ಡಿಸೆಂಬರ್ 27ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಬಂಧನಕ್ಕೊಳಗಾಗಿ ಕಳೆದ 12 ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿಯಾಗಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಮೂವತ್ತು ಮುಖಂಡರು ಇಂದು ಬೆಳಿಗ್ಗೆ ಬಿಡುಗಡೆಯಾಗುತ್ತಿದ್ದಂತೆ ಅವರಿಗೆ ಅದ್ದೂರಿ ಸ್ವಾಗತ ಕೋರಲಾಯಿತು.
ಗಾಂಧಿನಗರದ ಕರವೇ ಕೇಂದ್ರ ಕಚೇರಿ ಮುಂಭಾಗ ನೆರೆದ ನೂರಾರು ಕಾರ್ಯಕರ್ತರು ಬಿಡುಗಡೆಯಾದ ಎಲ್ಲ ಮುಖಂಡರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಎಲ್ಲ ಹೋರಾಟಗಾರರಿಗೆ ಜೈಕಾರ ಕೂಗಲಾಯಿತು.
ಇನ್ನೊಂದೆಡೆ, ಬಿಡುಗಡೆಯಾದ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರನ್ನು 2017ರ ಪ್ರಕರಣ ಸಂಬಂಧ ಕುಮಾರಸ್ವಾಮಿ ಲೇ ಔಟ್ ಪೊಲೀಸರು ಬಂಧಿಸಿದ್ದು, ಇನ್ನೇನು ಕೆಲವು ನ ನಿಮಿಷಗಳಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹಾಜರುಪಡಿಸಲಿದ್ದಾರೆ.
ಕನ್ನಡದಲ್ಲಿ ನಾಮಫಲಕ ಅಭಿಯಾನ ಕೈಗೊಂಡು, ಬೆಂಗಳೂರಿನಲ್ಲಿ ತೀವ್ರ ಸ್ವರೂಪದ ಪ್ರತಿಭಟನೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರಿಗೆ ಹಾಗು ಇತರ ಮೂವತ್ತು ಕರವೇ ಮುಖಂಡರಿಗೆ ದೇವನಹಳ್ಳಿ ಐದನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಕೋರ್ಟ್ ಶನಿವಾರ ಜಾಮೀನು ಮಂಜೂರು ಮಾಡಿತ್ತು.
ಡಿಸೆಂಬರ್ 27ರಂದು ಕರ್ನಾಟಕ ರಕ್ಷಣಾ ವೇದಿಕೆಯ ಹತ್ತು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಬೆಂಗಳೂರಿನ ಹಲವಾರು ಭಾಗಗಳಲ್ಲಿ ನಡೆಸಿದ ಕನ್ನಡ ನಾಮಫಲಕ ಅಭಿಯಾನದ ಸಂದರ್ಭದಲ್ಲಿ ಕನ್ನಡವಿಲ್ಲದ ಸಾವಿರಾರು ನಾಮಫಲಕಗಳನ್ನು, ಜಾಹೀರಾತು ಫಲಕಗಳನ್ನು ಕಿತ್ತೆಸೆದಿದ್ದರು. ಘಟನೆಯ ನಂತರ ರಾಜ್ಯ ಸರ್ಕಾರ ರಾಜ್ಯದ ಎಲ್ಲ ಉದ್ಯಮ, ಅಂಗಡಿ ಮುಂಗಟ್ಟುಗಳ ಮುಂದೆ ಶೇ.60 ರಷ್ಟು ಕನ್ನಡದ ನಾಮಫಲಕಗಳು ಇರಬೇಕು ಮತ್ತು ಕನ್ನಡವೇ ಮೊದಲಿರಬೇಕು ಎಂಬ ಸುಗ್ರೀವಾಜ್ಞೆ ಹೊರಡಿಸಿತ್ತು.
ಕರವೇ ಮುಖಂಡರು ಕಾರ್ಯಕರ್ತರ ಮೇಲೆ ಚಿಕ್ಕಜಾಲ, ಕಬ್ಬನ್ ಪಾರ್ಕ್, ಆಡುಗೋಡಿ, ಕಾಟನ್ ಪೇಟೆ ಇತ್ಯಾದಿ ಪೊಲೀಸ್ ಠಾಣೆಗಳಲ್ಲಿ ಹತ್ತಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ.
ಚಿಕ್ಕಜಾಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರೂ ಸೇರಿದಂತೆ ಹಲವರ ಮೇಲೆ ದಾಖಲಿಸಲಾಗಿದ್ದ ಪ್ರಕರಣ ಸಂಬಂಧ ದೇವನಹಳ್ಳಿ ಐದನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ಈ ಸಂಬಂಧ ಜಾಮೀನು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ ಕಳೆದ ಶನಿವಾರ ಜಾಮೀನು ಮಂಜೂರು ಮಾಡಿತ್ತು.
ನಾರಾಯಣಗೌಡರ ಬಿಡುಗಡೆಗೆ ಆಗ್ರಹಿಸಿ ರಾಜ್ಯಾದ್ಯಂತ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ರಸ್ತೆ ತಡೆ, ಪಂಜಿನ ಮೆರವಣಿಗೆ, ರಕ್ತದಲ್ಲಿ ಪತ್ರ ಸೇರಿದಂತೆ ನಾನಾ ಬಗೆಯ ಪ್ರತಿಭಟನೆಗಳನ್ನು ಕಳೆದ ಹನ್ನೆರಡು ದಿನಗಳಿಂದಲೂ ನಡೆಸುತ್ತ ಬಂದಿದ್ದರು.
ಶನಿವಾರದಿಂದಲೇ ಪರಪ್ಪನ ಅಗ್ರಹಾರ ಜೈಲಿನ ಸಮೀಪ ಪೊಲೀಸರು ಸರ್ಪಗಾವಲನ್ನೇ ನಿರ್ಮಿಸಿದ್ದರು. ಮೂವರು ಎಸಿಪಿಗಳ ನೇತೃತ್ವದಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ಮುಂಜಾಗ್ರತೆ ಕ್ರಮವಾಗಿ 144ನೇ ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.