ಬೆಂಗಳೂರು : ಎಸ್ ಎಸ್ ಎಲ್ ಸಿ ಪರೀಕ್ಷೆಗಳ ಅಂಕವನ್ನು 625ರಿಂದ 525 ಕ್ಕೆ ಇಳಿಸಿ, ತೃತೀಯ ಭಾಷೆಗೆ ಗ್ರೇಡಿಂಗ್ ವ್ಯವಸ್ಥೆ ಜಾರಿಗೆ ತರುವ ಐತಿಹಾಸಿಕ ನಿರ್ಧಾರ ಕೈಗೊಂಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ನಿವಾಸಕ್ಕೆ ತೆರಳಿದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರು, ಕನ್ನಡಿಗರ ದಶಕಗಳ ಬೇಡಿಕೆ ಈಡೇರಿಸಿದ್ದಕ್ಕಾಗಿ ಹೃತ್ಪೂರ್ವಕವಾಗಿ ಅಭಿನಂದಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಸ್.ಎಸ್.ಎಲ್.ಸಿ. ಮಕ್ಕಳಿಗೆ ತೃತೀಯ ಭಾಷೆಯ ಹೊರೆಯಿಂದ ಮುಕ್ತಿ ನೀಡಿ, ತೃತೀಯ ಭಾಷೆಗೆ ಗ್ರೇಡಿಂಗ್ ನೀಡುವ ರಾಜ್ಯ ಸರ್ಕಾರದ ನಿರ್ಧಾರ ಐತಿಹಾಸಿಕವಾದದ್ದು. ಇದು ಒಂದು ರೀತಿಯಲ್ಲಿ ಕನ್ನಡದ ಮಹಾಜನತೆಗೆ ಶಾಪವಿಮೋಚನೆ ಎಂದಿದ್ದಾರೆ.
ಇಂಥ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು, ಶಿಕ್ಷಣ ಸಚಿವ ಮಧು ಬಂಗಾರಪ್ಪ ಮತ್ತು ಇಡೀ ಸರ್ಕಾರವನ್ನು ಕರ್ನಾಟಕ ರಕ್ಷಣಾ ವೇದಿಕೆ ಅಭಿನಂದಿಸುತ್ತದೆ ಎಂದು ಹರ್ಷವ್ಯಕ್ತಪಡಿಸಿದ್ದಾರೆ.
ಕರವೇ ನಿಯೋಗದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಸಣ್ಣೀರಪ್ಪ, ರಾಜ್ಯ ಉಪಾಧ್ಯಕ್ಷ ಅಬ್ಬಿಗೆರೆ ವಿನೋದ್, ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಜಾವಗಲ್, ರಾಜ್ಯ ಪ್ರಧಾನ ಸಂಚಾಲಕ ಮೋಹನ್ ಗೌಡ, ಬೆಂಗಳೂರು ನಗರ ಘಟಕದ ಅಧ್ಯಕ್ಷ ಧರ್ಮರಾಜ್ ಗೌಡ, ಬೆಂಗಳೂರು ನಗರ ಮಹಿಳಾ ಘಟಕದ ಅಧ್ಯಕ್ಷೆ ಶ್ವೇತಾ ಮೋಹನ್ ಗೌಡ ಉಪಸ್ಥಿತರಿದ್ದರು.
ಕರವೇಯ ಮುಖ್ಯಾಂಶಗಳು :
ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣರಾಗುವುದು: 2024ರ SSLC ಪರೀಕ್ಷೆಯಲ್ಲಿ 90,000ಕ್ಕೂ ಹೆಚ್ಚು ಕನ್ನಡದ ಮಕ್ಕಳು ಹಿಂದಿಯಲ್ಲಿ ಫೇಲ್ ಆಗಿದ್ದರು. 2024-25ರಲ್ಲಿ ಇದು 1,42,400ಕ್ಕೆ ಏರಿಕೆಯಾಗಿತ್ತು. ಇದರಿಂದಾಗಿ ಅನೇಕ ಮಕ್ಕಳು ಒಂದು ವರ್ಷ ಕಳೆದುಕೊಳ್ಳುತ್ತಿದ್ದರು ಮತ್ತು ಭವಿಷ್ಯ ಅನಿಶ್ಚಿತವಾಗುತ್ತಿತ್ತು.
ಶೈಕ್ಷಣಿಕ ಹೊರೆ ಮತ್ತು ಒತ್ತಡ ಹೆಚ್ಚುವುದು: ಮೂರು ಭಾಷೆಗಳನ್ನು ಕಡ್ಡಾಯವಾಗಿ ಕಲಿಯುವುದು ವಿದ್ಯಾರ್ಥಿಗಳ ಮೇಲೆ ಅನಗತ್ಯ ಒತ್ತಡ ಹೇರಿತ್ತು. ವಿಶೇಷವಾಗಿ ಗ್ರಾಮೀಣ ಪ್ರದೇಶದ ಕನ್ನಡ ಮಕ್ಕಳು ವಿದ್ಯಾಭ್ಯಾಸ ತೊರೆಯುವ (ಡ್ರಾಪ್ಔಟ್)ಪ್ರಮಾಣ ಹೆಚ್ಚುತ್ತಿತ್ತು.
