ಬೆಂಗಳೂರು: ಕರಾವಳಿಯ ಜಿಲ್ಲೆಗಳಲ್ಲಿ ಬೆಳ್ಳಂಬೆಳಿಗ್ಗೆಯೇ ಮಳೆಯ ಆಗಮನವಾಗಿದೆ. ಉಡುಪಿಯಲ್ಲಿ ಬೆಳಿಗ್ಗೆ ಧಾರಾಕಾರ ಮಳೆ ಸುರಿದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಕಾರ್ಮೋಡಗಳು ದಟ್ಟೈಸಿದ್ದು, ಗುಡುಗು-ಸಿಡಿಲಿನ ಅಬ್ಬರ ಕೇಳಿ ಬರುತ್ತಿದೆ. ಮಣಿಪಾಲ, ಉಡುಪಿಯಲ್ಲಿ ರಾತ್ರಿ ಮಳೆಯಾಗಿದ್ದು, ಇಂದೂ ಸಹ ಮಳೆಯಾಗುವ ಸಾಧ್ಯತೆ ಇದೆ. ಬಿಸಿಲಿನ ಧಗೆಯಿಂದ ನಲುಗಿದ್ದ ಹೊನ್ನಾವರದಲ್ಲಿ ಇಂದು ಬೆಳಿಗ್ಗೆಯೇ ಮಳೆ ಬಂದು ಭೂಮಿ ಸ್ವಲ್ಪ ಮಟ್ಟಿಗೆ ತಣ್ಣಗಾಗಿದೆ.
ಹಾವೇರಿ, ಉತ್ತರ ಕನ್ನಡ, ಗದಗ ಜಿಲ್ಲೆಗಳಲ್ಲಿ ಬೆಳಿಗ್ಗೆಯಿಂದಲೇ ಗುಡುಗಿನ ಸದ್ದು ಮೊಳಗುತ್ತಿದ್ದು, ಧಾರಾಕಾರ ಮಳೆಯಾಗುವ ಸೂಚನೆ ಇದೆ. ಮುಂಡರಗಿ ಮತ್ತು ಗದಗ ನಗರಗಳಲ್ಲಿ ಬೆಳಿಗ್ಗೆಯಿಂದಲೇ ಮಳೆ ಶುರುವಾಗಿದೆ.
ನಿನ್ನೆಯಿಂದೀಚಿಗೆ ರಾಜ್ಯಾದ್ಯಂತ ಮುಂಗಾರುಪೂರ್ವ ಮಳೆ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಕಾಲಿಟ್ಟಿದ್ದು ಸಿಡಿಲು ಬಡಿದು ಬೀದರ್ ಮತ್ತು ಔರಾದ್ ನಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ನಿನ್ನೆ ಧಾರಾಕಾರ ಮಳೆಯಾಗಿದೆ. ಎರಡೂ ಜಿಲ್ಲೆಗಳ ಬಹುತೇಕ ಭಾಗಗಳಲ್ಲಿ ಬಂದ ಮಳೆಯಿಂದ ರೈತರಲ್ಲಿ ಸಮಾಧಾನ ಮೂಡಿದೆ.
ದಾವಣಗೆರೆ ಜಿಲ್ಲೆಗೆ ಮಳೆ ಕಾಲಿಟ್ಟಿದ್ದು ನಿನ್ನೆ ದಾವಣಗೆರೆ ನಗರದಲ್ಲಿ ಗುಡುಗು ಸಹಿತ ಮಳೆಯಾಗಿದೆ. ಜಿಲ್ಲೆಯ ಹೊನ್ನಾಳಿ, ನ್ಯಾಮತಿಗಳಲ್ಲಿ ಒಂದು ಗಂಟೆಯ ಕಾಲ ಬಿರುಸಿನ ಮಳೆಯಾಗಿದೆ.
ಈ ವರ್ಷ ಮಳೆಯನ್ನೇ ಕಾಣದಿದ್ದ ಚಿತ್ರದುರ್ಗದಲ್ಲಿ ನಿನ್ನೆ ಗುಡುಗು ಸಹಿತ ಮಳೆಯಾಗಿ ರೈತರಲ್ಲಿ ಹರ್ಷ ಮೂಡಿದೆ. ಶಿವಮೊಗ್ಗದ ಬಹುತೇಕ ಭಾಗಗಳಲ್ಲಿ ನಿನ್ನೆ ಮಳೆಯಾಗಿದೆ.
ಬೀದರ್ ಜಿಲ್ಲೆಯಲ್ಲಿ ನಿನ್ನೆ ಆದ ಜೋರಾಗಿ ಮಳೆ ಸುರಿದು ಜನರಲ್ಲಿ ನೆಮ್ಮದಿ ತಂದರೂ ಸಿಡಿಲಿನ ಅಬ್ಬರಕ್ಕೆ ಇಬ್ಬರು ಬಲಿಯಾಗಿರುವುದು ವಿಷಾದ ಮೂಡಿಸಿದೆ. ಸಿಡಿಲಿನ ಅಬ್ಬರಕ್ಕೆ ಬೀದರ ತಾಲ್ಲೂಕಿನ ಬರೂರ ಗ್ರಾಮದ ಪುಷ್ಪಲತಾ ರವೀಂದ್ರ ರೆಡ್ಡಿ (50) ಮೃತಪಟ್ಟಿದ್ದಾರೆ. ಔರಾದ್ ತಾಲ್ಲೂಕಿನಲ್ಲಿ ಸಿಡಿಲು ಬಡಿದು ಭೀಮಲಾ ಎಂಬ ವೃದ್ಧರೊಬ್ಬರು ನಿಧನರಾಗಿದ್ದಾರೆ.