ಬೆಂಗಳೂರಿನಲ್ಲಿ ಜನಾಗ್ರಹ ಸಮಾವೇಶ; ನರೇಗಾ ಯೋಜನೆ ಬಲಪಡಿಸುವುದು, ರೈತ, ಕಾರ್ಮಿಕ ವಿರೋಧಿ ನೀತಿಗಳ ರದ್ದು ಸೇರಿದಂತೆ ಹಲವು ನಿರ್ಣಯಗಳ ಅಂಗೀಕಾರ

Most read

ಬೆಂಗಳೂರು: ರೈತ, ಕಾರ್ಮಿಕ ವಿರೋಧಿ ನೀತಿಗಳ ರದ್ದು, ಎಪಿಎಂಸಿ ತಿದ್ದುಪಡಿ ನೀತಿ, ಕಾರ್ಮಿಕರ ದುಡಿಮೆಯ ಅವಧಿಯನ್ನು 8 ರಿಂದ 12 ಗಂಟೆಗೆ ಏರಿಸುವ ನಿಯಮವನ್ನು ರದ್ದುಗೊಳಿಸಬೇಕು, ಬಗರ್‌ ಹುಕುಂ ರೈತರಿಗೆ “ಒನ್‌ ಟೈಂ ಸೆಟಲ್ಮೆಂಟ್‌” ಅಡಿ ಹಕ್ಕುಪತ್ರ ನೀಡುವುದೂ ಸೇರಿದಂತೆ ಹಲವು ನಿರ್ಣಯಗಳನ್ನು ಬೆಂಗಳೂರಿನಲ್ಲಿ ಇಂದು ನಡೆ ಕೇಂದ್ರ, ರಾಜ್ಯ ಸರ್ಕಾರಗಳ ರೈತ, ಕಾರ್ಮಿಕ ವಿರೋದಿ ನೀತಿಗಳ ವಿರುದ್ಧ ಸಂಯುಕ್ತ ಹೋರಾಟ-ಕರ್ನಾಟಕ (ರೈತ, ದಲಿತ, ಕಾರ್ಮಿಕ, ವಿದ್ಯಾರ್ಥಿ, ಯುವಜನ, ಮಹಿಳಾ ಸಂಘಟನೆಗಳ ಸಂಯುಕ್ತ ಸಮಿತಿ) ಹಮ್ಮಿಕೊಂಡಿದ್ದ ಜನಾಗ್ರಹ ಸಮಾವೇಶ ಕೈಗೊಂಡಿದೆ.

ಹೊಸಪೇಟೆಯಲ್ಲಿ ಸರ್ಕಾರ ನಡೆಸುತ್ತಿರುವ ಸಾಧನಾ ಸಮಾವೇಶದ ನೈತಿಕತೆಯನ್ನು ಪ್ರಶ್ನಿಸಿ, ನಗರದ ಗಾಂಧಿ ಭವನದಲ್ಲಿ ಇಂದು ಜನಾಗ್ರಹ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.

