ನಿಷ್ಕಲ್ಮಶ ಹೃದಯದ ಗೆಳೆಯ ಯೇಸು

Most read


ರಂಗಭೂಮಿ, ಪರಿಸರ, ಯಕ್ಷಗಾನ, ಕಿರುತೆರೆ, ಸಿನಿಮಾ, ರಾಜಕೀಯ, ಸಾಮಾಜಿಕ ಹೋರಾಟ…. ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಗೆಳೆಯ ಯೇಸುಪ್ರಕಾಶ್ ಇನ್ನಿಲ್ಲ ಎಂಬುದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ.


ಕಳೆದ ತಿಂಗಳೆ ಯೇಸು ಚೇತರಿಸಿಕೊಳ್ಳಲಾಗದ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂಬ ವಿಷಯ ಗೊತ್ತಾಗಿತ್ತು. ಅವರ ಕುಟುಂಬದವರು ಈ ಸಂಗತಿಯನ್ನು ಗುಟ್ಟಾಗಿಯೆ ಇಟ್ಟಿದ್ದರು. ಯೇಸುವಿಗೂ ತನಗೆ ಬಂದಿರುವ ಕಾಯಿಲೆಯನ್ನು ಗೆದ್ದು ಮರಳುತ್ತೇನೆ ಎಂಬ ವಿಶ್ವಾಸವಿತ್ತು. ಅವನ ಕುಟುಂಬದವರು ಯೇಸುವನ್ನು ಉಳಿಸಿಕೊಳ್ಳಲು ಮಾಡಿದ ಎಲ್ಲಾ ಪ್ರಯತ್ನಗಳು ಫಲ ಕೊಡಲಿಲ್ಲ.


ಯೇಸುವನ್ನು ನೋಡಿದವರು ಅವನೊಬ್ಬ ಕಠಿಣ ಹೃದಯಿ, ಒರಟ ಎಂದು ಮೇಲ್ನೋಟಕ್ಕೆ ಅನಿಸುತಿತ್ತು. ವಾಸ್ತವದಲ್ಲಿ ಅವನದು ಮಗುವಿನಂತಹ ಮನಸ್ಸು. ಯಾವುದೇ ದುಶ್ಚಟಗಳಿಲ್ಲದ ನಿಷ್ಕಲ್ಮಶ ಮನಸ್ಸಿನ ಗೆಳೆಯನಿಗೆ ಹಾಳು ಕ್ಯಾನ್ಸರ್ ತಗುಲಿದ್ದೆ ಆಶ್ಚರ್ಯ..


ಯೇಸು ರಂಗನಟನಾಗಿ ತನ್ನದೆ ಛಾಪು ಮೂಡಿಸಿದ್ದ ಕಲಾವಿದ. ತಾನೊಬ್ಬ ಕಲಾವಿದನಾಗಿ ಬೆಳೆಯಬೇಕಷ್ಟೆ ಎಂಬ ಸ್ವಾರ್ಥ ಅವನಲ್ಲಿ ಇರಲಿಲ್ಲ. ಅದಕ್ಕಾಗಿ ರಂಗ ತಂಡವನ್ನೆ ಕಟ್ಟಿದ.
ಸಿನಿಮಾ ಪ್ರವೇಶಿಸಿದಾಗ ಕನ್ನಡಕ್ಕೊಬ್ಬ ಪರೇಶ್ ರಾವೆಲ್ ಸಿಕ್ಕ ಅಂತ ಹೇಳಿದಾಗ ನಕ್ಕು ಕಣ್ಣರಳಿಸಿದ್ದ. ಕನ್ನಡದ ಸ್ಟಾರ್ ನಟರ ಜೊತೆ ನಟಿಸಿದಾಗಲೂ ಭ್ರಮೆಯಲ್ಲಿ ತೇಲಾಡದೆ ವಾಸ್ತವದಲ್ಲಿ ವಿಹರಿಸಿದ ಯೇಸು ಅಪರೂಪದ ಕಲಾವಿದ.


