ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (JNU) ದ ವಿದ್ಯಾರ್ಥಿ ಸಂಘದ ಚುನಾವಣೆ ನಡೆದು ಫಲಿತಾಂಶ ಹೊರಬಂದಿದೆ. ಎಡ ವಿದ್ಯಾರ್ಥಿ ಸಂಘಟನೆಗಳ ಕೂಟಕ್ಕೆ ಭರ್ಜರಿ (United Left) ಗೆಲುವಾಗಿದೆ. ಈ ಸಲದ ಚುನಾವಣೆಯಲ್ಲಿ ಎಡ ಕೂಟದಲ್ಲಿ AISA ಮತ್ತು DSF ಸಂಘಟನೆಗಳು ಸೇರಿದ್ದವು. ವಿದ್ಯಾರ್ಥಿ ಸಂಘದ (JNUSU) ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಸ್ಥಾನಗಳನ್ನು ಈ ಎಡಕೂಟ ಗೆದ್ದುಕೊಂಡಿದೆ. RSSನ ಅಂಗಸಂಸ್ಥೆ ABVP ಸಹ ಜಂಟಿ ಕಾರ್ಯದರ್ಶಿ ಸ್ಥಾನ ಪಡೆಯುವ ಮೂಲಕ ಸುದೀರ್ಘ ಅವಧಿಯ ನಂತರದಲ್ಲಿ ಅದು ಮತ್ತೊಮ್ಮೆ ಎಂಟ್ರಿ ಕೊಟ್ಟಿದೆ. ಇದೇ ಸಂದರ್ಭದಲ್ಲಿ ದೇಶದ ಪ್ರಮುಖ ಎಡಪಕ್ಷಗಳಾದ CPI ಮತ್ತು CPMನ ವಿದ್ಯಾರ್ಥಿ ಸಂಘಟನೆಗಳಾದ SFI, AISFಗಳು ಮತ್ತು ಅಂಬೇಡ್ಕರ್‌ವಾದಿ ಸಂಘಟನೆ ಬಾಪ್ಸಾಗಳು ಗೆಲುವು ಸಾಧಿಸಲು ವಿಫಲವಾಗಿವೆ.
ಈಗ ಗೆಲುವ ಸಾಧಿಸಿರುವ ಅಭ್ಯರ್ಥಿಗಳಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ AISAಸಂಘಟನೆಯ ನಿತೀಶ್‌ಕುಮಾರ್, 1,702 ಮತಗಳನ್ನು ಪಡೆದುಕೊಂಡಿದ್ದಾರೆ. ಬಿಹಾರ ರಾಜ್ಯದ ಈ ವಿದ್ಯಾರ್ಥಿ ಕಳೆದ ಕೆಲವಾರು ವರ್ಷಗಳಿಂದಲೂ ವಿದ್ಯಾರ್ಥಿ ಚಳವಳಿಯಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡಿದ್ದಾರೆ. 1,150 ಮತ ಗಳಿಸಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಮನಿಶಾ ಹರ್ಯಾಣಾ ರಾಜ್ಯದ ದಲಿತ ಕುಟುಂಬವೊಂದರಿಂದ ಬಂದವರು. ಅವರ ತಂದೆ ಫ್ಯಾಕ್ಟರಿಯೊಂದರಲ್ಲಿ ಕಾರ್ಮಿಕರಾಗಿದ್ದು, ಸರ್ಕಾರ ಜಾರಿಗೆತಂದ ಕಾರ್ಮಿಕ ವಿರೋದಿ ತಿದ್ದುಪಡಿಗಳ ಪರಿಣಾಮವಾಗಿ ಕೆಲಸ ಕಳೆದುಕೊಂಡಿದ್ದಾರೆ. JNU ಸೇರಲು ನಡೆಯುವ ಪ್ರವೇಶ ಪರೀಕ್ಷೆಯಲ್ಲಿ ಹಲವಾರು ಸಲ ಪಾಸಾಗಿದ್ದರೂ ಇವರಿಗೆ ಪ್ರವೇಶವನ್ನು ಆಡಳಿತ ಮಂಡಳಿ ನಿರಾಕರಿಸಿತ್ತು. ಆದರೂ ಛಲ ಬಿಡದೇ ಮತ್ತೆ ಪ್ರಯತ್ನಿಸಿ ಇದೀಗ ಸ್ಕೂಲ್ ಆಫ್ ಇಂಟರ್ ನ್ಯಾಶನಲ್ ಸ್ಟಡೀಸ್ ವಿಭಾಗದ ಪೂರ್ವ ಏಷಿಯಾ ಅಧ್ಯಯನ ಕೇಂದ್ರದಲ್ಲಿ ಪಿಎಚ್‌ಡಿ ಸಂಶೋಧನಾರ್ಥಿಯಾಗಿ ಸೇರ್ಪಡೆಯಾಗಿದ್ದಾರೆ. ಈ ವಿಭಾಗದ ಕೌನ್ಸಿಲರ್ ಆಗಿ 2019ರಲ್ಲಿ ಆಯ್ಕೆಯಾಗಿದ್ದ ಮನಿಶಾ DSF ಸಂಘಟನೆಯನ್ನು ಪ್ರತಿನಿಧಿಸುತ್ತಿದ್ದು ಇದೀಗ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆಯಾಗುವ ಮೂಲಕ ವಿಶ್ವವಿದ್ಯಾಲಯದ ದೊಡ್ಡ ಧ್ವನಿಯಾಗಿದ್ದಾರೆ. ಇದೇ ಬಗೆಯಲ್ಲಿ ಯುನೈಟೆಡ್ ಲೆಫ್ಟ್ ಆಭ್ಯರ್ಥಿಯಾಗಿ ಸ್ಪರ್ಧಿಸಿದ್ದ DSF ಸಂಘಟನೆಯ ಮುಂತೆಹಾ ಫಾತಿಮಾ 1520 ಮತಗಳನ್ನು ಪಡೆದು ಜಯಭೇರಿ ಬಾರಿಸಿ ಜನರಲ್ ಸೆಕ್ರೆಟರಿಯಾಗಿ ಆಯ್ಕೆಯಾಗಿದ್ದಾರೆ. ಇವರು ಬಿಹಾರದ ಪಾಟ್ನಾ ಜಿಲ್ಲೆಯ ಶಬ್ಜಿಬಾಗ್ ಪ್ರದೇಶದ ಶ್ರಮಿಕ ವರ್ಗದ ಮುಸ್ಲಿಂ ಕುಟುಂಬದ ಹೆಣ್ಣುಮಗಳು. 2020ರಲ್ಲಿ ಡೆಮಾಕ್ರಟಿಕ್ ಸ್ಟುಡೆಂಡ್ಸ್ ಫೆಡರೇಶನ್ ಸೇರಿದ್ದ ಮುಂತೆಹಾ ಜೆಎನ್‌ಯು ಮರುಪ್ರಾರಂಭಿಸುವ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಹೀಗೆ ಎಡಕೂಟದ ಅಭ್ಯರ್ಥಿಗಳೇ ವಿದ್ಯಾರ್ಥಿ ಸಂಘದ ಮೂರು ಪ್ರಮುಖ ಸ್ಥಾನಗಳನ್ನು ಪಡೆದಿದ್ದಾರೆ. ಮೇಲ್ನೋಟಕ್ಕೆ ಇದು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಎಡಸಿದ್ಧಾಂತದ ಗೆಲುವಿನ ಮುಂದುವರಿಕೆಯಂತೆ ಕಾಣುತ್ತದೆ. ಆದರೆ ಈ ಚುನಾವಣೆಯಲ್ಲಿ ಬಲಸಿದ್ಧಾಂತದ ABVPಯ ಅಭ್ಯರ್ಥಿಗಳು ಎಲ್ಲಾ ಪ್ರಮುಖ ಸ್ಥಾನಗಳನ್ನು ಪಡೆಯಲು ಶಕ್ತರಾಗಲಿಲ್ಲ ಎಂಬ ಸಮಾಧಾನ ಬಿಟ್ಟರೆ, ಕಳೆದ ಒಂದು ದಶಕದ ಅವಧಿಯನ್ನು ಗಮನಿಸಿಕೊಂಡಾಗ ಖಂಡಿತಾ ಇದು ಎಡಶಕ್ತಿಗಳಿಗೆ ಜೆಎನ್‌ಯುನಲ್ಲಿ ಆಗಿರುವ ಹಿನ್ನಡೆ ಎಂದೇ ಹೇಳಬೇಕಾಗುತ್ತದೆ. ಹೀಗೆ ಹೇಳಲು ಕಾರಣವಿದೆ.
