ದರ್ಶನ ಪ್ರಕರಣ: ಲಕ್ಷ್ಮಣ ರೇಖೆ ಮೀರುತ್ತಿದೆಯಾ ಟಿವಿ ಮೀಡಿಯಾ?

Most read

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಕ್ಷಿಪ್ರಗತಿಯಲ್ಲಿ ಭೇದಿಸಿ, ಹೈಪ್ರೊಫೈಲ್ ಆರೋಪಿಗಳನ್ನು ತಡಮಾಡದೆ ಬಂಧಿಸಿ ವಿಚಾರಣೆ ನಡೆಸುತ್ತಿರುವ ಪೊಲೀಸರ ಕುರಿತು ರಾಜ್ಯದಾದ್ಯಂತ ಪ್ರಶಂಸೆಯ ಮಾತುಗಳು ಕೇಳಿಬರುತ್ತಿದ್ದರೂ, ಟಿವಿ ಚಾನಲ್ ಗಳು ಪೊಲೀಸರ ವಿರುದ್ಧ ಅನವಶ್ಯಕ ಅಪಪ್ರಚಾರ ನಡೆಸುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಉದ್ಭವಿಸಿದೆ.

ಕ್ರೈಮ್ ಇನ್ವೆಸ್ಟಿಗೇಷನ್ ಮತ್ತು ಯಾವುದೇ ಪ್ರಕರಣವನ್ನು ಬಗೆಹರಿಸುವ ನಿಟ್ಟಿನಲ್ಲಿ ಬೆಂಗಳೂರು ಪೊಲೀಸರು ದೇಶದ ಇನ್ಯಾವುದೇ ನಗರದ ಪೊಲೀಸರಿಗಿಂತ ಸಮರ್ಥರಾಗಿದ್ದಾರೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರ ಪತ್ತೆಯಿಂದ ಹಿಡಿದು ಅತ್ಯಂತ ದೊಡ್ಡ ಸವಾಲಾಗಿದ್ದ ಪತ್ರಕರ್ತೆ ಗೌರಿ ಲಂಕೇಶ್ ಪ್ರಕರಣ ಭೇದಿಸುವವರೆಗೆ ನೂರಾರು ಸಂದರ್ಭಗಳಲ್ಲಿ ಬೆಂಗಳೂರು ಪೊಲೀಸರು ತಮ್ಮ ಜಾಣ್ಮೆ, ವೃತ್ತಿಪರತೆ, ದಕ್ಷತೆಯನ್ನು ಮೆರೆದಿದ್ದಾರೆ. ಆಧುನಿಕ ತಂತ್ರಜ್ಞಾನಗಳನ್ನು ಅತ್ಯಂತ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಮುಚ್ಚಿಹೋಗಿಬಿಡಬಹುದಾಗಿದ್ದ ರೇಣುಕಾಸ್ವಾಮಿ ಹತ್ಯೆಯನ್ನು ಭೇದಿಸುವಲ್ಲಿ ಬೆಂಗಳೂರು ಪೊಲೀಸರ ಕಾರ್ಯವೈಖರಿಯೂ ಶ್ಲಾಘನೀಯವಾಗಿದೆ.

