Sunday, September 8, 2024

ರಾಜ್ಯದ ಬಹುತೇಕ ವಿದ್ಯಾರ್ಥಿಗಳಿಂದ ರಾಷ್ಟ್ರೀಯ ಶಿಕ್ಷಣ ನೀತಿ- 2020 ತಿರಸ್ಕಾರ : ಸಮೀಕ್ಷೆಯಲ್ಲಿ ಬಹಿರಂಗ

Most read

ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ (NEP-2020) ತರಾತುರಿ ಜಾರಿಯಿಂದಾಗಿ ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿರುವ ಸವಾಲುಗಳ ಕುರಿತು ಕರ್ನಾಟಕದಲ್ಲಿ ಅಖಿಲ ಭಾರತ ಶಿಕ್ಷಣ ಉಳಿಸುವ ಸಮಿತಿ (All India Save Education Committee  – AISEC) ವರದಿಯನ್ನು ರಾಜ್ಯ ಶಿಕ್ಷಣ ನೀತಿ ಆಯೋಗದ ಅಧ್ಯಕ್ಷ ಪ್ರೊ.ಸುಖದೇವ್ ಥೋರಟ್ ಅವರಿಗೆ ಬುಧವಾರ ಸಲ್ಲಿಸಿದೆ.

ರಾಜ್ಯದ 24 ಜಿಲ್ಲೆಗಳಲ್ಲಿ ಶೇ96.32 ರಷ್ಟು ವಿದ್ಯಾರ್ಥಿಗಳನ್ನು ಸಮೀಕ್ಷೆ ನಡೆಸಿದ್ದು, ಇದರಲ್ಲಿ ನಗರ ಮತ್ತು ಗ್ರಾಮೀಣ ಕರ್ನಾಟಕದ ಸರ್ಕಾರಿ, ಖಾಸಗಿ ಮತ್ತು ಸ್ವಾಯತ್ತ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಸೇರಿದ್ದಾರೆ. ಶೇ94.5 ರಷ್ಟು ವಿದ್ಯಾರ್ಥಿಗಳು, ನಾಲ್ಕು ವರ್ಷಗಳ ಪದವಿ ಕೋರ್ಸ್ಗಳು ಕರ್ನಾಟಕ್ಕೆ ಬೇಡ ಇದನ್ನು ಹಿಂಪಡೆಯಲು ಬಯಸುತ್ತಾರೆ ಎಂದು ತಿಳಿಸಿದೆ.

ಕೇಂದ್ರೀಕೃತ ಪ್ರವೇಶ ಪ್ರಕ್ರಿಯೆ ಮತ್ತು ಯುನಿಫೈಡ್ ಯೂನಿವರ್ಸಿಟಿ ಕಾಲೇಜ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (UUCMS) ನಡಿ ಬಡ ಮತ್ತು ಗ್ರಾಮೀಣ ವಿದ್ಯಾರ್ಥಿಗಳು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರವೇಶ ಸಿಗುತ್ತಿಲ್ಲ, ವಿದ್ಯಾರ್ಥಿವೇತಕ್ಕೂ ತೊಡಕಾಗಿದೆ ಎಂದು ವರದಿ ಒತ್ತಿಹೇಳಿದೆ. 

ಶಿಕ್ಷಣ ತಜ್ಞರೊಂದಿಗೆ ಸಮಾಲೋಚಿಸಿ ಎಐಎಸ್‌ಇಸಿ ರೂಪಿಸಿದ ನೀತಿಯು ಪ್ರಜಾಸತ್ತಾತ್ಮಕ, ವೈಜ್ಞಾನಿಕ ಮತ್ತು ಜಾತ್ಯತೀತ ಶಿಕ್ಷಣಕ್ಕೆ ಹೊತ್ತು ನೀಡಿದೆ. ಶಿಕ್ಷಣಕ್ಕಾಗಿ ಕೇಂದ್ರ ಬಜೆಟ್ನಲ್ಲಿ ಶೇ.10 ಮತ್ತು ರಾಜ್ಯ ಬಜೆಟ್‌ನ ಶೇ.30 ರಷ್ಟು ಮೀಸಲಿಡಬೇಕು ಮತ್ತು ವಾಣಿಜ್ಯ ಸಂಸ್ಥೆಗಳಿಗೆ ಪರೀಕ್ಷೆ, ಮೌಲ್ಯಮಾಪನ, ಟ್ಯಾಬ್ಯುಲೇಷನ್ ಮತ್ತು ಇತರ ಶೈಕ್ಷಣಿಕ ಚಟುವಟಿಕೆಗಳ ಹೊರಗುತ್ತಿಗೆ ನೀಡುವುದನ್ನು ನಿಲ್ಲಿಸಬೇಕು ಎಂದು ಹೇಳಿದೆ.

