ಕಲಾಸಿಪಾಳ್ಯದಲ್ಲಿ ಸ್ಫೋಟಕ ವಸ್ತುಗಳ ಪತ್ತೆ; ಮಾಲೂರು ಮೂಲದ ಮೂವರ  ಬಂಧನ

Most read

ಬೆಂಗಳೂರು: ಬೆಂಗಳೂರಿನ ಕಲಾಸಿಪಾಳ್ಯದ ಬಿಎಂಟಿಸಿ ಬಸ್ ನಿಲ್ದಾಣದಲ್ಲಿರುವ ಶೌಚಾಲಯದ ಬಳಿ ಪತ್ತೆಯಾದ ಸ್ಫೋಟಕ ವಸ್ತುಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಮಿಳುನಾಡು ಮೂಲದ ಮಾಲೂರಿನ ಜಲ್ಲಿ ಕ್ರಷರ್ ನಲ್ಲಿ ಕೆಲಸ ಮಾಡುವ  ಶಿವಕುಮಾರ್, ಗಣೇಶ್ ಹಾಗೂ ಮುನಿರಾಜ್ ಬಂಧಿತ ಆರೋಪಿಗಳು.

ಪೊಲೀಸರ ಹೇಳಿಕೆಯ ಪ್ರಕಾರ, ಪ್ರಕರಣದಲ್ಲಿ ಒಟ್ಟು 22 ಜೀವಂತ (R.E.X-90) ಜಿಲೆಟಿನ್ ಕಡ್ಡಿಗಳು ಮತ್ತು 30 ಜೀವಂತ ಡಿಟೊನೇಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜುಲೈ 23 ರಂದು ಬೆಳಿಗ್ಗೆ 9.30ರ ಸುಮಾರಿಗೆ ಕಲಾಸಿಪಾಳ್ಯದ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಸ್ಫೋಟಕ ವಸ್ತುಗಳನ್ನು ಇಟ್ಟಿರುವ ಬಗ್ಗೆ ಬಿಎಂಟಿಸಿ ಸಹಾಯಕ ಸಂಚಾರ ಅಧಿಕಾರಿ ನೀಡಿದ ದೂರಿನ ಆಧಾರದ ಮೇಲೆ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಂಬ್ ತಪಾಸಣೆ ದಳ ಮತ್ತು ಬಾಂಬ್ ನಿಷ್ಕ್ರೀಯ ದಳದೊಂದಿಗೆ ಬಂದು ತಪಾಸಣೆ ನಡೆಸಿದ ಕಲಾಸಿಪಾಳ್ಯ ಠಾಣೆಯ ಪೊಲೀಸರು, ಚೀಲದಲ್ಲಿದ್ದ ಆರು ಜಿಲೆಟಿನ್ ಕಡ್ಡಿಗಳು ಮತ್ತು 12 ಎಲೆಕ್ಟ್ರಿಕ್ ಡಿಟೋನೇಟರ್‌ ಗಳನ್ನು ವಶಪಡಿಸಿಕೊಂಡಿದ್ದರು.

ಪ್ರಕರಣದ ತನಿಖೆಗಾಗಿ ಐದು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ಮಾಹಿತಿದಾರರು ಮತ್ತು ತಾಂತ್ರಿಕ ನೆರವಿನಿಂದ ತ್ವರಿತವಾಗಿ ಕಾರ್ಯನಿರ್ವಹಿಸಿದ ತಂಡವು ಜುಲೈ 28 ರಂದು ಈ ಪ್ರಕರಣಕ್ಕೆ ಸಂಬಂಧಿಸಿದ ಮೂವರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.

More articles

Latest article