ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷಸ್ಥಾನ ಎನ್ನುವುದು ಕನ್ನಡ ಪರಿಚಾರಿಕೆಯ ಹುದ್ದೆಯೇ ಹೊರತು, ಪರಮಾಧಿಕಾರ ಅನುಭವಿಸುವ ಹುದ್ದೆಯಲ್ಲ’ ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ ಹೇಳಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ನ ಬೈಲಾ ತಿದ್ದುಪಡಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅವರು, ‘ಹಾಲಿ ಕಾರ್ಯಕಾರಿ ಸಮಿತಿಯ ಅವಧಿಯಲ್ಲಿ ಮೂರನೇ ಬಾರಿ ಬೈಲಾ ತಿದ್ದುಪಡಿ ಮಾಡುತ್ತಿರುವುದು ಸರಿಯಲ್ಲ. ಹುದ್ದೆ ಅನುಭವಿಸಲು ಪರಮಾಧಿಕಾರ ಪಡೆದುಕೊಳ್ಳಲು ನಡೆಸಿದ ಹುನ್ನಾರ ಇದಾಗಿದೆ. ತಿದ್ದುಪಡಿ ಅನಿವಾರ್ಯವಾಗಿದ್ದಲ್ಲಿ ಸರ್ವಸದಸ್ಯರ ವಿಶೇಷ ಸಭೆಯನ್ನು ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ನಿಗದಿಪಡಿಸಿ, ಅಲ್ಲಿರುವ ಎಲ್ಲ ಸದಸ್ಯರ ಅಭಿಪ್ರಾಯ ಪಡೆದುಕೊಂಡು ಮುಂದಿನ ಕ್ರಮವಹಿಸಬೇಕು. ಬಳ್ಳಾರಿಯ ಗ್ರಾಮವೊಂದರಲ್ಲಿ ಸರ್ವಸದಸ್ಯರ ವಿಶೇಷ ಸಭೆ ನಿಗದಿಪಡಿಸಿ, ಆತುರದಿಂದ ತಿದ್ದುಪಡಿ ಮಾಡುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಸಾಪ ಅಧ್ಯಕ್ಷರು ಯಾವುದೇ ಕಾರಣಕ್ಕೂ ಪರಮಾಧಿಕಾರ ಹೊಂದಬಾರದು. ಜಿಲ್ಲಾ ಘಟಕದ ಅಧ್ಯಕ್ಷರು ಸೇರಿ ಎಲ್ಲರನ್ನು ಒಳಗೊಂಡು ತೀರ್ಮಾನ ಕೈಗೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಮುದ್ದುಕೃಷ್ಣ ಆಗ್ರಹ ಪಡಿಸಿದ್ದಾರೆ.