ರೈತ ಮುಖಂಡರಾದ ಬಡಗಲಪುರ ನಾಗೇಂದ್ರ, ಚಾಮರಸ ಮಾಲಿ ಪಾಟೀಲ್‌, ವೆಂಕಟಾಚಲಯ್ಯ, ಡಿ.ಹೆಚ್.‌ ಪೂಜಾರ್‌, ಟಿ. ಯಶ್ವಂತ್‌, ಕಾರ್ಮಿಕ ಚಳವಳಿಯ ಮುಖಂಡರುಗಳಾದ ಮೀನಾಕ್ಷಿ ಸುಂದರಂ, ವರಲಕ್ಷ್ಮಿ, ಅಪ್ಪಣ್ಣ, ಜನಪರ ಚಳವಳಿಗಳ ಮುಖಂಡರುಗಳಾದ ನೂರ್‌ ಶ್ರೀಧರ್‌, ಮಲ್ಲೇಶ್‌, ಪುಟ್ಟಮಾದು, ಕುಮಾರ್‌ ಸಮತಳ, ಮಹಿಳಾ ಚಳವಳಿಯ ದೇವಿ, ಮೋಕ್ಷಮ್ಮ, ಇನ್ನು ಮುಂತಾದ ಮುಖಂಡರು ಭಾಗವಹಿಸಿದ್ದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಜನಚಳವಳಿಗಳ ಪ್ರತಿನಿಧಿಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಹಿಂದಿನ ರಾಜ್ಯ ಬಿಜೆಪಿ ಸರ್ಕಾರ ಜಾರಿಗೆ ತರಲು ಹೊರಟಿದ್ದ ರೈತ, ಕಾರ್ಮಿಕ ವಿರೋಧಿ ನೀತಿಗಳ ರದ್ದು, ಭೂ ತಿದ್ದುಪಡಿ ನೀತಿ, ಎಪಿಎಂಸಿ ತಿದ್ದುಪಡಿ ನೀತಿ, ಜಾನುವಾರು ನೀತಿ, ನಾಲ್ಕು ಲೇಬರ್‌ ಕೋಡ್‌ ಗಳು, ಕಾರ್ಮಿಕರ ದುಡಿಮೆಯ ಅವಧಿಯನ್ನು 8 ರಿಂದ 12 ಗಂಟೆಗೆ ಏರಿಸುವ ನಿಯಮವನ್ನು ರದ್ದುಗೊಳಿಸಬೇಕು ಎಂಬ ನಿರ್ಣಯಗಳನ್ನು ಸಮಾವೇಶದಲ್ಲಿ ಕೈಗೊಳ್ಳಲಾಗಿದೆ.

ಬಲವಂತದ ಭೂ ಸ್ವಾಧೀನ ಕೈಬಿಡಬೇಕು. ಬಗರ್‌ ಹುಕುಂ ರೈತರ ಅರ್ಜಿಗಳನ್ನು “ಅರ್ಹ” ಮತ್ತು “ಅನರ್ಹ” ಎಂದು ವಿಂಗಡಿಸಿ “ಅನರ್ಹ”ವನ್ನು ತಿರಸ್ಕರಿಸುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ಕೊಟ್ಟಿರುವ ತೀರ್ಮಾನವನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು. ಎಲ್ಲಾ ಬಡ ಬಗರ್‌ ಹುಕುಂ ರೈತರಿಗೆ “ಒನ್‌ ಟೈಂ ಸೆಟಲ್ಮೆಂಟ್‌” ಅಡಿ ಹಕ್ಕುಪತ್ರ ನೀಡಬೇಕು ಮತ್ತು ರಾಜ್ಯದ ಬಡ ಕುಟುಂಬಗಳಿಗೆ ಸೂರು ಒದಗಿಸಲು ಬೃಹತ್‌ ನಿವೇಶನ ಅಭಿಯಾನವನ್ನು ಹಮ್ಮಿಕೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

