ಕಸಾಪದಲ್ಲಿ ಅಧ್ಯಕ್ಷ ಮಹೇಶ್‌ ಜೋಷಿ ಅವ್ಯವಹಾರ ಆರೋಪ: ಸರ್ಕಾರಕ್ಕೆ ಹೈಕೋರ್ಟ್‌ ಕೆಲವು ನಿರ್ದೇಶನ

Most read

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ 2023-24ನೇ ಸಾಲಿನ ಆದಾಯ, ಅನುದಾನ, ಖರೀದಿ ಮತ್ತು ಮಾರಾಟ ಸೇರಿದಂತೆ ಆರ್ಥಿಕ ವ್ಯವಹಾರದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸುವುದಕ್ಕಾಗಿ, ಸಹಕಾರ ಸಂಘಗಳ ಉಪ ನಿಬಂಧಕರು ಹೊರಡಿಸಿರುವ ಆದೇಶದ ಬಳಿಕ ಕೈಗೊಂಡ ಆಡಳಿತಾತ್ಮಕ ಪ್ರಕ್ರಿಯೆ ಹಾಗೂ ಅದರ ದಾಖಲೆಗಳನ್ನು ಬುಧವಾರ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಹೈಕೋರ್ಟ್‌, ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಬೆಂಗಳೂರು ನಗರ ಜಿಲ್ಲೆಯ ಎರಡನೇ ವೃತ್ತದ ಸಹಕಾರ ಸಂಘಗಳ ಡೆಪ್ಯುಟಿ ರಿಜಿಸ್ಟ್ರಾರ್‌ ಆದೇಶಗಳನ್ನು ರದ್ದುಪಡಿಸುವಂತೆ ಕೋರಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಸಲ್ಲಿಸಿರುವ ರಿಟ್‌ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.

ಅರ್ಜಿದಾರ ಜೋಶಿ ಪರ ಹಿರಿಯ ವಕೀಲ ಎಂ.ಅರುಣ್ ಶ್ಯಾಮ್ ಹಾಗೂ ರಾಜ್ಯ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ ವಾದ ಮಂಡಿಸಿದರು.

2023-24ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಬಳ್ಳಾರಿ ಜಿಲ್ಲೆ ಸಂಡೂರಿನಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು. ಈ ಸಭೆಯನ್ನು ಪ್ರಶ್ನಿಸಿ ಲೇಖಕ ಜಾಣಗೆರೆ ವೆಂಕಟರಾಮಯ್ಯ ಮತ್ತು ಲೇಖಕಿ ಡಾ.ವಸುಂಧರಾ ಭೂಪತಿ ಸಲ್ಲಿಸಿದ್ದ ದೂರಿನ ಹಿನ್ನೆಲೆಯಲ್ಲಿ ರದ್ದುಪಡಿಸಿ ಸಹಕಾರ ಸಂಘಗಳ ಉಪನಿಬಂಧಕರು 2025ರ ಜೂನ್ 27ರಂದು ಆದೇಶ ಹೊರಡಿಸಿದ್ದರು.

ಅಧ್ಯಕ್ಷ ಮಹೇಶ್‌ ಜೋಷಿ ಅವರು, ಕನ್ನಡ ಸಾಹಿತ್ಯ ಪರಿಷತ್ತಿನ 2023-24ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆ ರದ್ದುಪಡಿಸಿ ಹಾಗೂ ಪದಾಧಿಕಾರಿಗಳ ಕಾರ್ಯವೈಖರಿ, ಅನುದಾನ ಮತ್ತು ಖರ್ಚು-ವೆಚ್ಚಗಳ ಕುರಿತು ವಿಚಾರಣೆ ನಡೆಸಲು ತನಿಖಾಧಿಕಾರಿ ನೇಮಕ ಮಾಡಿ ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಸಂಘಗಳ ನೋಂದಣಾಧಿಕಾರಿ 2ನೇ ವಲಯ ಬೆಂಗಳೂರು ನಗರ ಜಿಲ್ಲಾ ಇವರು 2025ರ ಜೂನ್ 26 ಹಾಗೂ 30ರಂದು ಹೊರಡಿಸಿರುವ ಆದೇಶಗಳನ್ನು ರದ್ದುಪಡಿಸಬೇಕು ಎಂದು ಕೋರಿದ್ದಾರೆ.

More articles

Latest article