Wednesday, December 10, 2025

ಕಲ್ಲಡ್ಕ ಪ್ರಭಾಕರ್ ಭಟ್ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ:ತಮ್ಮ ವಾದ ಆಲಿಸಲು ದೂರುದಾರೆ ಈಶ್ವರಿ ಪದ್ಮುಂಜ ಅರ್ಜಿ ಸಲ್ಲಿಕೆ; ನವಂಬರ್ 4 ಕ್ಕೆ ಮುಂದೂಡಿಕೆ

Most read

ಮಂಗಳೂರು: ಆರ್‌ ಎಸ್‌ ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಜಾಮೀನು ಅರ್ಜಿ ವಿಚಾರಣೆ ನಡೆಸುವಾಗ ತಮ್ಮ ವಾದವನ್ನೂ ಆಲಿಸಬೇಕು ಎಂದು ಈಶ್ವರಿ ಪದ್ಮುಂಜ ಪುತ್ತೂರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ದ್ವೇಷ ಭಾಷಣ ಮಾಡಿರುವ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಈಶ್ವರಿ ಪದ್ಮುಂಜ ಅವರು ಈಗಾಗಲೇ ಬಿಎನ್‌ಎಸ್‌ಎಸ್‌ ಸೆ.338-339 ಅಡಿ ದೂರು ಸಲ್ಲಿಸಿದ್ದಾರೆ.

ಪ್ರಭಾಕರ ಭಟ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸುವಾಗ ಪ್ರಾಸಿಕ್ಯೂಶನ್ ಜತೆ ದೂರುದಾರರ ವಕೀಲರ ವಾದವನ್ನೂ ಆಲಿಸಿ ಜಾಮೀನು ನೀಡುವ ಬಗ್ಗೆ ಕೋರ್ಟ್ ವಿವೇಚನೆಯನ್ನು ಬಳಸಿಕೊಳ್ಳಬೇಕು ಎಂದು ಈಶ್ವರಿ ಪದ್ಮುಂಜ ಅವರ ಪರವಾಗಿ ಹಿರಿಯ ವಕೀಲ ಸತೀಶನ್ ಅವರು ಅರ್ಜಿ ಸಲ್ಲಿಸಿ ವಾದ ಮಂಡಿಸಿದ್ದಾರೆ.

ಇಂದು ಕಲ್ಲಡ್ಕ ಪ್ರಭಾಕರ ಭಟ್ ನಿರೀಕ್ಷಣಾ ಜಾಮೀನು ಅರ್ಜಿ ಇತ್ಯರ್ಥಗೊಳ್ಳಬೇಕಿತ್ತು. ಆದರೆ ಈಶ್ವರಿ ಪದ್ಮುಂಜ ಪರ ವಕೀಲ ಸತೀಶನ್ ಅರ್ಜಿ ಸಲ್ಲಿಸಿದ್ದರಿಂದ ನ್ಯಾಯಾಲಯವು ಪ್ರಭಾಕರ ಭಟ್ ಜಾಮೀನು ಅರ್ಜಿ ವಿಚಾರಣೆಯನ್ನು ನವೆಂಬರ್ 4 ಕ್ಕೆ ಮುಂದೂಡಿದೆ.

“ಆಚೆ ಮನೆಯ ಬ್ಯಾರ್ದಿ ಮಹಿಳೆಯು 6 ನೆಯದ್ದು ಆಗಿ 7 ನೇ ಗರ್ಭಿಣಿಯಾಗಿದ್ದಳು. ನೀನು ನಾಯಿ ಮರಿ ಹಾಕಿದ ಹಾಗೆ ಹಾಕ್ತಾ ಇದ್ದೀಯಾ ಅಂತ ಅವಳಿಗೆ ಯಾರಾದ್ರು ಕೇಳಿದ್ರಾ? ಕೇಳುವ ದೈರ್ಯವೂ ಇಲ್ಲ. ಕೇಳಿದರೆ ಅದು ಅಲ್ಲಾಹನಿಗೋಸ್ಕರ ಅನ್ನುತ್ತಾರೆ. ನೀವೇನಾದರೂ ಮಹಾಲಿಂಗೇಶ್ವರನಿಗಾಗಿ ಮಕ್ಕಳು ಮಾಡ್ತೀರಾ? ನಮ್ಮ ಜನಸಂಖ್ಯೆ ಜಾಸ್ತಿಯಾಗಬೇಕು. ಇಲ್ಲದೇ ಇದ್ದರೆ ಮಂಗಳೂರು ವಿಧಾನಸಭಾ ಕ್ಷೇತ್ರ, ಉಲ್ಲಾಳದಲ್ಲಿ ಹಿಂದೂ ಗೆಲ್ಲಲು ಸಾದ್ಯವೇ ಇಲ್ಲ. ಅಲ್ಲಿ ಖಾದರ್‌ ಅವರೇ ಗೆಲ್ಲೋದು. ಯಾಕೆಂದರೆ ಒಂದು ಲಕ್ಷದ ಹತ್ತು ಸಾವಿರ ಬ್ಯಾರಿಗಳದ್ದೇ ಓಟು ಇದೆ. ಹಿಂದೂಗಳು 90 ಸಾವಿರ ಇರೋದು. ನಮ್ಮನ್ನು ಸರ್ವನಾಶ ಮಾಡ್ತಾರೆ. ಹಾಗಾಗಿ ನಮ್ಮ ಮನೆಯಲ್ಲಿ 3ಕ್ಕಿಂತ ಕಡಿಮೆ ಮಕ್ಕಳು ಇರಬಾರದು” ಎಂದು ಪ್ರಭಾಕರ ಭಟ್ಟರು ದೀಪಾವಳಿ ಹಬ್ಬದ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಳಿಗೆ ಎಂಬಲ್ಲಿ ಆಯೋಜಿಸಿದ್ದ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ವೇಳೆ ಭಾಷಣ ಮಾಡಿದ್ದರು.