ಕೇಂದ್ರ ಸರ್ಕಾರ National Policy Frame work on Agricultural Marketing [NPFAM] ಎಂಬ ಹೊಸ ನೀತಿ ತಂದು ರೈತರ ಬೆಳೆಯ ಸುರಕ್ಷತೆಗಿದ್ದ ಕ್ರಮಗಳನ್ನೆಲ್ಲಾ ರದ್ದುಗೊಳಿಸಿ ಖಾಸಗಿಯವರಿಗೆ ರೈತರ ಬೆಳೆಯ ಮೇಲೆ ನಿಯಂತ್ರಣ ಸಾಧಿಸಲು ಅವಕಾಶ ಮಾಡಿಕೊಡಲಾಗುತ್ತಿದೆ. ಆದರೆ ರಾಜ್ಯ ಸರ್ಕಾರ ಅದನ್ನು ತಿರಸ್ಕರಿಸುವ ಬದಲು ಕರ್ನಾಟಕದ ಬೆಲೆ ಆಯೋಗಕ್ಕೆ ಕಳಿಸಿ, ಇದನ್ನು ಅನುಷ್ಠಾನಗೊಳಿಸಲು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಶಿಫಾರಸು ಮಾಡಿ ಎಂದು ಸೂಚಿಸಿದೆ. ಇದು ರೈತರ ಬೆನ್ನಿಗೆ ಚೂರಿ ಹಾಕುವ ಕೆಲಸವಾಗಿದ್ದು, ಈ ಸಮಾವೇಶ ಇದನ್ನು ತೀವ್ರವಾಗಿ ಖಂಡಿಸುತ್ತದೆ. ಸರ್ಕಾರ ಕೂಡಲೇ NPFAM ಕರಡು ನೀತಿಯನ್ನು ಸಾರಾಸಗಟಾಗಿ ಟು ತಿರಸ್ಕರಿಸಬೇಕು. ಬೆಳಗಾವಿಯಲ್ಲಿ ಎಪಿಎಂಸಿ ತರಕಾರಿ ಮಾರುಕಟ್ಟೆಯನ್ನು ಮುಚ್ಚಿಸಿ ಖಾಸಗಿ ಮಾರುಕಟ್ಟೆಗೆ ಅವಕಾಶ ಮಾಡಿಕೊಟ್ಟಿರುವ ತೀರ್ಮಾನವನ್ನು ರದ್ದುಗೊಳಿಸಬೇಕು ಎಂದು ಆಗ್ರಹಪಡಿಸಿದೆ.

ನರೇಗಾ ಯೋಜನೆ ಕೃಷಿ ಕೂಲಿಗಳಿಗೆ ಒಂದಷ್ಟು ಜೀವನಾಧಾರವಾಗಿತ್ತು. ಕೇಂದ್ರ ಸರ್ಕಾರ ಈಗ ಅದನ್ನೂ ಕೊಲ್ಲುತ್ತಿದೆ. ಅನುದಾನವನ್ನು ಅರ್ಧಕ್ಕರ್ಧ ಕಡಿತಗೊಳಿಸಿದೆ. ರಾಜ್ಯ ಸರ್ಕಾರ ಈ ಅಕ್ರಮ ಕುರಿತು ಒಂದು ಮಾತೂ ಆಡದೆ ಮೌನ ಸಮ್ಮತಿ ಸೂಚಿಸುತ್ತಿದೆ. ಸರ್ಕಾರದ ಈ ಬೇಜವಬ್ದಾರಿ ನಡೆಯನ್ನು ಈ ಸಮಾವೇಶ ಖಂಡಿಸಿದ್ದು, ನರೇಗಾ ಯೋಜನೆಯನ್ನು ಉಳಿಸಲು ಮತ್ತು ವಿಸ್ತರಿಸಲು ಕ್ರಮವಹಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಪಡಿಸಿದೆ.

