ಬೆಂಗಳೂರು: ದೇಶದ ಕ್ವಾಂಟಮ್ ಕ್ರಾಂತಿಯನ್ನು ಕರ್ನಾಟಕ ಮುನ್ನಡೆಸುವುದನ್ನು ಖಾತ್ರಿಪಡಿಸಲು ಐದು ಪ್ರಮುಖ ಸ್ತಂಭಗಳ ಮೇಲೆ ನಮ್ಮ ಕಾರ್ಯತಂತ್ರವನ್ನು ರೂಪಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕ್ವಾಂಟಮ್ ಇಂಡಿಯಾ ಬೆಂಗಳೂರು- 2025 ರ ಅಂತರರಾಷ್ಟ್ರೀಯ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
20ಕ್ಕೂ ಹೆಚ್ಚು ಕಾಲೇಜುಗಳಲ್ಲಿ ಕ್ವಾಂಟಮ್ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಚಯಿಸುತ್ತೇವೆ ಹಾಗೂ ಪ್ರತಿ ವರ್ಷ 150 ಪಿ ಹೆಚ್. ಡಿ ಫೆಲೋಶಿಪ್ ಗಳಿಗೆ ನೆರವು ನೀಡಲಾಗುತ್ತದೆ. 1000- ಕ್ಯೂಬಿಟ್ ಪ್ರೊಸೆಸರ್‌ಗಳನ್ನು ಒಳಗೊಂಡಂತೆ ಅತ್ಯಾಧುನಿಕ ಕ್ವಾಂಟಮ್ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಆರೋಗ್ಯ ರಕ್ಷಣೆ, ರಕ್ಷಣಾ ಮತ್ತು ಸೈಬರ್ ಭದ್ರತೆಯಲ್ಲಿ ಪ್ರಾಯೋಗಿಕವಾದ ನೈಜ-ಪ್ರಪಂಚದ ಅನ್ವಯಿಕೆಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದರು.
ದೇಶದ ಪ್ರಥಮ ಕ್ವಾಂಟಮ್ ಹಾರ್ಡ್ವೇರ್ ಪಾರ್ಕ್, 4 ನಾವಿನ್ಯತಾ ವಲಯಗಳು ಹಾಗೂ ಕ್ವಾಂಟಮ್ ಘಟಕಗಳ ಸ್ಥಳಿಯ ಉತ್ಪಾದನೆಯನ್ನು ಉತ್ತೇಜಿಸಲು ಮೀಸಲಿಡಲಾದ ಫ್ಯಾಬ್ ಲೈನ್ ಅನ್ನು ಕರ್ನಾಟಕ ಸ್ಥಾಪಿಸಲಿದೆ. ನೂರಕ್ಕೂ ಹೆಚ್ಚು ಸ್ಟಾರ್ಟಪ್ ಗಳಿಗೆ ಪೋಷಣೆ, ನೂರಕ್ಕೂ ಹೆಚ್ಚು ಪೇಟೆಂಟ್ ಗಳನ್ನು ದಾಖಲಿಸಲು ನೆರವು ನೀಡುವುದು ಮತ್ತು ಸ್ಟಾರ್ಟ್ ಅಪ್ ಗಳ ಬೆಳವಣಿಗೆಗೆ ಸಹಾಯ ಒದಗಿಸಲು ಕ್ವಾಂಟಮ್ ವೆಂಚರ್ ಕ್ಯಾಪಿಟಲ್ ಫಂಡ್ ಅನ್ನು ಪ್ರಾರಂಭಿಸುತ್ತೇವೆ. ಜಾಗತಿಕ ಪಾಲುದಾರಿಕೆಗಳು ಇಂಡಿಯಾ ಕ್ವಾಂಟಮ್ ಸಮಾವೇಶ ಹಾಗೂ ಪ್ರತಿಷ್ಠಿತ ಅಂತರಾಷ್ಟ್ರೀಯ ಸಂಸ್ಥೆಗಳ ಸಹಯೋಗ ದಂತಹ ಕ್ರಮಗಳಿಂದಾಗಿ ನಾವು ಕರ್ನಾಟಕವನ್ನು ಜಾಗತಿಕ ಕ್ವಾಂಟಮ್ ಕೇಂದ್ರವನ್ನಾಗಿಸುತ್ತೇವೆ ಎಂದು ಹೇಳಿದರು.