2016ರಲ್ಲಿ JNUನಲ್ಲಿ ನಡೆದ ದೊಡ್ಡ ಆಂದೋಲನ ನಿಮಗೆಲ್ಲಾ ನೆನಪಿರಬಹುದು. ಅಲ್ಲಿ ABVP ಸಂಘಟನೆ ಬಿಜೆಪಿ ಸರ್ಕಾರದ ಕುಮ್ಮಕ್ಕಿನಿಂದ ಇಡೀ JNU ವಿಶ್ವವಿದ್ಯಾಲಯವನ್ನೇ ದೇಶದ್ರೋಹಿಗಳ ಗೂಡು ಎಂದು ಸುಳ್ಳುಕತೆಗಳನ್ನು ಕಟ್ಟಿ, ವಿಶ್ವವಿದ್ಯಾಲಯವನ್ನೇ ಮುಚ್ಚಿಸಲು #ShutDownJNU ಅಭಿಯಾನ ನಡೆಸಿದ್ದ ಸಂದರ್ಭದಲ್ಲಿ ಯೂನಿವರ್ಸಿಟಿಯ ಇಡೀ ವಿದ್ಯಾರ್ಥಿ ಹಾಗೂ ಬೋಧಕ ಸಮೂಹ ಇಡೀ ರಾಷ್ಟ್ರದ ಗಮನ ಸೆಳೆಯುವ ರೀತಿಯಲ್ಲಿ ಚಳವಳಿಯನ್ನು ರೂಪಿಸಿತ್ತು. ಕನ್ಹಯ್ಯ ಕುಮಾರ್, ಶೆಹ್ಲಾ ರಶೀದ್, ಉಮರ್ ಖಾಲೀದ್ ರಂತಹ ದಿಟ್ಟ ವಿದ್ಯಾರ್ಥಿ ನಾಯಕರು ಹೊರಹೊಮ್ಮಿದರು. ಸುಳ್ಳು ಕೇಸುಗಳಡಿ ವಿದ್ಯಾರ್ಥಿ ನಾಯಕರನ್ನು ಜೈಲಿಗೂ ಹಾಕಿಸಲಾಯಿತು. ನಂತರದಲ್ಲಿ ಅಲ್ಲಿನ ವಿಸಿ ಹುದ್ದೆಯಲ್ಲಿ ಪಕ್ಕಾ ಆರೆಸ್ಸೆಸ್ ಗುಲಾಮ ವ್ಯಕ್ತಿಯೊಬ್ಬರನ್ನು ತಂದು ಕೂರಿಸಿದರು. ನಂತರ ಇಡೀ ಯೂನಿವರ್ಸಿಟಿ ಆಡಳಿತಾಂಗವನ್ನು ಕೇಸರೀಕರಿಸುವ ಪ್ರಯತ್ನ ನಡೆಯಿತು. ವಿದ್ಯಾರ್ಥಿಗಳ ವಿರೋಧದ ನಡುವೆಯೇ ಯೂನಿವರ್ಸಿಟಿಯಲ್ಲಿ ವಾಣಿಜ್ಯೀಕರಿಸುವ ಕೆಲಸಗಳೂ ನಡೆದವು. ಶುದ್ಧ ವಿಜ್ಞಾನ ಮತ್ತು ಮಾನವಿಕ ವಿಜ್ಞಾನಗಳಿಗೆ ಹೆಸರು ಪಡೆದಿದ್ದ ಜೆಎನ್‌ಯುನಲ್ಲಿ ಮಾರುಕಟ್ಟೆಯಾಧಾರಿತ ಕೋರ್ಸುಗಳನ್ನು ಪರಿಚಯಿಸಲಾಯಿತು. ಅಂತಹ ಕೋರ್ಸುಗಳಿಗೆ ಬಂದ ವಿದ್ಯಾರ್ಥಿಗಳೇ ಇಂದು ಎಬಿವಿಪಿಯ ಬೆಂಬಲನೆಲೆಯಾಗಿದ್ದಾರೆ.
