ಕೋಲಾರ: ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಚೀಲಗಳೂ ಸೇರಿದಂತೆ ಸಿಂಗಲ್ ಯೂಸ್ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸಿಡಲಾಗಿದ್ದ ದಾಸ್ತಾನು ಗೋಡೋನ್ ಗಳು, ಅಂಗಡಿಗಳ ಮೇಲೆ ದಾಳಿ ಮಾಡಿದ ಅಧಿಕಾರಿಗಳು ಲಕ್ಷಾಂತರ ರೂಪಾಯಿ ಮೌಲ್ಯದ ಪ್ಲಾಸ್ಟಿಕ್ ವಶಕ್ಕೆ ಪಡೆದಿದ್ದಾರೆ.
ಕೋಲಾರ ನಗರದ ದೊಡ್ಡಪೇಟೆ ಸೇರಿದಂತೆ ಹಲವೆಡೆ ಗೋಡೌನ್, ಚಿಲ್ಲರೆ ಅಂಗಡಿಗಳಿಂದ ಅಪಾಯಕಾರಿ ಪ್ಲಾಸ್ಟಿಕ್ ವಶಕ್ಕೆ ಪಡೆಯಲಾಗಿದೆ.
ಕೋಲಾರದಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳು ಕಾಣಿಸಿಕೊಂಡಿರುವ ಕುರಿತು ಕನ್ನಡ ಪ್ಲಾನೆಟ್ ಸೋಮವಾರ ವಿಸ್ತ್ರತ ವರದಿ ಪ್ರಕಟಿಸಿತ್ತು.
ಕನ್ನಡ ಪ್ಲಾನೆಟ್ ವರದಿ ಬೆನ್ನಲ್ಲೇ ಚುರುಕಾದ ಜಿಲ್ಲಾಡಳಿತ ನಿಷೇಧಿತ ಪ್ಲಾಸ್ಟಿಕ್ ಮಾರಾಟ ತಡೆಯಲು ಮುಂದಾಯಿತು. ನಗರಸಭೆ, ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ, ಜಿಲ್ಲಾ ಪೊಲೀಸ್ ಅಧಿಕಾರಿಗಳ ತಂಡಗಳು ಜಂಟಿ ಕಾರ್ಯಾಚರಣೆ ನಡೆಸಿ ನಗರದಾದ್ಯಂತ ವ್ಯಾಪಕ ತಪಾಸಣೆ ನಡೆಸಿತು.
ನಗರಸಭೆ ಆಯುಕ್ತ ಶಿವಾನಂದ, ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ ಅಧಿಕಾರಿ ರಾಜು, ಪೊಲೀಸ್ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಕಾರ್ಯಾಚರಣೆ ವೇಳೆ ಸುಮಾರು ಹನ್ನೊಂದು ಟನ್ ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡಿರುವ ಮಾಲನ್ನು ಪರೀಕ್ಷೆಗೊಳಪಡಿಸಲು ಬೆಂಗಳೂರಿನ ಪರೀಕ್ಷಾ ಕೇಂದ್ರಕ್ಕೆ ರವಾನಿಸಲಾಗಿದೆ.