ಕ್ವಾಂಟಮ್ ಯುಗಕ್ಕೆ ಒಟ್ಟಾಗಿ ಜಗತ್ತನ್ನು ಮುನ್ನಡೆಸಲು ಕರ್ನಾಟಕ ಹಾಗೂ ಭಾರತ ಸಿದ್ಧವಾಗಿದೆ ಎಂದು ಹೆಮ್ಮೆಯಿಂದ ಇಂದು ಘೋಷಿಸುತ್ತೇನೆ. ಐಟಿ, ಜೈವಿಕ ತಂತ್ರಜ್ಞಾನ ಮತ್ತು ಸಂಶೋಧನೆಯಲ್ಲಿ ಮುಂಚಿನಿಂದಲೂ ಸಮರ್ಥ ವಾಗಿರುವ ಕರ್ನಾಟಕ, ಭಾರತದ ತಂತ್ರಜ್ಞಾನ ಮತ್ತು ನಾವಿನ್ಯತೆಯ ರಾಜಧಾನಿಯಾಗಿದೆ. “ಕ್ವಾಂಟಮ್ ಪರಿಸರ ವ್ಯವಸ್ಥೆಯ ನಿರ್ಮಾಣ: ಸಮಾಜಕ್ಕೆ ಕ್ಯುಬಿಟ್ಸ್ಸಿ” ಎಂಬ ವಿಷಯವು ಕ್ವಾಂಟಮ್ ಸಂಶೋಧನೆಯನ್ನು ಆರೋಗ್ಯ, ರಕ್ಷಣಾ, ಆರ್ಥಿಕ ಮತ್ತು ಆಡಳಿತ ವ್ಯವಸ್ಥೆಗೆ ಪರಿಹಾರಗಳನ್ನು ಕಂಡುಕೊಳ್ಳಲು ನಮಗಿರುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದರು.
2025ನ್ನು ಕ್ವಾಂಟಮ್ ನ ಅಂತರರಾಷ್ಟ್ರೀಯ ವರ್ಷ ಎಂದು ವಿಶ್ವದಾದ್ಯಂತ ಆಚರಣೆ ಮಾಡುತ್ತಿರುವ ಹೊತ್ತಿನಲ್ಲಿ ಕರ್ನಾಟಕದ ಕ್ವಾಂಟಮ್ ವಿಷನ್ 2035 ನ್ನು ಘೋಷಿಸಲು ನನಗೆ ಹೆಮ್ಮೆ ಎನಿಸುತ್ತದೆ. 20 ಬಿಲಿಯನ್ ಡಾಲರ್ ಕ್ವಾಂಟಮ್ ಆರ್ಥಿಕತೆಯನ್ನು ನಿರ್ಮಾಣ ಮಾಡುವ ಮೂಲಕ ಉದ್ಯೋಗ ಸೃಷ್ಟಿ, ಕೈಗಾರಿಕೆಗಳು ಹಾಗೂ ಸಮಾಜಕ್ಕೆ ಪ್ರಯೋಜನಕಾರಿಯಾದ ಸಂಶೋಧನೆಯನ್ನು ಕೈಗೊಳ್ಳುವುದು ನಮ್ಮ ಗುರಿಯಾಗಿದೆ. ಇದನ್ನು ಸಾಧಿಸಲು, ನಾವು ಆರ್ & ಡಿ, ಕೌಶಲ್ಯ, ಮೂಲಸೌಕರ್ಯ ಮತ್ತು ಸ್ಟಾರ್ಟ್‌ಅಪ್‌ಗಳಿಗಾಗಿ ರೂ. 1,000 ಕೋಟಿ ನಿಧಿಯನ್ನು ಮೀಸಲಿರಿಸಿ ಕರ್ನಾಟಕ ಕ್ವಾಂಟಮ್ ಮಿಷನ್ (KQM) ಅನ್ನು ಪ್ರಾರಂಭಿಸುತ್ತಿದ್ದೇವೆ ಎಂದು ಹೇಳಿದರು.
ಮಾಹಿತಿ ತಂತ್ರಜ್ಞಾನ ಬೆಂಗಳೂರನ್ನು ಜಾಗತಿಕ ನಾಯಕನನ್ನಾಗಿಸಿದಂತೆಯೇ ಕ್ವಾಂಟಮ್ ಸಮಗ್ರ ಕೇಂದ್ರವಾದ ಕ್ಯೂ ಸಿಟಿ ಭಾರತವನ್ನು ಜಾಗತಿಕ ನಾಯಕನನ್ನಾಗಿಸಲಿದೆ. 2035 ರ ವೇಳೆಗೆ 10,000 ಉನ್ನತ ಕೌಶಲ್ಯವಿರುವ ಉದ್ಯೋಗ ಸೃಷ್ಟಿ ಮತ್ತು ಕರ್ನಾಟಕವನ್ನು ಏಷ್ಯಾದ ಕ್ವಾಂಟಮ್ ರಾಜಧಾನಿಯನ್ನಾಗಿ ಸ್ಥಾಪಿಸುವುದು ನಮ್ಮ ಗುರಿಯಾಗಿದೆ ಎಂದರು.
