ಅಬಕಾರಿ ಹಗರಣ: ಚಂದ್ರಶೇಖರ ರಾವ್‌ ಪುತ್ರಿ ಕವಿತಾ ಬಂಧನ

Most read

ಹೈದರಾಬಾದ್:‌ ದೆಹಲಿಯ ಎಎಪಿ ಸರ್ಕಾರದ ಅಬಕಾರಿ ನೀತಿಯ ಕುರಿತು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇಡಿ) ಇಂದು ಭಾರತ ರಾಷ್ಟ್ರ ಸಮಿತಿ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಚಂದ್ರಶೇಖರ ರಾವ್‌ ಪುತ್ರಿ ಕೆ.ಕವಿತಾ ಅವರನ್ನು ಇಂದು ನಾಟಕೀಯ ಬೆಳವಣಿಗೆಯಲ್ಲಿ ಬಂಧಿಸಿದೆ.

ತೆಲಂಗಾಣ ವಿಧಾನಪರಿಷತ್‌ ಸದಸ್ಯರೂ ಆಗಿರುವ ಕವಿತಾ ಅವರನ್ನು ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ವಿಚಾರಣೆ ನಡೆಸಿತ್ತು. ನಂತರ ಎರಡು ಬಾರಿ ಸಮನ್ಸ್‌ ನೀಡಿದ್ದರೂ ಕವಿತಾ ವಿಚಾರಣೆಗೆ ಹಾಜರಾಗಿರಲಿಲ್ಲ. ಇಂದು ಇಡಿ ಅಧಿಕಾರಿಗಳು ಹೈದರಾಬಾದ್‌ ನಲ್ಲಿ ಕವಿತಾ ಅವರನ್ನು ಬಂಧಿಸಿ ದೆಹಲಿಗೆ ಕರೆದೊಯ್ದರು.

ಕವಿತಾ ಅವರನ್ನು ಬಂಧಿಸಿದ ಕೆಲವೇ ಸಮಯದಲ್ಲಿ ಇಡಿ ಅಧಿಕಾರಿಗಳು ಕವಿತಾ ಅವರ ಮನೆಯ ಮೇಲೆ ದಾಳಿ ನಡೆಸಿದರು.

ಕೆ.ಕವಿತಾ ಅವರನ್ನು ಬುಧವಾರದವರೆಗೆ ವಿಚಾರಣೆಗೆ ಒಳಪಡಿಸಿದಂತೆ ಸುಪ್ರೀಂ ಕೋರ್ಟ್‌ ಆದೇಶ ನೀಡಿತ್ತು. ಶುಕ್ರವಾರ ಇಡಿ ನೀಡಿರುವ ಸಮನ್ಸ್‌ ಕುರಿತಂತೆ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತ್ತು. ಶುಕ್ರವಾರ ಮುಂದಿನ ವಿಚಾರಣೆ ನಿಗದಿಯಾಗಿತ್ತು. ಈ ಸಂದರ್ಭದಲ್ಲಿ ಕವಿತಾ ಅವರನ್ನು ಬಂಧಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಕವಿತಾ ಅವರ ಸಹೋದರ ಮತ್ತು ಮಾಜಿ ಸಚಿವ ಕೆ.ಟಿ.ರಾಮರಾಮ್‌ ಇಡಿ ಕಾರ್ಯಾಚರಣೆ ಕುರಿತು ಕಿಡಿಕಾರಿದ್ದು, ಸುಪ್ರೀಂಕೋರ್ಟ್ ನಲ್ಲಿ ಇಡಿ ಸಲ್ಲಿಸಿದ್ದ ಮುಚ್ಚಳಿಕೆಯನ್ನುಉಲ್ಲಂಘಿಸಿದೆ ಎಂದರಲ್ಲದೆ, ಕವಿತಾ ಅವರನ್ನು ಬಂಧಿಸಿ ದೆಹಲಿಗೆ ಕರೆದೊಯ್ಯುವ ಟ್ರಾನ್ಸಿಟ್‌ ವಾರಂಟ್‌ ಕೂಡ ಅವರ ಬಳಿ ಇರಲಿಲ್ಲ ಎಂದು ಆರೋಪಿಸಿದ್ದಾರೆ.

ದೆಹಲಿಯಲ್ಲಿ ಆಡಳಿತ ನಡೆಸುತ್ತಿರುವ ಆಮ್‌ ಆದ್ಮಿ ಪಾರ್ಟಿ ಅಬಕಾರಿ ಕುಳಗಳಿಗೆ ಸಹಾಯ ಮಾಡುವ ಅಬಕಾರಿ ನೀತಿ ರೂಪಿಸಿದೆ ಎಂದು ಆರೋಪಿಸಿ ಇಡಿ ತನಿಖೆ ನಡೆಸುತ್ತಿದ್ದು, ದೆಹಲಿ ಸರ್ಕಾರದ ಉಪಮುಖ್ಯಮಂತ್ರಿಯಾಗಿದ್ದ ಮನೀಷ್‌ ಸಿಸೋಡಿಯಾ ಸೇರಿದಂತೆ ಹಲವರನ್ನು ಬಂಧಿಸಿದೆ. ಇದೇ ಪ್ರಕರಣಕ್ಕೆ ಸಂಬಂಧಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್‌ ಅವರಿಗೂ ಜಾರಿ ನಿರ್ದೇಶನಾಲಯ ಹಲವು ಬಾರಿ ನೋಟಿಸ್‌ ನೀಡಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

ಅಬಕಾರಿ ಲಾಬಿಯಲ್ಲಿ ಕವಿತಾ ಅವರೂ ಸಹ ʻಸೌತ್‌ ಗ್ರೂಪ್‌ʼ ಹೆಸರಿನಲ್ಲಿ ಭಾಗಿಯಾಗಿದ್ದಾರೆ ಮತ್ತು ಹಗರಣದ ಮುಖ್ಯ ರೂವಾರಿಗಳಲ್ಲಿ ಒಬ್ಬರಾಗಿದ್ದಾರೆ ಎಂದು ಇಡಿ ಆರೋಪಿಸಿದೆ. ಈ ಸೌತ್‌ ಗ್ರೂಪ್‌ ನಲ್ಲಿ ಉದ್ಯಮಿ ಶರತ್‌ ರೆಡ್ಡಿ, ವೈಎಸ್‌ ಆರ್‌ ಪಕ್ಷದ ಸಂಸದ ಮಗುಂತ ಶ್ರೀನಿವಾಸುಲು ರೆಡ್ಡಿ, ಅವರ ಪುತ್ರ ರಾಘವ ಮುಗುತ ರೆಡ್ಡಿ, ಶರತ್‌ ರೆಡ್ಡಿ ಮತ್ತು ರಾಘವ ರೆಡ್ಡಿ ಭಾಗಿಯಾಗಿದ್ದಾರೆ ಎಂದು ಏಜೆನ್ಸಿ ಹೇಳಿದೆ.


More articles

Latest article