ಹೀಗಿರುವಾಗ ಟೀವಿ ಮೀಡಿಯಾಗಳು ಪದೇಪದೇ ಪೊಲೀಸರ ವಿಶ್ವಾಸಾರ್ಹತೆಯ ಮೇಲೆ ಪ್ರಶ್ನೆಗಳನ್ನು ಎಸಗುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಉದ್ಭವಿಸಿದೆ. ನಿನ್ನೆಯಿಂದ ಟೀವಿ ಮೀಡಿಯಾಗಳು ದರ್ಶನ್ ಮತ್ತು ಇತರ ಆರೋಪಿಗಳನ್ನು ಇರಿಸಿ, ವಿಚಾರಣೆ ನಡೆಸಲಾಗುತ್ತಿರುವ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಮುಂಭಾಗ ಶಾಮಿಯಾನ ಸೈಡ್ ಕರ್ಟನ್ ಗಳನ್ನು ಅಳವಡಿಸಿರುವ ಕುರಿತು, ಠಾಣೆ ಸುತ್ತಮುತ್ತ ಇನ್ನೂರು ಮೀಟರ್ ವ್ಯಾಪ್ತಿಯಲ್ಲಿ ಸಿಆರ್ ಪಿಸಿ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿರುವ ಕುರಿತು, ಠಾಣೆಯ ಮುಂಭಾಗದಲ್ಲಿ ಎರಡೂ ಬದಿಯಲ್ಲಿ ಬ್ಯಾರಿಕೇಡ್ ಅಳವಡಿಸಿ ಜನಸಂಚಾರ ನಿರ್ಬಂಧಿಸಿರುವ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತುತ್ತಿವೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣ ಇತರ ಹತ್ಯೆ ಪ್ರಕರಣದ ಹಾಗೆ ಅಲ್ಲ ಎಂಬುದು ಟೀವಿ ಮೀಡಿಯಾದವರಿಗೆ ಗೊತ್ತಿಲ್ಲದ ವಿಷಯವೇನೂ ಅಲ್ಲ. ಎ-2 ಆರೋಪಿಯಾಗಿ ಬಂಧಿತರಾಗಿರುವ ಚಿತ್ರನಟ ದರ್ಶನ್ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಈ ಪೈಕಿ ಬಹಳಷ್ಟು ಮಂದಿ ಹುಚ್ಚು ಅಭಿಮಾನಿಗಳು. ಈ ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಠಾಣೆಗೆ ನುಗ್ಗಿ ದಾಂಧಲೆ ನಡೆಸಿದರೆ ಯಾರು ಜವಾಬ್ದಾರಿ? ದರ್ಶನ್ ಬಂಧನವಾದಾಗ ಆತನನ್ನು ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಇಡಲಾಗಿದೆ ಎಂದು ಟೀವಿ ಮಾಧ್ಯಮಗಳು ಸೇರಿದಂತೆ ಎಲ್ಲರೂ ಭಾವಿಸಿದ್ದರು. ಅಲ್ಲಿ ನೂರಾರು ಸಂಖ್ಯೆಯ ದರ್ಶನ್ ಅಭಿಮಾನಿಗಳು ಬಂದು ಅವರನ್ನು ನಿಭಾಯಿಸುವುದೇ ಕಷ್ಟಕರವಾಗಿತ್ತು. ಹೀಗೆಲ್ಲ ಇರುವಾಗ ಬಿಗಿಭದ್ರತೆ ಕಲ್ಪಿಸಬಾರದೆ? ಒಂದು ವೇಳೆ ಅಭಿಮಾನಿಗಳು ಠಾಣೆಗೆ ನುಗ್ಗಿ ಗಲಾಟೆ ನಡೆಸಿದರೆ ಇದು ಪೊಲೀಸ್ ಇಲಾಖೆಯ ವೈಫಲ್ಯ ಎಂದು ಇದೇ ಟೀವಿ ಚಾನಲ್ ಗಳು ಬಾಯಿಬಡಿದುಕೊಳ್ಳುವುದಿಲ್ಲವೇ?