ಕಾರ್ಮಿಕ ವರ್ಗಕ್ಕೆ ಇದ್ದ ಎಲ್ಲಾ ಹಕ್ಕುಗಳನ್ನೂ ಮೂಲೆಗುಂಪು ಮಾಡಲಾಗುತ್ತಿದೆ. ಯುವ ಪೀಳಿಗೆಯನ್ನು ಅಗ್ಗದ ಕೂಲಿ ಕೊಟ್ಟು, ಯಾವುದೇ ಭದ್ರತೆ ಇಲ್ಲದೆ, 12 ಗಂಟೆಯವರೆಗೂ ದುಡಿಸಿಕೊಳ್ಳಲು “4 ಲೇಬರ್‌ ಕೋಡ್‌”ಗಳನ್ನು ತರಲಾಗುತ್ತಿದೆ. ಹೋರಾಡುವ ಹಕ್ಕು, ವೇತನದ ಹಕ್ಕು, ಕೆಲಸ ಅವಧಿಯ ಹಕ್ಕು, ಸಾಮಾಜಿಕ ಭದ್ರತೆಯ ಹಕ್ಕು ಮತ್ತು ಮಹಿಳಾ ಕಾರ್ಮಿಕರ ಸುರಕ್ಷತೆಯ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಕಾಂಗ್ರೆಸ್‌ ಪಕ್ಷದ ವರಿಷ್ಠ ರಾಹುಲ್‌ ಗಾಂಧಿ ಈ ಕಾಯ್ದೆಗಳನ್ನು ವಿರೋಧಿಸಿದ್ದಾರೆ. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಜಾರಿ ಮಾಡಲು ಹೊರಟಿದೆ. ದುಡಿಮೆಯ ಅವಧಿಯನ್ನು 8 ರಿಂದ 12 ಗಂಟೆಗೆ ಏರಿಸಲು, ಮಹಿಳೆಯರನ್ನು ಅನಾಹುತಕಾರಿ ಕಾರ್ಖಾನೆಗಳಲ್ಲಿ ದುಡಿಸಲು, ರಾತ್ರಿ ಪಾಳಿಯಲ್ಲೂ ಕೆಲಸ ಮಾಡಿಸಲು ನಿಯಮ ರೂಪಿಸಿದೆ. ಇದು ಬಂಡವಾಳಶಾಹಿಯ ಹಿತಕಾಯಲು ರೂಪಿಸುತ್ತಿರುವ ಶಾಸನವಾಗಿದೆ. ಆದ್ದರಿಂದ ಸರ್ಕಾರ ಕೂಡಲೇ 4 ಲೇಬರ್‌ ಕೋಡ್‌ ಗಳನ್ನು ತಿರಸ್ಕರಿಸಬೇಕು ಮತ್ತು ದುಡಿಯುವ ವರ್ಗದ ರಕ್ಷಣೆಗೆ ಮಾನವೀಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಈ ಸಮಾವೇಶ ಒತ್ತಾಯಿಸಿದೆ.

SCSP/TSP ನೀತಿಯನ್ನು ರೂಪಿಸಿ, ಅತ್ಯಂತ ಶೋಷಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಅಭಿವೃದ್ಧಿಗೆ ಶೇ. 40 ರಷ್ಟು ಬಜೆಟ್‌ ಅನ್ನು ಮೀಸಲಿಡುವ ಕ್ರಾಂತಿಕಾರಿ ತೀರ್ಮಾನವನ್ನು ಕಾಂಗ್ರೆಸ್‌ ಸರ್ಕಾರವೇ ತೆಗೆದುಕೊಂಡಿತ್ತು. ಆದರೆ ಕ್ರಾಂತಿಕಾರಿ ನಿರ್ಣಯ ಕಾಗದದ ಮೇಲಷ್ಟೇ ಉಳಿದು, ಅನ್ಯ ಉದ್ದೇಶಗಳಿಗೇ ಎಲ್ಲಾ ಹಣ ಹರಿದು ಹಂಚಿ ಹೋಗುತ್ತಿದೆ. ದಲಿತ ಸಮುದಾಯದ ಅಭಿವೃದ್ಧಿಗೆ ಅನುದಾನವೇ ಉಳಿಯದಂತೆ ಮಾಡಲಾಗುತ್ತಿದೆ. ಹಣ ಇಲ್ಲವೆಂದು ಖಾಸಗೀ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ವರ್ಗದ ಮಕ್ಕಳಿಗೆ ಸ್ಕಾಲರ್‌ ಶಿಪ್‌ ಮತ್ತು ಹಾಸ್ಟೆಲ್‌ ಸೌಲಭ್ಯವನ್ನು ನಿಲ್ಲಿಸಲಾಗಿದೆ. ಇದು ಅಕ್ಷಮ್ಯ ಅಪರಾಧ ಎಂದು ಸಮಾವೇಶವು ಭಾವಿಸುತ್ತದೆ. ದಲಿತ ಸಮುದಾಯದ ಅಭಿವೃದ್ಧಿಗೆ ಈ ಹಣ ಸದ್ಬಳಕೆಯಾಗುವುದನ್ನು ಖಾತ್ರಿಪಡಿಸಿಕೊಳ್ಳಲು ಒಂದು ಮೇಲ್ವಿಚಾರಣಾ ಕೋಶ ರಚಿಸಬೇಕೆಂದು ಮತ್ತು ಖಾಸಗೀ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೂ ಇದರ ಸೌಲಭ್ಯ ಲಭ್ಯವಾಗುವಂತೆ ಮಾಡಬೇಕೆಂದು ಒತ್ತಾಯಿಸುತ್ತದೆ.

