಾಲ್ ಜೈಲಿನಲ್ಲಿ ಕಳೆದಿರುವ ಅವಧಿಯನ್ನು ಗಮನದಲ್ಲಿ ಇರಿಸಿಕೊಂಡು ಹೇಳಿದೆ.
ಜೊತೆಗೆ ಕೇಜ್ರಿವಾಲ್ ಅವರ ಬಂಧನವು ಅಗತ್ಯವೇ ಅಥವಾ ಅಲ್ಲವೇ ಎಂಬ ಪ್ರಶ್ನೆಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುವುದು ಸೂಕ್ತವೆಂದು ಪರಿಗಣಿಸಿ ವರ್ಗಾಹಿಸಲಾಗಿದೆ. ಈ ವರ್ಗಾವಣೆ ಮಾಡಿ ಮಧ್ಯಂತರ ಜಾಮೀನಿನ ಮೇಲೆ ಅರವಿಂದ್ ಕೇಜ್ರಿವಾಲ್ ಅವರನ್ನು ಬಿಡುಗಡೆ ಮಾಡಲು ನಿರ್ದೇಶಿಸುತ್ತೇವೆ ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ಹೇಳಿದೆ.
ಜಾರಿ ನಿರ್ದೇಶನಾಲಯ (ಇಡಿ) ಪ್ರಕರಣದಲ್ಲಿ ಈಗ ಜಾಮೀನು ದೊರಕಿದೆ. ಆದರೆ ಜೂನ್ 25ರಂದು ಇದೇ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ಕೇಂದ್ರ ತನಿಖಾ ದಳ (ಸಿಬಿಐ) ಅವರನ್ನು ಬಂಧಿಸಿತ್ತು. ಪ್ರಸ್ತುತ ಸಿಬಿಐ ವಶದಲ್ಲಿಯೇ ಅರವಿಂದ್ ಕೇಜ್ರಿವಾಲ್ ಇರಬೇಕಾಗುತ್ತದೆ.