ಈ ನಡುವೆ ಆಗಿದ್ದಂತಹ ಮಹತ್ತರ ಬೆಳವಣಿಗೆ ಏನೆಂದರೆ, ಯೂನಿವರ್ಸಿಟಿಯಲ್ಲಿ ಬಲಪಂಥೀಯರ ದಬ್ಬಾಳಿಕೆ ಹೆಚ್ಚುತ್ತಾ ಹೋದಂತೆ ಎಡ ಸಂಘಟನೆಗಳ ನಡುವೆ ಒಗ್ಗಟ್ಟು ಮೂಡಿತು. ಹಿಂದಿನ 2024ರ ಚುನಾವಣೆಯ ವರೆಗೂ ಯುನೈಟೆಡ್ ಲೆಫ್ಟ್ ಕೂಟದಲ್ಲಿ ಈಗ ಇರುವ ಎರಡು ಸಂಘಟನೆಗಳ ಜೊತೆಗೆ SFI, AISPಗಳೂ ಇದ್ದವು. ಆದರೆ, ಈ ಸಲದ ಚುನಾವಣೆಯಲ್ಲಿ ಈ ಸಂಘಟನೆಗಳ ನಡುವೆ ತಲೆದೋರಿದ ಅನೈಕ್ಯತೆಯ ಕಾರಣದಿಂದ ಒಗ್ಗಟ್ಟು ಮುರಿದು ಬಿದ್ದಿದೆ. SFI ಸಂಘಟನೆ BAPSAದೊಂದಿಗೆ ಸೇರಿಕೊಂಡು ಎಡ ಹಾಗೂ ಅಂಬೇಡ್ಕರ್‌ವಾದಿ ಐಕ್ಯತೆಯ ಘೋಷಣೆ ಮೊಳಗಿಸಿದ್ದರೂ BAPSAದ ಪ್ರತ್ಯೇಕವಾಗಿ ತನ್ನದೇ ಅಭ್ಯರ್ಥಿಗಳನ್ನು ಸ್ಪರ್ಧೆಗೆ ಇಳಿಸಿದ್ದು ವಿದ್ಯಾರ್ಥಿಗಳಲ್ಲಿ ಗೊಂದಲ ಮೂಡಿಸಿರಲಿಕ್ಕೂ ಸಾಕು. ಇದರ ಪರಿಣಾಮವಾಗಿ SFI, BAPSA ಎರಡೂ ತೀವ್ರ ಹಿನ್ನಡೆ ಅನುಭವಿಸಿವೆ. ಈ ಎಡ ಹಾಗೂ ಬಾಪ್ಸಾಗಳ ನಡುವಿನ ತಿಕ್ಕಾಟದ ಲಾಭವನ್ನು ಪಡೆದ ABVP ಕಳೆದ 10 ವರ್ಷಗಳಲ್ಲಿ ಒಂದೇ ಒಂದು ಸೀಟು ಪಡೆಯಲು ಆಗದಿದ್ದರೂ ಈ ಸಲ ಮಾತ್ರ ಒಬ್ಬ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಕೇಕೆಹಾಕಿ ಬೀಗಿದೆ. ಮಾತ್ರವಲ್ಲದೇ ಯೂನಿವರ್ಸಿಟಿ ವಿಭಾಗಗಳ ಕೌನ್ಸಿಲರ್ ಚುನಾವಣೆಯಲ್ಲಿ 42 ಸೀಟುಗಳ ಪೈಕಿ ABVP 23ರನ್ನು ಗಳಿಸಿಕೊಂಡು ದೊಡ್ಡ ನೆಗೆತ ಸಾಧಿಸಿದೆ. 1999ರ ನಂತರ ಈ ಫ್ಯಾಸಿಸ್ಟ್ ವಿದ್ಯಾರ್ಥಿ ಸಂಘಟನೆ ಜೆಎನ್‌ಯುನಲ್ಲಿ ಸಾಧಿಸಿರುವ ಮಹತ್ತರ ಸಾಧನೆ ಇದು. ಇತ್ತ ಎಡ ಸಂಘಟನೆಗಳು ಗೆದ್ದಿದ್ದರೂ ಸಂಪೂರ್ಣ ಗೆಲ್ಲದ ಸ್ಥಿತಿಯಲ್ಲಿರುವುದು ಮತ್ತು ABVP ತನ್ನ ವಿದ್ಯಾರ್ಥಿ ವಿರೋಧಿ ನೀತಿಗಳನ್ನು ಆಡಳಿತ ಮಂಡಳಿಯೊಂದಿಗೆ ಸೇರಿಕೊಂಡು ಜಾರಿಗೊಳಿಸಲು, ಇಲ್ಲವೇ ಸಂಘದಲ್ಲಿ ಬೇಕೆಂದೇ ಅನವಶ್ಯಕ ಗಲಭೆ ಸೃಷ್ಟಿಸಲು ದೊಡ್ಡ ಅವಕಾಶವನ್ನೇ ಪಡೆದುಕೊಂಡಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ.