ಕೇಂದ್ರ ಸರ್ಕಾರವು, ತೆರಿಗೆಯ ಹೆಚ್ಚಿನ ಪಾಲನ್ನು ರಾಜ್ಯಗಳಿಗೆ ನೀಡದೆ ತಾನೇ ಬಾಚಿಕೊಳ್ಳುತ್ತಿದ್ದು ರಾಜ್ಯಗಳಿಗೆ ಅನ್ಯಾಯ ಮಾಡಲಾಗುತ್ತಿದೆ. ಕರ್ನಾಟಕ ರಾಜ್ಯಕ್ಕೂ ಅನ್ಯಾಯವಾಗುತ್ತಿದೆ. ಕೇಂದ್ರದ ಈ ರಾಜ್ಯ ವಿರೋಧಿ ನಡೆಯನ್ನು ಸಮಾವೇಶ ಖಂಡಿಸಿದೆ. ಆದರೆ ಸಂಪನ್ಮೂಲವನ್ನು ಕ್ರೋಢೀಕರಿಸಲು ಕಂಪನಿಗಳು ಮತ್ತು ಶ್ರೀಮಂತ ವರ್ಗದ ಮೇಲೆ ರಾಜ್ಯ ಸೆಸ್‌ ಹಾಕುವ ಬದಲು ಜನಸಾಮಾನ್ಯರಿಂದ ತರಿಗೆ ವಸೂಲಿ ಮಾಡಲು ಮುಂದಾಗಿದೆ. ಸ್ಟಾಂಪ್‌ ಪೇಪರ್‌ ಡ್ಯೂಟಿ, ಪಾಣಿ, ಪೋಡಿ ಶುಲ್ಕ, ವಿದ್ಯುತ್‌ ದರ, ಸಾರಿಗೆ ದರ, ಎಲ್ಲವನ್ನೂ ಏರಿಸಲಾಗುತ್ತಿದೆ. ರೈತರಿಗಿದ್ದ ಉಚಿತ ವಿದ್ಯುತ್‌ ವ್ಯವಸ್ಥೆಯನ್ನು ಕಡಿತಗೊಳಿಸಲು, ಹೊಸ ಸಂಪರ್ಕ ತೆಗೆದುಕೊಂಡರೆ ಅದಕ್ಕೆ ರೈತರೇ ವೆಚ್ಚ ಭರಿಸಬೇಕು ಎಂಬ ನೀತಿಗಳನ್ನು ರೂಪಿಸಲಾಗಿದೆ. ಕೇಂದ್ರ ಸರ್ಕಾರ ತರುತ್ತಿರುವ ವಿದ್ಯುತ್‌ ಖಾಸಗೀಕರಣವನ್ನು ವಿರೋಧಿಸದೆ ಒಳಗೊಳಗೇ ಜಾರಿ ಮಾಡಲಾಗುತ್ತಿದೆ. ಜನಸಾಮಾನ್ಯರನ್ನು ಶೋಷಿಸುವ ಬದಲು ಸಂಪನ್ಮೂಲ ಕ್ರೋಢೀಕರಣಕ್ಕಾಗಿ ಕಂಪನಿಗಳು ಮತ್ತು ಶ್ರೀಮಂತರಿಗೆ ತೆರಿಗೆ ವಿಧಿಸಬೇಕು ಮತ್ತು ಕೇಂದ್ರ ಸರ್ಕಾರದಿಂದ ಅನುದಾನ ಪಡೆಯಲು ಹೋರಾಟ ನಡೆಸಬೇಕು ಎಂದೂ ಸಮಾವೇಶ ಆಗ್ರಹಪಡಿಸಿದೆ.

