ಸಾಹಿತಿ, ಸಂಶೋಧಕ ಚಂದ್ರಕಾಂತ ಬಿಜ್ಜರಗಿ ಅವರಿಗೆ ಪ್ರತಿಷ್ಠಿತ ಕನಕಶ್ರೀ ಪ್ರಶಸ್ತಿ: ಸಚಿವ ಶಿವರಾಜ ತಂಗಡಗಿ

Most read

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪ್ರತಿ ವರ್ಷ ನೀಡುವ ಪ್ರತಿಷ್ಠಿತ ಕನಕಶ್ರೀ ಪ್ರಶಸ್ತಿಗೆ ಪ್ರಸಕ್ತ ಸಾಲಿನಲ್ಲಿ ವಿಜಯಪುರದ ಹಿರಿಯ ಸಾಹಿತಿ, ಸಂಶೋಧಕ ಚಂದ್ರಕಾಂತ ಬಿಜ್ಜರಗಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

ಚಂದ್ರಕಾಂತ ಬಿಜ್ಜರಗಿ ಅವರು ದರ್ಪಣ ವಾರಪತ್ರಿಕೆಯ ಸಂಪಾದಕರಾಗಿ ಕೂಡ ಕಾರ್ಯನಿರ್ವಹಿಸಿದ್ದಾರೆ. ಇವರು ಹಾಲುಮತ ಸನಾತನ ಧರ್ಮ, ಕುರುಬರ ಕುಲ ಪುತ್ರ ಚಂದ್ರಗುಪ್ತ ಮೌರ್ಯ, ದಾರ್ಶನಿಕ ಕವಿ ಕನಕದಾಸ ಸೇರಿದಂತೆ ಅನೇಕ ಕೃತಿಗಳನ್ನು ರಚಿಸಿದ್ದಾರೆ, ಇವರ ಅನೇಕ ಸಂಶೋಧನಾ ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಡಾ. ಕೆ.ಮರುಳಸಿದ್ದಪ್ಪ ಅವರ ಅಧ್ಯಕ್ಷತೆಯ ಆಯ್ಕೆ ಸಮಿತಿ ಚಂದ್ರಕಾಂತ ಬಿಜ್ಜರಗಿ ಅವರನ್ನು ಆಯ್ಕೆ ಮಾಡಿದೆ ಎಂದು ಅವರು ತಿಳಿಸಿದ್ದಾರೆ.

ಶನಿವಾರ ದಿನಾಂಕ 8.11.2025 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿರುವ ಸಂತ ಶ್ರೇಷ್ಠ ಕನಕದಾಸ ಜಯಂತಿ ಆಚರಣೆ ಸಂದರ್ಭದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರದಾನ ಮಾಡಲಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ. ಪ್ರಶಸ್ತಿ 5 ಲಕ್ಷ ರೂಪಾಯಿ ನಗದು ,ಕನಕದಾಸರ ಪುತ್ಥಳಿ ಹಾಗೂ ಪ್ರಶಸ್ತಿ ಫಲಕ, ಫಲ ತಾಂಬೂಲ ಒಳಗೊಂಡಿದೆ.

More articles

Latest article