ನವದೆಹಲಿ: ಭ್ರಷ್ಟರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಅವರಿಗೆ ಸರ್ಕಾರದಲ್ಲಿ ಸ್ಥಾನಮಾನ ಕಲ್ಪಿಸುವವರೂ ತಮ್ಮ ಹುದ್ದೆಗೆ ರಾಜೀನಾಮೆ ನೀಡುವಂತೆ ತಿದ್ದುಪಡಿಮಾಡುವಂತೆ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಆಮ್ ಆದ್ಮಿ ಪಕ್ಷದ (ಎಎಪಿ) ಮುಖಂಡ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸವಾಲು ಹಾಕಿದ್ದಾರೆ.
ಪ್ರಧಾನಮಂತ್ರಿ, ಮುಖ್ಯಮಂತ್ರಿ ಹಾಗೂ ಸಚಿವರು 30 ದಿನ ಜೈಲು ಶಿಕ್ಷೆಗೆ ಗುರಿಯಾದರೆ ಅವರು 31ನೇ ದಿನ ತಮ್ಮ ಸ್ಥಾನವನ್ನು ಕಳೆದುಕೊಳ್ಳುವ ಮಸೂದೆಯನ್ನು ಜಾರಿಗೊಳಿಸುತ್ತಿರುವುದಕ್ಕೆ ಕೇಜ್ರಿವಾಲ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಜೈಲು ಶಿಕ್ಷೆಗೆ ಗುರಿಯಾಗುವ ಅಪರಾಧಗಳಲ್ಲಿ ಆರೋಪಿಗಳಾಗುವ ಸಚಿವರು, ಮುಖ್ಯಮಂತ್ರಿಗಳು ಅಥವಾ ಪ್ರಧಾನ ಮಂತ್ರಿಗಳು ಜೈಲಿನಿಂದ ಸರ್ಕಾರವನ್ನು ಏಕೆ ನಡೆಸಬೇಕು ಎಂದೂ ಅಮಿತ್ ಶಾ ಅವರು ಪ್ರಶ್ನಿಸಿದ್ದರು.
ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಅಪರಧಿಯಾದವರನ್ನು ಒಂದು ಪಕ್ಷದ ಮುಖ್ಯಸ್ಥ ತನ್ನ ರಾಜಕೀಯ ಪಕ್ಷಕ್ಕೆ ಸೇರಿಸಿಕೊಂಡು, ಅವರನ್ನು ಅಪರಾಧ ಪ್ರಕರಣಗಳಿಂದ ಮುಕ್ತಗೊಳಿಸಿ ಅವರನ್ನು ಮಂತ್ರಿ, ಉಪಮುಖ್ಯಮಂತ್ರಿ ಅಥವಾ ಮುಖ್ಯಮಂತ್ರಿಯಾಗಿ ಮಾಡಿದರೆ ಅಂತಹ ಸಚಿವರು ಅಥವಾ ಪ್ರಧಾನಿ ಕೂಡ ತಮ್ಮ ಹುದ್ದೆಗೆ ರಾಜೀನಾಮೆ ನೀಡುವಂತೆಯೂ ಕಾನೂನು ಮಾಡುವರೇ ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
ಉದ್ದೇಶಪೂರ್ವಕವಾಗಿ ಒಬ್ಬರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ ಜೈಲಿಗೆ ಕಳುಹಿಸಿ, ನಂತರ ಆತ ನಿರಪರಾಧಿ ಎಂದು ಸಾಬೀತಾದರೆ, ಸುಳ್ಳು ಪ್ರಕರಣವನ್ನು ಸೃಷ್ಟಿಸಿದ ಸಚಿವರಿಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆಯೇ ಎಂದು ಬಿಜೆಪಿ ಆಪರೇಷನ್ ಕಮಲವನ್ನು ಲೇವಡಿ ಮಾಡಿದ್ದಾರೆ.
ಮೋದಿ ಮತ್ತು ಶಾ ಅವರು ನನ್ನ ವಿರುದ್ಧ ಕುತಂತ್ರ ನಡೆಸಿದರು. 2024ರಲ್ಲಿ ಅಬಕಾರಿ ನೀತಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ನನ್ನನ್ನು ಬಂಧಿಸಿ ಜೈಲಿಗೆ ಕಳುಹಿಸಿತ್ತು. ಆಗ ಸರ್ಕಾರವನ್ನು 160 ದಿನಗಳವರೆಗೆ ಜೈಲಿನಿಂದಲೇ ನಡೆಸಬೇಕಾಯಿತು ಎಂದೂ ಅವರು ನೆನಪಿಸಿಕೊಂಡಿದ್ದಾರೆ.