ಇನ್ನು ಸೈಡ್ ಕರ್ಟನ್ ಅಳವಡಿಸುವುದಕ್ಕೂ ಕಾರಣ ಇದ್ದೇ ಇರುತ್ತದೆ. ದರ್ಶನ್ ರಂಥ ಜನಪ್ರಿಯ ಚಿತ್ರನಟ ಠಾಣೆಯೊಳಗೆ ಇರುವಾಗ ಅಲ್ಲಿ ಏನು ನಡೆಯುತ್ತದೆ ಎಂಬ ಕುತೂಹಲ ಜನಸಾಮಾನ್ಯರಿಗೆ ಇದ್ದೇ ಇರುತ್ತದೆ. ಹೀಗಾಗಿ ಸುಖಾಸುಮ್ಮನೆ ಬಂದು ಇಣುಕುವುದು, ಕುತೂಹಲದಿಂದ ಗುಂಪುಗೂಡುವುದು ನಡೆಯುವ ಸಾಧ್ಯತೆ ಇರುತ್ತದೆ. ದರ್ಶನ್ ಬಂಧನದ ನಂತರ ಎರಡು ದಿನಗಳ ಕಾಲ ಇಂಥ ಜನರನ್ನು ಓಡಿಸುವುದೇ ಪೊಲೀಸರ ಕೆಲಸವಾಗಿಹೋಗಿತ್ತು. ಹೀಗಾಗಿ ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್ ಠಾಣೆಗೆ ಭೇಟಿ ನೀಡಿದ ನಂತರ 144 ಸೆಕ್ಷನ್ ಜಾರಿ ಸೇರಿದಂತೆ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ವಾಸ್ತವವಾಗಿ ಟೀವಿ ಚಾನಲ್ ಗಳಿಗೆ ಠಾಣೆಯೊಳಗೆ ಪ್ರವೇಶವಿಲ್ಲದೇ ಇರುವುದೇ ಅವರ ಸಮಸ್ಯೆಯಾಗಿದೆ. ಅವಕಾಶ ಕೊಟ್ಟರೆ ಟೀವಿ ಚಾನಲ್ ಗಳೇ ಒಳಗೆ ಬಂದು ಆರೋಪಿಗಳನ್ನು ತಮ್ಮದೇ ಆದ ಶೈಲಿಯಲ್ಲಿ ವಿಚಾರಣೆ ನಡೆಸುತ್ತಿದ್ದರೇನೋ? ಠಾಣೆಯ ಗೇಟ್ ಮುಂದೆ ಕ್ಯಾಮೆರಾಗಳನ್ನು ಇಟ್ಟುಕೊಂಡು ಜೂಮ್ ಮಾಡಿ ಠಾಣೆಯ ಒಳಗಿನ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳುವುದಕ್ಕೆ ಸೈಡ್ ಕರ್ಟನ್ ಅಡ್ಡವಾಗಿರುವುದೇ ಟೀವಿ ಚಾನಲ್ ಗಳ ಸಿಟ್ಟಿಗೆ ಪ್ರಮುಖ ಕಾರಣವಾಗಿದೆ.

ಇನ್ನು ಠಾಣೆಯ ಮುಂಭಾಗವೇ ನಿಂತು ವರದಿ ಮಾಡುತ್ತಿದ್ದ ಹತ್ತಾರು ಟೀವಿ ಚಾನಲ್ ವರದಿಗಾರರು, ಕ್ಯಾಮೆರಾ ಸಿಬ್ಬಂದಿಗಳನ್ನು ಬ್ಯಾರಿಕೇಡ್ ನಿಂದ ಹೊರಗೆ ನಿಲ್ಲುವಂತೆ ಪೊಲೀಸರು ಪದೇ ಪದೇ ವಿನಂತಿಸಿದ್ದರು. ಆದರೂ ನಿನ್ನೆ ಟೀವಿ ಚಾನಲ್ ಗಳು ಅಲ್ಲೇ ನಿಂತು ವರದಿ ಮಾಡುವ ಕಾರ್ಯ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಎಸಿಪಿ ಭರತ್ ರೆಡ್ಡಿ ಓರ್ವ ಮಾಧ್ಯಮ ಸಿಬ್ಬಂದಿಯನ್ನು ಲಘುವಾಗಿ ತಳ್ಳಿದ್ದರಷ್ಟೆ. ಇದನ್ನೇ ಇಟ್ಟುಕೊಂಡು, ಅದೇ ದೃಶ್ಯವನ್ನು ಹತ್ತಾರು ಬಾರಿ ತೋರಿಸಿ ಮಾಧ್ಯಮ ಸಿಬ್ಬಂದಿ ಮೇಲೆ ಪೊಲೀಸರ ಹಲ್ಲೆ ಎಂದು ಬಿಂಬಿಸಲಾಯಿತು. ಅಷ್ಟೇ ಅಲ್ಲದೆ, ಕೆಲವೇ ಕ್ಷಣಗಳಲ್ಲಿ ಗೃಹ ಸಚಿವ ಜಿ.ಪರಮೇಶ್ವರ್ ಅವರ ಮುಂದೆ ಮೈಕ್ ಹಿಡಿದು ಅನ್ನಪೂರ್ಣೇಶ್ವರಿ ಠಾಣೆ ಮುಂಭಾಗ ಮಾಧ್ಯಮದವರ ಮೇಲೆ ಪೊಲೀಸ್ ಅಧಿಕಾರಿ ಭರತ್ ರೆಡ್ಡಿ ಹಲ್ಲೆ ಮಾಡಿದ್ದಾರೆ, ನಿಮ್ಮ ಪ್ರತಿಕ್ರಿಯೆ ಏನು ಎಂದು ಕೇಳಲಾಯಿತು.