ಈ ಭಾಷಣದ ವಿರುದ್ಧ ಜನವಾದಿ ಮಹಿಳಾ ಸಂಘಟನೆಯ ಈಶ್ವರಿ ಪದ್ಮುಂಜರವರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರಂತೆ ಪ್ರಭಾಕರ ಭಟ್ ಮತ್ತು ದೀಪೋತ್ಸವ ಕಾರ್ಯಕ್ರಮ ಆಯೋಜಕರ ವಿರುದ್ಧ ಪೊಲೀಸರು ಬಿಎನ್‌ಎಸ್‌-2023ರ ಸೆಕ್ಷನ್ 79, 196, 299, 302 ಹಾಗೂ 3(5) ಅಡಿಯಲ್ಲಿ ಎಫ್ಐಆರ್ ದಾಖಲಿಸಿ, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು.

ಆರೋಪಿ ಪ್ರಭಾಕರ ಭಟ್ ಬಂಧನದ ಭೀತಿಯಿಂದ ಪುತ್ತೂರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ ಅಲ್ಲಿಸಿದ್ದರು. ಅಕ್ಟೋಬರ್ 27 ರಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ‘ಬಲವಂತದ ಕ್ರಮ ತೆಗೆದುಕೊಳ್ಳದಂತೆ ಮಧ್ಯಂತರ ಆದೇಶ’ ನೀಡಿ ಪೂರ್ಣ ಪ್ರಮಾಣದ ವಿಚಾರಣೆ ಮತ್ತು ನಿರೀಕ್ಷಣಾ ಜಾಮೀನು ಸಂಬಂಧ ಅದೇಶವನ್ನು ಅಕ್ಟೋಬರ್ 29 ಕ್ಕೆ ಮುಂದೂಡಿತ್ತು.

ಅಕ್ಟೋಬರ್ 29 ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ದೂರುದಾರರಾಗಿರುವ ಈಶ್ವರಿ ಪದ್ಮುಂಜ ಪರ ಹಿರಿಯ ವಕೀಲ ಸತೀಶನ್ ಅವರು ‘ಆರೋಪಿ ಪ್ರಭಾಕರ ಭಟ್ ಬಂಧನದಿಂದ ರಕ್ಷಣೆ ಪಡೆಯಲು ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದಾರೆ. ಆದರೆ ಪ್ರಭಾಕರ ಭಟ್ ಜಾಮೀನು ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವ ವೇಳೆ  ಅಗತ್ಯವಾದ ವಿಚಾರಗಳನ್ನು ನ್ಯಾಯಾಲಯದಿಂದ ಮರೆಮಾಚಿದ್ದಾರೆ. ಅದರ ಫಲವಾಗಿ ಅವರಿಗೆ ತಾತ್ಕಾಲಿಕ ರಕ್ಷಣೆ ದೊರೆತಿದೆ’ ಎಂದು ಅರ್ಜಿಯಲ್ಲಿ ವಾದಿಸಿದ್ದಾರೆ.