ಇಡೀ ದೇಶದ ಶಿಕ್ಷಣ ರಂಗದಲ್ಲಿ JNU ಎಂದರೆ ಒಂದು ಘನತೆ ಹಾಗೂ ಗೌರವವಿದೆ. ಶೈಕ್ಷಣಿಕವಾಗಿ ಇಡೀ ವಿಶ್ವಮಟ್ಟದಲ್ಲೇ ಈ ಯೂನಿವರ್ಸಿಟಿ ತೋರುತ್ತಾ ಬಂದಿರುವ ಸಾಧನೆ ಅಸಾಧಾರಣವಾದದ್ದು. ಬಹಳ ಮುಖ್ಯವಾಗಿ ದೇಶದ ಬಹಳ ಬಡ, ತಳ ಮಧ್ಯಮ ಹಾಗೂ ಮಧ್ಯಮ ವರ್ಗಗಳ ಕುಟುಂಬಗಳಿಂದ ಬಂದ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಉತ್ತಮ ಉನ್ನತ ಶಿಕ್ಷಣ ಪಡೆಯುತ್ತಾರಲ್ಲದೇ, ಈ ಯೂನಿವರ್ಸಿಟಿಯ ಕ್ಯಾಂಪಸ್ಸಿನ ರಾಜಕೀಯ ವಾತಾವರಣದಲ್ಲಿ ವೈಚಾರಿಕ ಜಾಗೃತಿ ಪಡೆಯುತ್ತಾ ಅತ್ಯಂತ ಸಕ್ರಿಯವಾಗಿ ತಮ್ಮ ವಿದ್ಯಾರ್ಥಿ ರಾಜಕೀಯ ಚಟುವಟಿಕೆಗಳಲ್ಲಿ ಕಳೆಯುವುದು ವಿಶೇಷ. ಹೀಗಾಗಿಯೇ, JNU ನಲ್ಲಿ ನಡೆಯುವ ವಿದ್ಯಾರ್ಥಿ ಸಂಘದ ಚುನಾವಣೆಯ ಮೇಲೆ ಇಡೀ ದೇಶದ ಗಮನವಿರುತ್ತದೆ.
ಈ ಎಲ್ಲ ಸಂಗತಿಗಳ ಹಿನ್ನೆಲೆಯಲ್ಲಿ ಜೆಎನ್‌ಯು ನಲ್ಲಿ ಈ ಬಾರಿ ಎಡಕೂಟವು ಗೆದ್ದು ಸೋತಿದ್ದರೆ, ಬಲರಾಜಕಾರಣ ಮರುಹುಟ್ಟು ಪಡೆದಿದೆ. ಹೀಗಾಗಿ ಇದು ಕೇವಲ ಯೂನಿವರ್ಸಿಟಿಗೆ ಮಾತ್ರ ಸೀಮಿತವಲ್ಲದೇ ಇಡೀ ದೇಶದ ಪ್ರಗತಿಪರ ಶಕ್ತಿಗಳಿಗೂ ಒಂದು ಸಂದೇಶವನ್ನು ರವಾನಿಸಿದೆ. ಬಲಸಿದ್ಧಾಂತದ ಗೆಲುವು ಮುನ್ನಡೆ ಇರುವುದು ಎಡ, ಅಂಬೇಡ್ಕರ್ ವಾದಿ ಶಕ್ತಿಗಳ ನಡುವಿನ ತಿಕ್ಕಾಟದಲ್ಲಿ ಎಂಬುದೇ ಆ ಸಂದೇಶ.