ಎಚ್ಚರಿಕೆ ಎಚ್ಚರಿಕೆ……
ನಾನು ಕೂಪದ ಮೂಲೆಯಲ್ಲಿ
ಹತ್ತಲೂ ಆಗದೆ; ಬೀಳಲು ಆಗದೆ ನೇತಾಡುತ್ತಿದ್ದೇನೆ
ಬರಲಿರುವ ವಸಂತಕ್ಕೆ ನೀರಿನ ಕನಸು
ಹಜಾರದ ಅರುಗಿನಲ್ಲಿದ್ದ ಕೋಳಿಗೂಡಿನಲ್ಲಿ
ಮರಿಯಾಗದ ತತ್ತಿಗಳಿವೆ…..
ಅಜ್ಜನೋ ಅಜ್ಜನಪ್ಪನೋ ಮಬ್ಬು ವರ್ಣದ ಕಲ್ಲು ಜೋಡಿಸಿ ಕಟ್ಟಿದ ಕೂಪದ ತಳ ಬಲು ಆಳ
ಮೊನ್ನೆ ಮೊನ್ನೆ ತತ್ತಿ ಇಟ್ಟ ಕೋಳಿ ಬಿದ್ದಾಗ
ಹಾವು ಬಿದ್ದಿತ್ತು; ನಾನು ಮಾತ್ರ ಮೂಲೆ.
ಹಗ್ಗ ಹಾಕಿದ ಗಾಲಿಗೆ ಕುಣಿಕೆ ಸರಿಯಾಗಿಲ್ಲ
ಬಿದ್ದ ಕೊಡವನೆತ್ತಲು ಅಂತರಗಂಗೆ ಇದೆ….
ಕೂಪದ ಸಂಗಬಿಡದ ಹೆಂಚಿನ ಮನೆಯೊಳಗೆ
ನೀರಂಡೆ,ಒಲೆ,ಬಚ್ಚಲು,ದನ,ಕರ, ಎಮ್ಮೆ
ದೊಡ್ಡ ಕೊನರದ ತುಂಡು,ತುಂಡಿನ ಕೆಂಡ
ಕಾದು ಕಾದು ಉಪ್ಪಿನ ಎಕ್ಕಳಿಕೆ ಏಳುವ
ಗಣಗಣ ನೀರು; ಒದ್ದೆಯಾಗುವ ತಲೆಗಳ ತುಂಬಾ
ಬೇನೆಯದೇ ಬೆವರು.. ಸುಡುವ ಅಂಬು ತುಂಬಿದವು
ಬೆಂದ ಸೀಗೆಕಾಯಿ ಹರಳೆಣ್ಣೆಯ ತಂಪು ಉಳಿಸಲಿಲ್ಲ
ಕತ್ತಾಳೆಯ ಹಗ್ಗದ ಮೇಲೆ ಒಣಗುತ್ತಿದ್ದ ಒಲ್ಲಿಯ
ಬಿಡಿಸಿ ನೋಡಿದರೆ ಚಿಮಣಿಯ ಕಪ್ಪು ಕಿಟ್ಟಿನ ಗುರುತು
ಮಹಡಿಯ ಮೇಲಿದ್ದ ಕರಡಿ ಚರ್ಮ
ಅಮ್ಮಂದಿರ ಕಣ್ಣಲ್ಲಿ ಬಂದೂಕದ ಚಿತ್ರ ಬರೆದಿದೆ
ಉದ್ದನೆಯ ಎಂಚಿನಮೇಲೆ ಸುಟ್ಟ ಹೋಳಿಗೆಯೆಲ್ಲಿ??
ಸ್ವಪ್ನವಾಯಿತು ಕೂಪದ ಮೂಲೆಯಲ್ಲಿ ನೇತಾಡುತ್ತಿದ್ದ ನನಗೆ, ಮಕ್ಕಳ ತಾಯಿ ಸತ್ತು ಬರೆಯುತ್ತಿದ್ದಾಳೆ
ಎಚ್ಚರಿಕೆ, ಎಚ್ಚರಿಕೆ ಕೂಪ ಒಣಗುವಾಗ ಜೋಳದ ಹಾಲ್ದೆನೆ ನೆಲಕಚ್ಚಿ ಜೊಳ್ಳಾಗಿವೆ…. ಸಣ್ಣ ಕೋಣೆಗೆ
ತೆನೆ ಒಣಗುವ ವಾಸನೆ ಬಡಿದು ಅಮ್ಮನ ಕೈಗಳಿಂದ
ಬೀಗ ಜಾರಿ ಪರವೂರಿನ ಗ್ರಾಮಜಡೆಯ ನಡುನಕ್ಕಿತು
ನಾನಿನ್ನೂ ಕೂಪ,ಗಾಲಿ,ಹಗ್ಗ, ಬಿಂದಿಗೆಯ ಜೊತೆ
ತೂಗಾಡುತ್ತಲೆ ಗತವ ಕಾಣುತ್ತಿದ್ದೇನೆ..ಸತ್ತವಳು
ಸಾಹುಕಾರ್ತಿಯಾಗಿ ಬಂಗಾರ ಒಣಗಿಸುತ್ತಾ ಬದುಕಿದ್ದಾಳೆ… ಅಮ್ಮಂದಿರ ರೋದನೆ ಅಂತಸ್ತುಗಳ
ಮನೆಯ ತುದಿಯಲ್ಲಿ ಮಕ್ಕಳಿಗೆ ರೊಟ್ಟಿ ಬಡಿಯುತ್ತಿದೆ
ಕೋಳಿ ಸತ್ತಿದೆ, ಹಾವು ಬದುಕಿದೆ.ಕೂಪದೊಳಗೆ ಜೇಡಗಳು ಬಲೆಹೆಣೆದು ತಳಕಾಣುತ್ತಿಲ್ಲ..,..
ಗೀತಾ ಎನ್ ಸ್ವಾಮಿ.
ಉಪನ್ಯಾಸಕಿ