ಸಾಮಾನ್ಯ ನಾಗರಿಕರಿಗೆ ಕ್ವಾಂಟಮ್ ಹೇಗೆ ಪ್ರಯೋಜನಕಾರಿ ಎಂದು ಕೆಲವರು ಕೇಳಬಹುದು. ಪ್ರಾರಂಭಿಕ ಹಂತದಲ್ಲಿ ರೋಗಗಳ ಪತ್ತೆಗೆ, ಸುರಕ್ಷಿತ ಸಂವಹನ ಹಾಗೂ ಸ್ಮಾರ್ಟ್ ಕೃಷಿಯನ್ನು ಇದು ಸಾಧ್ಯವಾಗಿಸುತ್ತದೆ. ರಾಷ್ಟ್ರೀಯ ಭದ್ರತೆ ಶಿಕ್ಷಣ ಮತ್ತು ಆಡಳಿತವನ್ನು ಬಲಪಡಿಸುತ್ತದೆ. ಕ್ವಾಂಟಮ್ ಎನ್ನುವುದು ನಮಗೆ ಕೇವಲ ತಂತ್ರಜ್ಞಾನವಲ್ಲ. ಬದಲಿಗೆ ಒಳಗೊಳ್ಳುವ ಪ್ರಗತಿ, ಘನತೆ ಹಾಗೂ ಅಭಿವೃದ್ಧಿಯಾಗಿದೆ. ಕ್ವಾಂಟಮ್ ಕಂಪ್ಯೂಟರ್, ಕ್ರಿಪ್ಟೋಗ್ರಫಿ ಹಾಗೂ ಸೆನ್ಸಿಂಗ್ ನಲ್ಲಿ ಜಾಗತಿಕವಾಗಿ ರಾಷ್ಟ್ರಗಳು ಸ್ಪರ್ಧೆಗೆ ಇಳಿದಿವೆ. ರಾಷ್ಟ್ರೀಯ ಕ್ವಾಂಟಮ್ ಮಿಷನ್ ಮೂಲಕ ಕರ್ನಾಟಕದ ನಾಯಕತ್ವದಲ್ಲಿ ಭಾರತವು ಮುಂದಡಿಯಿಡುತ್ತಿದೆ ಎಂದು ವಿವರಿಸಿದರು.
ಐ ಐಎಸ್ಸಿ ಸೇರಿದಂತೆ ಪ್ರತಿಷ್ಠಿತ ಸಂಶೋಧನಾ ಕೇಂದ್ರಗಳು ಹಾಗೂ ಅತ್ಯುತ್ತಮ ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆಗಳೊಂದಿಗೆ ಕರ್ನಾಟಕವು ಭಾರತದ ಕ್ವಾಂಟಮ್ ಕ್ರಾಂತಿಯನ್ನು ಮುನ್ನಡೆಸಲು ಅನನ್ಯ ಸ್ಥಾನವನ್ನು ಪಡೆದಿದೆ. ಇದು ಕೇವಲ ಯೋಜನೆ ಅಲ್ಲ. ಬದಲಿಗೆ ವಿಜ್ಞಾನಿಗಳು, ಉದ್ಯಮಿಗಳು ಮತ್ತು ಯುವಕರು ಅಭಿವೃದ್ಧಿಯಾಗಲು, ಏಳಿಗೆ ಹೊಂದಲು ಮತ್ತು ಕರ್ನಾಟದಿಂದ ಕ್ವಾಂಟಮ್ ನಾವೀನ್ಯತೆಗಳನ್ನು ರಫ್ತು ಮಾಡಲು ಇದೊಂದು ಆಹ್ವಾನವಾಗಿದೆ. ಕರ್ನಾಟಕದ ಕ್ವಾಂಟಮ್ ಪರಿಸರ ವ್ಯವಸ್ಥೆಯಲ್ಲಿ ಹೂಡಿಕೆ ಮಾಡಲು ಹಾಗೂ ನಮ್ಮ ಸಂಸ್ಥೆಗಳೊಂದಿಗೆ ಸಹಯೋಗ ಬೆಳೆಸಿಕೊಳ್ಳುವಂತೆ ಉದ್ಯಮಿಗಳಿಗೆ ನಾನು ಒತ್ತಾಯಿಸುತ್ತೇನೆ. ಕ್ವಾಂಟಮ್ ನಮ್ಮ ಭವಿಷ್ಯವಾಗಿದೆ. ವಿಜ್ಞಾನಿಗಳೇ ಮತ್ತು ವಿದ್ಯಾರ್ಥಿಗಳೇ, ಕರ್ನಾಟಕ ನಿಮ್ಮ ಆಟದ ಮೈದಾನವಾಗಲಿ ಎಂದರು.