‘ಆರೋಪಿ ಪ್ರಭಾಕರ ಭಟ್ಟರು ಸಲ್ಲಿಸಿದ ಜಾಮೀನು ಅರ್ಜಿಯಲ್ಲಿ ತಾನು ಕಾನೂನಿನ ಗೌರವವನ್ನು ಹಾಳು ಮಾಡುವವನಲ್ಲ ಎಂದು ಹೇಳಿಕೊಂಡರೂ, ಅವರು ಹಲವು ಬಾರಿ ವಿಭಿನ್ನ ಸಮುದಾಯಗಳ ವಿರುದ್ಧ ವಿಷ ಉಗುಳುವ ರೀತಿಯಲ್ಲಿ ಪ್ರಚೋದನಕಾರಿ ಭಾಷಣಗಳನ್ನು ಮಾಡುವ ಹವ್ಯಾಸ ಹೊಂದಿದ್ದಾರೆ. ವಿಶೇಷವಾಗಿ ಮುಸ್ಲಿಂ ಮಹಿಳೆಯರ ವಿರುದ್ಧ ಅವಮಾನಕಾರಿ ಹೇಳಿಕೆಗಳನ್ನು ನೀಡುವುದು ಅವರ ನಿಯಮಿತ ಚಟುವಟಿಕೆಯಾಗಿದೆ. ಈ ಹಿನ್ನೆಲೆಯಲ್ಲಿ, ಆರೋಪಿಯು ಮಾಡಿದ ಅಪರಾಧಗಳ ವಿವರ ಹಾಗೂ ಅವರ ನಡವಳಿಕೆಯ ಇತಿಹಾಸವನ್ನು ನ್ಯಾಯಾಲಯದ ಮುಂದೆ ಮಂಡಿಸುವುದು ಮುಖ್ಯವಾಗಿದೆ. ಈ ರೀತಿ ನ್ಯಾಯಾಲಯದ ಮುಂದೆ ಆರೋಪಿ ಪ್ರಭಾಕರ ಭಟ್ಟರ  ಸಂಪೂರ್ಣ ಇತಿಹಾಸವನ್ನು ಮಂಡಿಸಿದರೆ, ತಾತ್ಕಾಲಿಕ ಅಥವಾ ಪೂರ್ಣ ಜಾಮೀನು ನೀಡುವ ವಿಚಾರದಲ್ಲಿ ನ್ಯಾಯಾಲಯವು ತನ್ನ ವಿವೇಚನೆಯನ್ನು ಬಳಸಲು ನೆರವಾದಂತಾಗುತ್ತದೆ. ಹಾಗಾಗಿ ದೂರುದಾರರಾಗಿರುವ ಈಶ್ವರಿ ಪದ್ಮುಂಜ ಪರವಾಗಿ ಆರೋಪಿ ಪ್ರಭಾಕರ ಭಟ್ ಜಾಮೀನು ಅರ್ಜಿಗೆ ತಕರಾರು ಅರ್ಜಿ ಸಲ್ಲಿಸಲು ಮತ್ತು ವಾದ ಮಾಡಲು ಅವಕಾಶ ಕೊಡಬೇಕು’ ಎಂದು ಹಿರಿಯ ವಕೀಲ ಸತೀಶನ್ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ಸಹಜವಾಗಿ ಆರೋಪಿ ವಿರುದ್ಧ ಸರ್ಕಾರಿ ವಕೀಲರಿಗೆ ಮಾತ್ರ ವಾದಿಸುವ ಮತ್ತು ತಕರಾರು ಅರ್ಜಿ ಸಲ್ಲಿಸುವ ಅವಕಾಶ ಇರುತ್ತದೆ. ದೂರುದಾರರ ಪರ ವಕೀಲರು ತಕರಾರು ಅರ್ಜಿ ಅಥವಾ ವಾದ ಮಂಡಿಸಬೇಕಾದರೆ ಬಿಎನ್‌ಎಸ್‌ಎಸ್ ಸೆ. 338 ಮತ್ತು 339 ರಂತೆ ಅರ್ಜಿ ಸಲ್ಲಿಸಿ ನ್ಯಾಯಾಲಯದ ಅನುಮತಿ ಕೋರಬೇಕಿರುತ್ತದೆ. ಇದೀಗ ದೂರುದಾರರಾಗಿರುವ ಜನವಾದಿ ಮಹಿಳಾ ಸಂಘಟನೆಯ ಈಶ್ವರಿ ಪದ್ಮುಂಜ ಪರವಾಗಿ ಹಿರಿಯ ವಕೀಲ ಸತೀಶನ್ ಅರ್ಜಿ ಸಲ್ಲಿಸಿದ್ದು, ಆರೋಪಿ ಪ್ರಭಾಕರ ಭಟ್ ಜಾಮೀನು ಪ್ರಕ್ರಿಯೆ ಕಗ್ಗಂಟಾಗಿದೆ.

More articles

Latest article