ನವದೆಹಲಿ: ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆದಾಗ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣಾ ರೇಖೆಯ ಬಳಿ ಪಾಕಿಸ್ತಾನ ನಡೆಸಿದ ಶೆಲ್ಲಿಂಗ್ ದಾಳಿಗೆ ಬಲಿಯಾದ ನಾಗರಿಕರ 22 ಮಂದಿ ಮಕ್ಕಳ ಶಿಕ್ಷಣದ ವೆಚ್ಚವನ್ನು ಭರಿಸುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ.
ಮೇ 7 ರಿಂದ 10ರವರೆಗೆ ಪೂಂಚ್, ರಜೌರಿಯಲ್ಲಿ ನಡೆದ ಶೆಲ್ಲಿಂಗ್ ದಾಳಿ ನಡೆದಾಗ ಹಲವು ಮಂದಿ ಸಾವನ್ನಪ್ಪಿದ್ದರು. ಮನೆಗಳಿಗೆ ಹಾನಿ ಸಂಭವಿಸಿವತ್ತು. ಈ ಘಟನೆ ಬಳಿಕ ಪೂಂಚ್, ರಜೌರಿಗೆ ರಾಹುಲ್ ಗಾಂಧಿ ಭೇಟಿ ನೀಡಿದ್ದರು. ಅಲ್ಲಿ ಸಂಕಷ್ಟಕ್ಕೀಡಾದ ಕುಟುಂಬಗಳನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದರು. ಪೋಷಕರನ್ನು ಕಳೆದುಕೊಂಡ ಮಕ್ಕಳು ಶಾಲೆಗೆ ತೆರಳಲು ವ್ಯವಸ್ಥೆ ಮಾಡಲು ಸೂಚಿಸಿದ್ದಾರೆ. ಅದರಂತೆ ಪೋಷಕರನ್ನು ಕಳೆದುಕೊಂಡ ಮಕ್ಕಳ ಪಟ್ಟಿಯನ್ನು ನೀಡಲಾಗಿದೆ ಎಂದು ಮೂರು ದಿನಗಳ ರಜೌರಿ ಭೇಟಿಯಲ್ಲಿರುವ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ತಾರಿಕ್ ಹಮೀದ್ ಕರ್ರಾ ಹೇಳಿದ್ದಾರೆ.
ಪೂಂಚ್ ಜಿಲ್ಲೆಯೊಂದರಲ್ಲೇ 22 ಮಕ್ಕಳನ್ನು ಪಟ್ಟಿಮಾಡಲಾಗಿದೆ. ಮುಂದಿನ ಮೂರು ದಿನಗಳಲ್ಲಿ ಪೋಷಕರನ್ನು ಕಳೆದುಕೊಂಡ ಮತ್ತಷ್ಟು ಮಕ್ಕಳಿದ್ದು, ಅವರ ಪಟ್ಟಿಯನ್ನೂ ನೀಡಲಾಗುತ್ತದೆ. ಪೂಂಚ್ ಜಿಲ್ಲೆಯಲ್ಲೇ 13 ಸಾರ್ವಜನಿಕರು ಸೇರಿ 28 ಜನ ಮೃತಪಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.