ಕರ್ನಾಟಕ ಬಂದ್‌: ಮಾರ್ಚ್‌ 22ರಂದು ಹೋಟೆಲ್‌, ಶಾಲಾ ಕಾಲೇಜು ಬಂದ್‌ ಇಲ್ಲ

Most read

ಬೆಂಗಳೂರು: ಮಾರ್ಚ್ 22 ರಂದು ನಡೆಯಲಿರುವ ಬಂದ್ ಗೆ ಹೋಟೆಲ್ ಉದ್ಯಮ ಬೆಂಬಲ ನೀಡುವುದಿಲ್ಲ. ಆದ್ದರಿಂದ ಹೋಟೆಲ್ ಗಳಿಗೆ ಪೊಲೀಸ್ ರಕ್ಷಣೆ ನೀಡಬೇಕು ಎಂದು ರಾಜ್ಯ ಹೋಟೆಲ್ ಗಳ ಸಂಘ ಮನವಿ ಮಾಡಿಕೊಂಡಿದೆ.

ಇತ್ತೀಚೆಗೆ ಕೆಎಸ್‌ ಆರ್‌ ಟಿಸಿ ಬಸ್‌ ನಿರ್ವಾಹಕರೊಬ್ಬರಿಗೆ ಮಸಿ ಬಳಿದು, ಹಲ್ಲೆ ಮಾಡಿರುವುದನ್ನು ಖಂಡಿಸಿ ‘ಕರ್ನಾಟಕ ಬಂದ್’ಗೆ ವಾಟಾಳ್ ನಾಗರಾಜ್ ನೀಡಿದ್ದ ಕರೆಗೆ ನೈತಿಕ ಬೆಂಬಲ ಮಾತ್ರ ವ್ಯಕ್ತವಾಗಿದೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಹೋಟೆಲುಗಳ ಸಂಘ ಅಧ್ಯಕ್ಷ ಜಿ.ಕೆ. ಶೆಟ್ಟಿ, ಸಂಘವು ಕನ್ನಡ ಪರವಾದ ಚಟುವಟಿಕೆಗಳನ್ನು ಬೆಂಬಲಿಸಿಕೊಂಡು ಬಂದಿದೆ. ಕೂಲಿಕಾರ್ಮಿಕರು, ಕಾರ್ಪೋರೇಟ್ ಮತ್ತು ಉದ್ಯಮದವರು, ಪ್ರವಾಸಿಗರು ಹೋಟೆಲ್‌ ಗಳನ್ನೇ ನಂಬಿಕೊಂಡಿದ್ದಾರೆ. ರಾಜ್ಯ ಸಂಘವು ಎಲ್ಲ ಜಿಲ್ಲಾ ಸಂಘಗಳೊಂದಿಗೆ ಹಲವು ಸುತ್ತಿನ ಚರ್ಚೆ ನಡೆಸಿದ್ದು, ಹೋಟೆಲ್ ಬಂದ್ ಮಾಡದೇ, ನೈತಿಕ ಬೆಂಬಲ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ವಿವಿಧ ಶಾಲಾ ಮತ್ತು ಬೋರ್ಡ್ ಪರೀಕ್ಷೆಗಳನ್ನು ಪರಿಗಣಿಸಿ ಬಂದ್‌ ಕರೆಯನ್ನು ಹಿಂಪಡೆಯುವಂತೆ ಖಾಸಗಿ ಶಾಲೆಗಳ ಸಂಘವು ಒತ್ತಾಯಿಸಿದೆ. ನಾವು ಬಂದ್‌ಗೆ ಬೆಂಬಲ ನೀಡುವುದಿಲ್ಲ ಎಂದು ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆಡಳಿತ ಮಂಡಳಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾ‌ರ್ ತಿಳಿಸಿದ್ದಾರೆ.

ಚಿತ್ರಮಂದಿರಗಳಲ್ಲಿ ಮೊದಲ ಪ್ರದರ್ಶನವನ್ನು ರದ್ದು ಮಾಡುವ ಮೂಲಕ ಬೆಂಬಲ ನೀಡಲಾಗುತ್ತಿದೆ. ಪರಿಸ್ಥಿತಿ ನೋಡಿಕೊಂಡು ಸಿನಿಮಾ ಪ್ರದರ್ಶನಗಳು ಮುಂದುವರಿಯಲಿವೆ. ಚಿತ್ರೀಕರಣ ಎಂದಿನಂತೆ ನಡೆಯಲಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು ಎಂ. ತಿಳಿಸಿದ್ದಾರೆ.

More articles

Latest article