ಸರ್ಕಾರಿ ಶಿಕ್ಷಣ ವ್ಯವಸ್ಥೆ ಕುಸಿಯುತ್ತಿದೆ. ಖಾಸಗಿ ಶಿಕ್ಷಣದ ಹೆಸರಿನಲ್ಲಿ ಪೋಷಕರ ಶೋಷಣೆ ನಡೆಯುತ್ತಿದೆ. ಸರ್ಕಾರಿ ಶಾಲಾ ವ್ಯವಸ್ಥೆ ದುರ್ಬಲಗೊಂಡಿದೆ. ಹಾಗೆಯೇ ಗ್ರಾಮೀಣ ವೈದ್ಯಕೀಯ ವ್ಯವಸ್ಥೆ. ಗ್ರಾಮೀಣ ಮಹಿಳೆಯರ ಅಪೌಷ್ಟಿಕತೆಯೂ ತೀವ್ರಗತಿಯಲ್ಲಿ ಹೆಚ್ಚಾಗುತ್ತಿದೆ. ಕಾಂಗ್ರೆಸ್‌ ಪಕ್ಷವೂ ಬಿಜೆಪಿಯಂತೆಯೇ ಖಾಸಗೀಕರಣದ ಹಿಂದೆ ಓಡುತ್ತಿದೆ. ಆದ್ದರಿಂದ ಸಾರ್ವಜನಿಕ ಶಿಕ್ಷಣ ಹಾಗೂ ಸಾರ್ವಜನಿಕ ವೈದ್ಯಕೀಯ ವ್ಯವಸ್ಥೆಯನ್ನು ಬಲಪಡಿಸಲು ಬೃಹತ್‌ ಯೋಜನೆಯೊಂದನ್ನು ರೂಪಿಸಸಬೇಕೆಂದು ಸಮಾವೇಶವು ಆಗ್ರಹಿಸುತ್ತದೆ. ವಿಶೇಷವಾಗಿ ಮಹಿಳಾ ರಕ್ಷಣೆ ಮತ್ತು ಪೌಷ್ಟಿಕತೆಯ ವಿಚಾರಕ್ಕೆ ತುರ್ತು ಗಮನ ನೀಡಬೇಕೆಂದು ಒತ್ತಾಯಿಸುತ್ತದೆ.

ಸರ್ಕಾರದೊಳಗೆ ಕ್ಯಾನ್ಸರ್‌ ನಂತೆ ಹಬ್ಬುತ್ತಿರುವ ಭ್ರಷ್ಟಾಚಾರವನ್ನು ನಿಯಂತ್ರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಬೇಕೆಂದು ಜನಾಗ್ರಹ ಸಮಾವೇಶವು ಒತ್ತಾಯಿಸಿದೆ.

ಜನಚಳವಳಿಗಳ ಎಚ್ಚರಿಕೆಯನ್ನು ಸರ್ಕಾರ ನಿರ್ಲಿಕ್ಷಿಸುತ್ತಾ ಹೋಗುವುದು ಸರಕಾರದ ಅಳಿವಿಗೆ ಕಾರಣವಾಗುತ್ತದೆ. ಇದು ಸರ್ಕಾರಕ್ಕೂ ಅನ್ವಯಿಸುತ್ತದೆ. ಆದ್ದರಿಂದ ಈಗಾದರೂ ಸರ್ಕಾರ ಬಿಜೆಪಿ ಹಾಕಿಕೊಟ್ಟ ಹಾದಿಯಿಂದ ಹೊರಬಂದು ಜನಪರ ಕಾರ್ಯಕ್ರಮಗಳನ್ನು ರೂಪಿಸಬೇಕು. ಇಲ್ಲವಾದಲ್ಲಿ ತೀವ್ರ ಹೋರಾಟ ನಡೆಸಬೇಕಾದೀತು ಎಂದು ಜನಾಗ್ರಹ ಸಮಾವೇಶವು ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

More articles

Latest article