ಮಾತೃಭಾಷೆ ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಪ್ರಾವೀಣ್ಯತೆ ಕುಸಿಯುವುದು: ಹಿಂದಿ ಕಲಿಕೆಯ ಹೊರೆಯಿಂದ ಕನ್ನಡದ ಮಕ್ಕಳು ತಮ್ಮ ಮಾತೃಭಾಷೆ ಮತ್ತು ಎರಡನೇ ಭಾಷೆ ಇಂಗ್ಲಿಷ್ನಲ್ಲಿ ಸಾಕಷ್ಟು ಗಮನ ನೀಡಲು ಸಾಧ್ಯವಾಗುತ್ತಿರಲಿಲ್ಲ. ಇದು ಒಟ್ಟು ಭಾಷಾ ಪ್ರಾವೀಣ್ಯತೆಯನ್ನೇ ದುರ್ಬಲಗೊಳಿಸುತ್ತಿತ್ತು.
ಮುಖ್ಯ ವಿಷಯಗಳಲ್ಲಿ ಗಮನ ಕಡಿಮೆಯಾಗುವುದು: ತೃತೀಯ ಭಾಷೆಗೆ ಸಮಯ ಮತ್ತು ಶಕ್ತಿ ವ್ಯಯವಾಗುತ್ತಿದ್ದರಿಂದ ಗಣಿತ, ವಿಜ್ಞಾನ, ಸಾಮಾಜಿಕ ವಿಜ್ಞಾನ ಮುಂತಾದ ಮುಖ್ಯ ವಿಷಯಗಳಲ್ಲಿ ಗಮನ ಕಡಿಮೆಯಾಗಿ ಮಕ್ಕಳ ವಿದ್ಯಾಭ್ಯಾಸ ಮಟ್ಟ ಕುಸಿಯುತ್ತಿತ್ತು.
ಭವಿಷ್ಯಕ್ಕೆ ಉಪಯೋಗವಿಲ್ಲದ ಭಾಷೆಯ ಹೇರಿಕೆ: ಕನ್ನಡದ ಮಕ್ಕಳಿಗೆ ಹಿಂದಿ ಅಥವಾ ಇತರ ತೃತೀಯ ಭಾಷೆ ಶಾಲೆಯ ನಂತರ ಉಪಯೋಗಕ್ಕೆ ಬರುವ ಸಾಧ್ಯತೆ ಕಡಿಮೆ. ಇದು ಕೇವಲ ಮೂರು ಭಾಷಾ ಸೂತ್ರದ ಹೆಸರಿನಲ್ಲಿ ಅನಗತ್ಯ ಹೊರೆಯಾಗಿತ್ತು.
ಸಾಮಾಜಿಕ-ಆರ್ಥಿಕ ಅಸಮಾನತೆ ಹೆಚ್ಚುವುದು: ಗ್ರಾಮೀಣ ಮತ್ತು ಕನ್ನಡ ಮಾಧ್ಯಮ ಶಾಲೆಗಳ ಮಕ್ಕಳಿಗೆ ತೃತೀಯ ಭಾಷೆ ಕಲಿಕೆ ಇನ್ನೂ ಕಷ್ಟಕರವಾಗಿತ್ತು. ಇದು ಶಿಕ್ಷಣದಲ್ಲಿ ಅಸಮಾನತೆ ಕಾರಣವಾಗಿತ್ತು ಮತ್ತು ಮಕ್ಕಳ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿತ್ತು.
2025ರ ಜುಲೈ 3ರ ಪ್ರತಿಭಟನೆ: ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರಿನಲ್ಲಿ ದೊಡ್ಡ ಪ್ರದರ್ಶನ, ಧರಣಿ ನಡೆಸಿ ದ್ವಿಭಾಷಾ ನೀತಿಯನ್ನು ಜಾರಿಗೊಳಿಸಲು ಆಗ್ರಹಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ ರಾಜ್ಯ ಮತ್ತು ಕೇಂದ್ರೀಯ ಪಠ್ಯಕ್ರಮಗಳಿಂದ ಹಿಂದಿಯನ್ನು ತೆಗೆಯುವಂತೆ ಆಗ್ರಹಿಸಿತ್ತು.
ಸರ್ಕಾರ ಯಾವುದೇ ಕಾರಣಕ್ಕೂ ತನ್ನ ಈ ನಿರ್ಧಾರದಿಂದ ಹಿಂದಕ್ಕೆ ಸರಿಯಬಾರದು. ಯಾರ ಒತ್ತಾಯಕ್ಕೂ, ಒತ್ತಡಕ್ಕೂ ಮಣಿಯಬಾರದು.
ದಶಕಗಳ ಕಾಲದ ಕನ್ನಡಿಗರ ಬೇಡಿಕೆ ಈಡೇರಿದೆ. ಇದಕ್ಕೆ ಯಾರಾದರೂ ಅಪಸ್ವರ ಎತ್ತಿದರೆ ನಿಸ್ಸಂಶಯವಾಗಿ ಅವರು ಕನ್ನಡದ್ರೋಹಿಗಳೇ ಆಗಿರುತ್ತಾರೆ. ಅಂಥವರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟ ರೂಪಿಸಲಿದೆ.
ಸರ್ಕಾರ ಇಲ್ಲಿಗೆ ನಿಲ್ಲದೆ, ಪೂರ್ಣ ಪ್ರಮಾಣದಲ್ಲಿ ದ್ವಿಭಾಷಾ ನೀತಿಯನ್ನು ಜಾರಿಗೊಳಿಸಬೇಕು. ಕನ್ನಡ ಪ್ರಥಮ ಭಾಷೆಯಾಗಿ ಎಲ್ಲ ಹಂತದ ಶಿಕ್ಷಣ ಕ್ರಮಗಳಲ್ಲಿ ಕಡ್ಡಾಯವಾಗಬೇಕು. ಇದನ್ನು ಉಲ್ಲಂಘಿಸುವ ಖಾಸಗಿ ಶಾಲೆಗಳ ಪರವಾನಗಿ ರದ್ದುಪಡಿಸಬೇಕು.