“ಪಠ್ಯಪುಸ್ತಕಗಳು ಎಂದಿಗೂ ಪಕ್ಷದ ಪುಸ್ತಕವಾಗಬಾರದು. ವೈಜ್ಞಾನಿಕವಾಗಿ ಸಾಬೀತಾಗಿರುವ ಸಂಗತಿಗಳು, ಅಂತರಾಷ್ಟ್ರೀಯವಾಗಿ ಅಂಗೀಕರಿಸಲ್ಪಟ್ಟ ಸಿದ್ಧಾಂತಗಳು, ಸಮಾಜದ ಪ್ರಗತಿಗೆ ಸಹಾಯ ಮಾಡುವ ವಿಚಾರಗಳು ಶಾಲಾ ಪಠ್ಯಪುಸ್ತಕಗಳಲ್ಲಿ ಮಾತ್ರ ಇರಬೇಕು ಎಂದು ವರದಿಯಲ್ಲಿ ತಿಳಿಸಿದೆ.

ಕರ್ನಾಟಕದಲ್ಲಿ 2021ರ ಬಿಜೆಪಿಯ ಆಡಳಿತ ಅವಧಿಯಲ್ಲಿ NEP – 2020 ಅನ್ನು ಜಾರಿ ಮಾಡಿತ್ತು. ಇದು ದೇಶದಲ್ಲೇ NEP-2020 (National Education Policy) ಜಾರಿ ಮಾಡಿದ ಮೊದಲ ರಾಜ್ಯವಾಗಿದೆ. ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಕೇಂದ್ರ ನೀತಿಯನ್ನು ಹಿಂತೆಗೆದುಕೊಳ್ಳುವ ಬಗ್ಗೆ ಪ್ರಸ್ತಾಪಿಸಿತ್ತು ಮತ್ತು ರಾಜ್ಯಕ್ಕಾಗಿ “ಸಂವಿಧಾನ ಆಧಾರಿತ” ಶಿಕ್ಷಣ ನೀತಿಯನ್ನು ರೂಪಿಸುವ ಬಗ್ಗೆ ಮಾತನಾಡಿತ್ತು.

ಆಗಸ್ಟ್ 2023 ರಲ್ಲಿ, ಮುಂದಿನ ಶೈಕ್ಷಣಿಕ ವರ್ಷಕ್ಕೆ ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸಲು ಸಮಿತಿಯನ್ನು ರಚಿಸಲು ಸರ್ಕಾರವು ಅನುಮತಿ ನೀಡಿತು. ಅಕ್ಟೋಬರ್ 11, 2023 ರಂದು, ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಮಾಜಿ ಅಧ್ಯಕ್ಷ ಪ್ರೊ ಥೋರಟ್ ನೇತೃತ್ವದಲ್ಲಿ ಸರ್ಕಾರವು 15 ಸದಸ್ಯರ ಸಮಿತಿಯನ್ನು ರಚಿಸಿತು. ಇತರ ಸದಸ್ಯರಲ್ಲಿ ನಿವೃತ್ತ ಐಎಎಸ್ ಅಧಿಕಾರಿಗಳು, ಬರಹಗಾರರು, ಪ್ರಾಧ್ಯಾಪಕರು ಮತ್ತು ನಿವೃತ್ತ ಪ್ರಾಧ್ಯಾಪಕರು ಸೇರಿದ್ದಾರೆ.

ಫೆಬ್ರವರಿ 28, 2024 ರೊಳಗೆ ತನ್ನ ವರದಿಯನ್ನು ಸಲ್ಲಿಸುವಂತೆ ಸರ್ಕಾರವು ಆಯೋಗಕ್ಕೆ ನಿರ್ದೇಶಿಸಿತ್ತು. ಸಮಿತಿಯು ವಿವಿಧ ರಾಜ್ಯಗಳ ವಿದ್ಯಾರ್ಥಿಗಳು, ಶಿಕ್ಷಕರು, ಪ್ರಾಧ್ಯಾಪಕರು ಮತ್ತು ಶಿಕ್ಷಣತಜ್ಞರಿಂದ ಮಾಹಿತಿಯನ್ನು ಕಲೆಯಾಕಲಾಗಿದೆ ಎಂದು ವರದಿಯಾಗಿದೆ.


More articles

Latest article