ಕೇರಳದ ವಯನಾಡು ಜಿಲ್ಲೆಯಲ್ಲಿ ಗುಡ್ಡ ಕುಸಿದು ದುರಂತ ಪ್ರಕರಣ. ಸಂತ್ರಸ್ತರಿಗೆ ಮನೆ ನಿರ್ಮಿಸಿ ಕೊಡುವುದಾಗಿ ಹೇಳಿದ ಸಿಎಂ ಸಿದ್ದರಾಮಯ್ಯ ಅವರ ನಡೆಗೆ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕರ್ನಾಟಕ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.
ವಯನಾಡಿನಲ್ಲಿ 100 ಮನೆಗಳನ್ನು ನಿರ್ಮಿಸಿ ಕೊಡಲಿರುವ ಸರ್ಕಾರ. ವಯನಾಡಿನಲ್ಲಿನ ಈ ಕಷ್ಟದ ಸಮಯದಲ್ಲಿ ಕರ್ನಾಟಕ ಬೆಂಬಲಿಸಿದೆ. ಕರ್ನಾಟಕದ ಜನರಿಗೆ ಮತ್ತು ಕಾಂಗ್ರೆಸ್ ಸರ್ಕಾರಕ್ಕೆ ಕೃತಜ್ಞನಾಗಿದ್ದೇನೆ. ನಿಮ್ಮ ಬದ್ದತೆಯು ಪುನರ್ವಸತಿ ಪ್ರಯತ್ನಗಳತ್ತ ಮಹತ್ವದ ಹೆಜ್ಜೆಯಾಗಿದೆ. ಭಾರತೀಯರ ಸಹಾನುಭೂತಿ ವಯನಾಡಿಗೆ ಅಗತ್ಯವಿರುವ ಶಕ್ತಿಯಾಗಿದೆ. ಟ್ವೀಟ್ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ರಾಹುಲ್ ಗಾಂಧಿ ಧನ್ಯವಾದ ಹೇಳಿದ್ದಾರೆ.
ರಾಜ್ಯ ಸರ್ಕಾರದ ವತಿಯಿಂದ ವಯನಾಡು ಸಂತ್ರಸ್ತರಿಗೆ 100 ಮನೆ ನಿರ್ಮಿಸಲು ಸಿದ್ದರಾಮಯ್ಯ ಘೋಷಣೆ
ಸಿಎಂ ಸಿದ್ದರಾಮಯ್ಯನವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಈ ಮಹತ್ವದ ನಿರ್ಧಾರ ತಿಳಿಸಿದ್ದಾರೆ. ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಿಂದ ತತ್ತರಿಸಿರುವ ಕೇರಳದ ಜೊತೆ ರಾಜ್ಯ ಸರ್ಕಾರ ನಿಂತಿದೆ. ಭೂಕುಸಿತದಿಂದ ಸೂರು ಕಳೆದುಕೊಂಡ 100 ಕುಟುಂಬಗಳಿಗೆ ನಮ್ಮ ಸರ್ಕಾರ ಮಾನವೀಯ ನೆಲೆಯಲ್ಲಿ ಮತ್ತೆ ಮನೆ ನಿರ್ಮಿಸಿಕೊಡಲಿದೆ ಎಂಬ ಭರವಸೆಯನ್ನು ಕೇರಳದ ಮುಖ್ಯಮಂತ್ರಿ Pinarayi Vijayan ಅವರಿಗೆ ನೀಡಿದ್ದೇನೆ. ಸಂಕಷ್ಟದ ಕಾಲದಲ್ಲಿ ಜೊತೆ ನಿಂತು ಭರವಸೆಯನ್ನು ಮರಳಿ ಕಟ್ಟೋಣ ಎಂದು ಹೇಳಿದ್ದಾರೆ.