ಗೋದಾವರಿ-ಕಾವೇರಿ ನದಿ ಜೋಡಣೆಗೆ ಮಾಜಿ ಪ್ರಧಾನಿ ದೇವೇಗೌಡ ಆಗ್ರಹ

Most read

ನವದೆಹಲಿ:  ಗೋದಾವರಿ-ಕಾವೇರಿ ನದಿ ಜೋಡಣೆ ಯೋಜನೆಗೆ ಆದ್ಯತೆ ನೀಡಬೇಕು ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ರಾಜ್ಯಸಭೆಯಲ್ಲಿ ಆಗ್ರಹಪಡಿಸಿದ್ದಾರೆ. ನದಿ ಜಲ ಸಂಪನ್ಮೂಲ ಸದ್ಬಳಕೆಗೆ ಎಲ್ಲಾ ಪರಿಣಾಮಕಾರಿ ಕ್ರಮಗಳ ಅಗತ್ಯವಿದೆ. ಅದಕ್ಕೆ ದೀರ್ಘಾವಧಿ ಕಾರ್ಯಕ್ರಮಗಳ ಅನುಷ್ಠಾನ ಅಗತ್ಯವಿದೆ ಎಂದೂ ಅಭಿಪ್ರಾಯಪಟ್ಟಿದ್ದಾರೆ..

ರಾಜ್ಯಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಗುರುವಾರ ಪಾಲ್ಗೊಂಡು ಮಾತನಾಡಿದ ಅವರು, ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆಯನ್ನು ವಿವರಿಸಿ ಸರ್ಕಾರದ ಗಮನ ಸೆಳೆದರು.  

ಬೆಂಗಳೂರಿನಲ್ಲಿ ನೀರಿನ ಟ್ಯಾಂಕರ್‌ಗಳು ಬಡ  ಮತ್ತು ಮಧ್ಯಮ ವರ್ಗದ ಜನರನ್ನು ಶೋಷಿಸುತ್ತಿವೆ. ಹಣಕಾಸು ಸಚಿವರು ಕುಡಿಯುವ ನೀರಿನ ಯೋಜನೆಗಳಿಗೆ  ರೂ.1,400 ಕೋಟಿ ಮಂಜೂರು ಮಾಡಿದ್ದಾರೆ. ಆದರೆ, ದೀರ್ಘಾವಧಿಯ ನೀರಿನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಗೋದಾವರಿ-ಕಾವೇರಿ ಜೋಡಣೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದಿಂದ ಯುವಜನರು ನಗರಗಳಿಗೆ ವಲಸೆ ಬರುವ ಪ್ರಮಾಣ ಹೆಚ್ಚುತ್ತಲೇ ಇರುವುದು ನೀರಿನ ಬೇಡಿಕೆ ಹೆಚ್ಚಲು ಕಾರಣವಾಗಿದೆ ಎಂದರು.

ಬೆಂಗಳೂರಿನ ಜನಸಂಖ್ಯೆ ಈಗ 1.40 ಕೋಟಿ ದಾಟಿದೆ.  ಯುವಕರು ತಮ್ಮ ವಿದ್ಯಾಭ್ಯಾಸ ಮುಗಿದ ತಕ್ಷಣ ಹಳ್ಳಿಗಳನ್ನು ತೊರೆದು ನಗರಗಳಿಗೆ ವಲಸೆ ಬರುತ್ತಿದ್ದಾರೆ. ಇದು ಜೀವನೋಪಾಯದ ಸಮತೋಲನವನ್ನು ತಪ್ಪಿಸುತ್ತಿದೆ. ಯುವಕರಿಗೆ ತಮ್ಮ ಪ್ರದೇಶಗಳಿಗಳಲ್ಲಿಯೇ ಹೆಚ್ಚೆಚ್ಚು ಉದ್ಯೋಗಾವಕಾಶ ಕಲ್ಪಿಸುವ ಅಗತ್ಯವಿದೆ ಎಂದು ಹೇಳಿದರು. ಕೃಷಿ ಉತ್ಪನ್ನಗಳಿಗೆ ಹೆಚ್ಚು ಬೆಂಬಲ ನೀಡುವುದನ್ನು ನಾವು ಮುಂದುವರಿಸಬೇಕು. ಹಲಸಿನ ಹಣ್ಣು, ನೇರಳೆ, ಹುಣಸೆಹಣ್ಣು ಮಂಡಳಿ ರಚಿಸಬೇಕು ಎಂದು ದೇವೇಗೌಡರು ಒತ್ತಾಯಿಸಿದರು.

More articles

Latest article