ನವದೆಹಲಿ: ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಸುಪ್ರೀಂ ಕೋರ್ಟ್ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದರು. ಸಿಜೆಐ ಬಿ.ಆರ್. ಗವಾಯಿ ಅವರು ಭಾನುವಾರ ನಿವೃತ್ತರಾದರು. ಸೂರ್ಯ ಕಾಂತ್ ಅವರನ್ನು ಅಕ್ಟೋಬರ್ 30ರಂದು ನೇಮಕ ಮಾಡಲಾಗಿತ್ತು. ಇವರು 15 ತಿಂಗಳು ಸಿಜೆಐ ಹುದ್ದೆಯಲ್ಲಿ ಇರಲಿದ್ದು 2027ರ ಫೆ.9ರಂದು ನಿವೃತ್ತರಾಗಲಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನ್ಯಾಯಮೂರ್ತಿ ಸೂರ್ಯಕಾಂತ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ದೇವರ ಹೆಸರಿನಲ್ಲಿ ಅವರು ಹಿಂದಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
1962ರ ಫೆಬ್ರುವರಿ 10ರಂದು ಜನಿಸಿದ ಹರಿಯಾಣದಲ್ಲಿ ಜನಿಸಿದ ಇವರು 1984ರಲ್ಲಿ ಕಾನೂನು ವೃತ್ತಿ ಆರಂಭಿಸಿದರು. 2000ರಲ್ಲಿ ಅವರು ಹರಿಯಾಣದ ಅತಿಕಿರಿಯ ಅಡ್ವೊಕೇಟ್ ಜನರಲ್ ಎಂಬ ಖ್ಯಾತಿ ಇವರದ್ದಾಗಿದೆ. ನಂತರ ಇವರು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗಳಲ್ಲಿ ನ್ಯಾಯಮೂರ್ತಿಯಾಗಿ ಹಾಗೂ ಹಿಮಾಚಲ ಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಬಳಿಕ 2019ರಲ್ಲಿ ಸುಪ್ರೀಂಕೋರ್ಟ್ಗೆ ನ್ಯಾಯಮೂರ್ತಿಯಾಗಿ ಆಯ್ಕೆಯಾದರು. 2024ರಿಂದ ಸುಪ್ರೀಂಕೋರ್ಟ್ ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂಪಡೆಯುವ 370ನೇ ವಿಧಿಯನ್ನು ರದ್ದುಪಡಿಸುವುದು, ಬಿಹಾರದಲ್ಲಿ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ಕುರಿತ ಪ್ರಕರಣ ಸೇರಿದಂತೆ ಅನೇಕ ಮಹತ್ವದ ಪ್ರಕರಣಗಳಲ್ಲಿ ತೀರ್ಪು ನೀಡುವಲ್ಲಿ ಭಾಗಿಯಾಗಿದ್ದಾರೆ.
ಸಮಾರಂಭದಲ್ಲಿ ಉಪರಾಷ್ಟ್ರಪತಿ ಸಿಪಿ ರಾಧಾಕೃಷ್ಣನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಮೊದಲಾದವರು ಭಾಗವಹಿಸಿದ್ದರು.