ಸಮಾಜಕ್ಕೂ ಕಲಾವಿದರಿಗೂ ಸಂಬಂಧವಿಲ್ಲ ಎಂದು ಯಾವತ್ತೂ ಮನೆಯಲ್ಲಿ ಯೇಸು ಕುಳಿತವನಲ್ಲ. ಯಾವುದೇ ಜನಪರ ಚಳವಳಿ ಇದ್ದರೆ ಅಲ್ಲಿ ಯೇಸು ಹಾಜರ್.
ಮಲೆನಾಡಿನ ಪರಿಸರ ಹದಗೆಡುತ್ತಿರುವ ಬಗ್ಗೆ ಯೇಸುವಿಗೆ ಆತಂಕ ಕಾಡಿತ್ತು. ಇಲ್ಲಿನ ಕೆರೆಗಳ ಅಭಿವೃದ್ಧಿಯಲ್ಲಿ ಆತ ವಹಿಸಿದ ಪಾತ್ರ ಮರೆಯುವಂತಿಲ್ಲ. ಈಚೆಗಷ್ಟೆ ಯೇಸು ನಿರ್ದೇಶಿಸಿದ ಬೀದಿ ನಾಟಕದ ಮೂಲಕ ಕೆ.ವಿ.ಸುಬ್ಬಣ್ಣ ರಂಗ ಸಮೂಹದವರು ಎಲ್ಲೆಡೆ ಪರಿಸರ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.


ಶರಾವತಿ ಹಿನ್ನೀರನ್ನು ಬೆಂಗಳೂರಿಗೆ ಒಯ್ಯುವ ಪ್ರಸ್ತಾಪ ಬಂದಾಗ ಅದರ ವಿರುದ್ದ ನಡೆದ ಚಳವಳಿಯ ಮುಂಚೂಣಿಯಲ್ಲಿದ್ದವರ ಪೈಕಿ ಯೇಸು ಕೂಡ ಪ್ರಮುಖ.
ಯೇಸುವಿನದ್ದು ಧರ್ಮ, ಜಾತಿಯನ್ನು ಮೀರಿದ ಕುಟುಂಬ. ಪತ್ನಿ ಶೈಲಜಾ, ಮಗಳು ಮಧುನಿಷಾ, ಮತ್ತಿಬ್ಬರು ಮಕ್ಕಳೂ ಕಲಾವಿದರೆ. ನಾಟಕವಲ್ಲದೆ ಯಕ್ಷಗಾನ ಪ್ರಸಂಗಕ್ಕೂ ಯೇಸು ಕುಟುಂಬದ ಎಲ್ಲರೂ ಬಣ್ಣ ಹಚ್ಚಿದವರೆ.


ನನ್ನ ಸುತ್ತಲಿನ ಪರಿಸರ, ಸಮಾಜ, ನನ್ನ ಊರು ಚೆನ್ನಾಗಿರಬೇಕು ಎಂಬ ತುಡಿತ ಯೇಸುವಿನಲ್ಲಿತ್ತು. ಊರಿಗೆ ಏನಾದರೂ ತೊಂದರೆಯಾದರೆ ತನ್ನ ಕುಟುಂಬಕ್ಕೆ ತೊಂದರೆಯಾಯಿತೇನೊ ಎಂಬಂತೆ ಯೇಸು ಸಂಕಟಪಡುತ್ತಿದ್ದ.
ಕಾಲ ಎಲ್ಲವನ್ನೂ ಮರೆಸುತ್ತದೆ. ರಂಗಭೂಮಿ, ಪರಿಸರ, ಕಿರುತೆರೆ, ಸಿನಿಮಾ, ಸಾಮಾಜಿಕ ಸೇವೆ.. ಹೀಗೆ ಯೇಸು ಭಾಗಿಯಾಗಿದ್ದ ಕ್ಷೇತ್ರಗಳು ಪರ್ಯಾಯವಾಗಿ ಬೇರೆಯವರನ್ನು ಹುಡುಕಿ ಕೊಳ್ಳಬಹುದು. ಆದರೆ ಯೇಸುವಿನ ಕುಟುಂಬಕ್ಕೆ ಅಂತಹ ಪರ್ಯಾಯಗಳಿಲ್ಲ.. ಯೇಸುವಿನ ಅಗಲಿಕೆಯ ನೋವನ್ನು ಅರಗಿಸಿಕೊಳ್ಳುವ ಶಕ್ತಿ ಅವನ ಕುಟುಂಬಕ್ಕೆ ಆ ಯೇಸು ಕ್ರಿಸ್ತನೇ ಕರುಣಿಸಬೇಕು.

More articles

Latest article