ಚೆನ್ನೈ: ಖ್ಯಾತ ನಟ ಕಮಲ್ ಹಾಸನ್ ಅವರು ಡಿಎಂಕೆ ಪಕ್ಷದಿಂದ ರಾಜ್ಯಸಭೆಗೆ ಆಯ್ಕೆಯಾಗುವುದು ಖಚಿತವಾಗಿದೆ. ಪಕ್ಷದ ಮುಖಂಡ ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಇಂದು ಕಮಲ್ ಹಾಸನ್ ಅವರನ್ನು ಭೇಟಿಯಾಗಿ ಅಭಿನಂದಿಸಿದರು.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಉದಯನಿಧಿ, ನಾವು ಮಕ್ಕಳ್ ನೀಧಿ ಮೈಯಂ ನಾಯಕ, ಕಲೈಜ್ಞಾನಿ ಕಮಲ್ ಹಾಸನ್ ಅವರನ್ನು ಇಂದು ಅವರ ನಿವಾಸದಲ್ಲಿ ಸೌಜನ್ಯಯುತವಾಗಿ ಭೇಟಿ ಮಾಡಿದ್ದೇನೆ. ನಮ್ಮನ್ನು ಆತ್ಮೀಯವಾಗಿ ಸ್ವಾಗತಿಸಿ ರಾಜಕೀಯ, ಕಲೆ ಸೇರಿದಂತೆ ವಿವಿಧ ಕ್ಷೇತ್ರಗಳನ್ನು ಕುರಿತು ಅಭಿಪ್ರಾಯ ವಿನಿಮಯ ಮಾಡಿಕೊಂಡಿದ್ದೇವೆ. ಈ ಅವಕಾಶ ನೀಡಿದ ಕಮಲ್ ಸರ್ ಅವರಿಗೆ ನನ್ನ ಪ್ರೀತಿ ಮತ್ತು ಕೃತಜ್ಞತೆಗಳು ಎಂದು ಹೇಳಿದ್ದಾರೆ.
ಹಿರಿಯ ಡಿಎಂಕೆ ನಾಯಕ ಮತ್ತು ಹಿಂದೂ ಧಾರ್ಮಿಕ ಮತ್ತು ದತ್ತಿ ಸಚಿವ ಪಿಕೆ ಶೇಖರ್ ಬಾಬು ಅವರು ಬುಧವಾರ ಅಲ್ವಾರ್‌ಪೇಟೆಯ ತಮ್ಮ ಕಚೇರಿಯಲ್ಲಿ ಹಾಸನ್ ಅವರನ್ನು ಖುದ್ದಾಗಿ ಭೇಟಿಯಾಗಿದ್ದರು. ನಂತರ, ಕಮಲ್ ಹಾಸನ್ ಅವರ ಪಕ್ಷದ ಮಕ್ಕಳ್ ನೀಧಿ ಮಯ್ಯಮ್ (ಎಂಎನ್‌ಎಂ) ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯು ಸಭೆಯ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಇದನ್ನು ಸೌಜನ್ಯ ಭೇಟಿ ಎಂದು ಕರೆದುಕೊಡಿದೆ.
ಡಿಎಂಕೆ 2024 ರಲ್ಲಿ ತಮ್ಮ ಚುನಾವಣಾ ಒಪ್ಪಂದದ ಭಾಗವಾಗಿ ಕಮಲ್ ಹಾಸನ್ ಅವರಿಗೆ ರಾಜ್ಯಸಭಾ ಸ್ಥಾನವನ್ನು ಬಿಟ್ಟುಕೊಡುವ ಭರವಸೆ ನೀಡಿತ್ತು. ಕಮಲ್ ಹಾಸನ್ ಅವರ ಪಕ್ಷ ಮಕ್ಕಳ್ ನೀಧಿ ಮಯ್ಯಮ್ (ಎಂಎನ್‌ಎಂ) ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಆದರೆ, ಡಿಎಂಕೆ ನೇತೃತ್ವದ ಇಂಡಿಯಾ ಬಣಕ್ಕೆ ಬೆಂಬಲವನ್ನು ನೀಡಿತ್ತು.
ಕಮಲ್ ಹಾಸನ್ ಅವರು ಡಿಎಂಕೆ ನೇತೃತ್ವದ ಬಣದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ನಿರ್ಧಾರವು ವೈಯಕ್ತಿಕ ರಾಜಕೀಯ ಲಾಭಕ್ಕಿಂತ ಹೆಚ್ಚಾಗಿ ರಾಷ್ಟ್ರೀಯ ಹಿತಾಸಕ್ತಿಯಿಂದ ನಡೆಸಲ್ಪಟ್ಟಿದೆ ಎಂದು ಸ್ಪಷ್ಟಪಡಿಸಿದ್ದರು. ಇದು ದೇಶಕ್ಕೆ ಸಂಬಂಧಿಸಿದ ವಿಷಯವಾಗಿರುವುದರಿಂದ, ಅದು ಇರಬೇಕಾದ ಸ್ಥಳದಲ್ಲಿ ನಾನು ಕೈಕುಲುಕಿದ್ದೇನೆ ಎಂದು ಅವರು ಹೇಳಿದ್ದರು. ನಾನು ಸ್ಪರ್ಧಿಸುವುದಿಲ್ಲ. ಆದರೆ ಇಂಡಿಯಾ ಮೈತ್ರಿಕೂಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿರುತ್ತದೆ. ಏಕೆಂದರೆ, ಇದು ಒಂದು ಸ್ಥಾನಕ್ಕಾಗಿ ಅಲ್ಲ, ದೇಶಕ್ಕಾಗಿ ಎಂದು ಹೇಳಿ ಗಮನ ಸೆಳೆದಿದ್ದರು.
ದೇಶದ ಚಿತ್ರರಂಗದ ಅತ್ಯುತ್ತಮ ನಟರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಕಮಲ್ ಹಾಸನ್, 2018 ರಲ್ಲಿ ತಮ್ಮ ಮಕ್ಕಳ್ ನೀಧಿ ಮಯ್ಯಮ್ (ಎಂಎನ್ಎಂ) ಪಕ್ಷವನ್ನು ಹುಟ್ಟು ಹಾಕುವ ಮೂಲಕ ರಾಜಕೀಯ ಪ್ರವೇಶಿಸಿದ್ದರು.