ಇದೆಲ್ಲದರ ನಡುವೆ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಹೊರಗೆ ತೆಗೆದ `ಕ್ರೆಡಿಟ್’ ತೆಗೆದುಕೊಳ್ಳಲು ಹಲವರು ಪರದಾಡುತ್ತಿದ್ದಾರೆ. ಕೊಲೆ ವಿಷಯ ಮೊದಲು ಗೊತ್ತಾಗಿದ್ದೇ ಕೇಂದ್ರ ಸಚಿವ ಕುಮಾರಸ್ವಾಮಿಯವರಿಗೆ. ಅವರು ಕಮಿಷನರ್ ಗೆ ಫೋನ್ ಮಾಡಿ ಕ್ರಮ ಕೈಗೊಳ್ಳಲು ಹೇಳಿದ್ದರಿಂದಲೇ ಇದು ಹೊರಗೆ ಬಂತು ಎಂದು ಕೆಲವರು ವದಂತಿಗಳನ್ನು ಹರಡಿಸುತ್ತಿದ್ದಾರೆ. ಇನ್ನೊಂದೆಡೆ ಪತ್ರಕರ್ತ, ಚಿತ್ರ ನಿರ್ಮಾಪಕ ಇಂದ್ರಜಿತ್ ಲಂಕೇಶ್ ಆಶ್ಚರ್ಯಕರ ಹೇಳಿಕೆ ನೀಡಿ, ಹತ್ಯೆ ಪ್ರಕರಣ ಬಯಲಾಗಿದ್ದೇ ಮಾಧ್ಯಮದವರಿಂದ ಎಂದು ಹೇಳಿಬಿಟ್ಟಿದ್ದಾರೆ. ದರ್ಶನ್ ಬಂಧನವಾಗುವವರೆಗೆ ಪೊಲೀಸರು ಯಾವ ಗುಟ್ಟನ್ನೂ ಬಿಟ್ಟುಕೊಟ್ಟಿರಲಿಲ್ಲ. ಪತ್ರಕರ್ತರಿಗೆ ಈ ವಿಷಯ ಗೊತ್ತಾಗುವ ಮುನ್ನ ಬಹುತೇಕ ಆರೋಪಿಗಳನ್ನು ಪೊಲೀಸರು ಬಂಧಿಸಿ, ಅರ್ಧದಷ್ಟು ವಿಚಾರಣೆಯನ್ನು ಮುಗಿಸಿ ಆಗಿತ್ತು.

ದರ್ಶನ್ ರಂಥ ಜನಪ್ರಿಯ ನಟ ಭಾಗಿಯಾಗಿರುವ ಹೈಪ್ರೊಫೈಲ್ ಪ್ರಕರಣದ ವಿಚಾರಣೆ ನಡೆಸುವುದು ಅಷ್ಟು ಸುಲಭವಲ್ಲ. ಪೊಲೀಸರು ನೂರಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಇಲ್ಲಿಯವರೆಗೆ ಪೊಲೀಸರು ಅತ್ಯಂತ ವೃತ್ತಿಪರತೆಯಿಂದ ಪ್ರಕರಣದ ವಿಚಾರಣೆ ನಡೆಸುತ್ತ ಬಂದಿದ್ದಾರೆ. ಭಾಗಿಯಾಗಿರುವ ಎಲ್ಲರನ್ನೂ ಬಂಧಿಸಿದ್ದಾರೆ. ಸಾಕಷ್ಟು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಹೀಗಿರುವಾಗ ಪೊಲೀಸ್ ಇಲಾಖೆ ಮೇಲೆ ಗೂಬೆ ಕೂರಿಸುವುದು ಎಷ್ಟು ಸರಿ ಎಂಬ ಪ್ರಶ್ನೆ ಈಗ ಉದ್ಭವಿಸಿದೆ.

More articles

Latest article