ಹಾಸನ: ಲೋಕಸಭಾ ಚುನಾವಣೆ ಸನ್ನಿಹಿತವಾಗಿರುವ ಸಂದರ್ಭದಲ್ಲಿ ಹಾಸನದಲ್ಲಿ ರಾಜಕೀಯ ನಾಯಕರೊಬ್ಬರ ಅಶ್ಲೀಲ ದೃಶ್ಯಗಳಿರುವ ಪೆನ್ ಡ್ರೈವ್ ಗಳು ನಿನ್ನೆ ಸಂಜೆಯಿಂದ ಓಡಾಡುತ್ತಿವೆ ಎಂಬ ವದಂತಿಗಳು ಹರಡಿದ್ದು, ವಿಪರೀತ ಗೊಂದಲದ ವಾತಾವರಣ ನಿರ್ಮಾಣವಾಗಿದೆ.
ರಾಜಕೀಯ ಮುಖಂಡರೋರ್ವರು ಹಲವಾರು ಹೆಣ್ಣುಮಕ್ಕಳ ಜೊತೆ ಲೈಂಗಿಕ ಚಟುವಟಿಕೆಯಲ್ಲಿರುವ ರಾಸಲೀಲೆಯ 8 ಜಿಬಿ ಪೆನ್ ಡ್ರೈವ್ ಗಳನ್ನು ನಿನ್ನೆ ರಾತ್ರಿಯೇ ಹರಡಲಾಗಿದೆ ಎಂದು ಹೇಳಲಾಗುತ್ತಿದ್ದು, ಇದು ನಿರೀಕ್ಷಿತ ಬೆಳವಣಿಗೆಯೇ ಆಗಿದೆ ಎಂದು ಹಾಸನದ ಪತ್ರಕರ್ತರು ಹೇಳಿದ್ದಾರೆ.
ಅಭ್ಯರ್ಥಿಯೋರ್ವರ ರಾಸಲೀಲೆಯ ವಿಡಿಯೋಗಳು ಬಿಡುಗಡೆಯಾಗಲಿವೆ ಎಂಬ ಸುದ್ದಿಗಳು ಹರಿದಾಡಿದ್ದವು. ಈ ಬೆಳವಣಿಗಳ ಬೆನ್ನಲ್ಲೇ ಜಿಲ್ಲೆಯ ಪ್ರಮುಖ ರಾಜಕೀಯ ಮುಖಂಡರೊಬ್ಬರು ನ್ಯಾಯಾಲಯದ ಮೊರೆ ಹೋಗಿ ತಮಗೆ ಸಂಬಂಧಿಸಿದ ಅಶ್ಲೀಲ ವಿಡಿಯೋಗಳ ಪ್ರಸಾರಕ್ಕೆ ತಡೆ ಕೋರಿ ಮಾಧ್ಯಮಗಳ ವಿರುದ್ಧ ತಡೆಯಾಜ್ಞೆ ತಂದಿದ್ದರು.
ಇದೀಗ ನಿನ್ನೆಯಿಂದಲೇ ರಾಜಕೀಯ ನಾಯಕರ ಅಶ್ಲೀಲ ವಿಡಿಯೋಗಳು ಹರಿದಾಡುತ್ತಿರುವ ವರದಿಗಳು ಬರುತ್ತಿದ್ದು, ಆಘಾತದ ವಿಷಯವೆಂದರೆ ನೂರಾರು ಮಹಿಳೆಯರ ಜೊತೆಗಿನ ಅಶ್ಲೀಲ ವಿಡಿಯೋಗಳು ಇದ್ದು, ಇದರ ಪರಿಣಾಮ ಏನಾಗಬಹುದು ಎಂಬ ಆತಂಕ ಮನೆ ಮಾಡಿದೆ.
ಈ ನಡುವೆ ಭಾರತೀಯ ಜನತಾ ಪಕ್ಷದ ಸ್ಥಳೀಯ ಮುಖಂಡರಾದ ಜಿ.ದೇವರಾಜೇಗೌಡ ಎಂಬುವವರು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಬರೆದಿರುವ ರಹಸ್ಯ ಪತ್ರದ ಪ್ರತಿಯೊಂದು ಕನ್ನಡ ಪ್ಲಾನೆಟ್ ಗೆ ಲಭ್ಯವಾಗಿದ್ದು, ಹಾಸನ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಪಕ್ಷಗಳ ಅಭ್ಯರ್ಥಿ ಆಯ್ಕೆ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕು. ಓರ್ವ ನಾಯಕನ ರಾಸಲೀಲೆಯ 2976 ವಿಡಿಯೋಗಳು ತಮ್ಮ ಬಳಿ ಇದ್ದು, ಈ ವಿಡಿಯೋಗಳ ಇನ್ನೊಂದು ಪೆನ್ ಡ್ರೈವ್ ಕಾಂಗ್ರೆಸ್ ನಾಯಕರ ಕೈ ಸೇರಿದೆ. ಹೀಗಾಗಿ ಈ ಅಭ್ಯರ್ಥಿ ಸ್ಪರ್ಧಿಸಿದರೆ ವಿಡಿಯೋಗಳು ಹೊರಗೆ ಬಂದು ಮೈತ್ರಿ ಪಕ್ಷಗಳಿಗೆ ಸೋಲಾಗುತ್ತದೆ. ಹೀಗಾಗಿ ಅವರಿಗೆ ಟಿಕೆಟ್ ನೀಡಬಾರದು ಎಂದು ಅವರು ಆ ಪತ್ರದಲ್ಲಿ ಬರೆದಿದ್ದಾರೆ.
ಅಶ್ಲೀಲ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿ ಎಲ್ಲ ಮೂರೂ ರಾಜಕೀಯ ಪಕ್ಷಗಳಲ್ಲಿ ವಿರೋಧಿಗಳನ್ನು ಕಟ್ಟಿಕೊಂಡಿದ್ದು, ಸಹಜವಾಗಿಯೇ ಚುನಾವಣೆ ಸಂದರ್ಭದಲ್ಲಿ ಪೆನ್ ಡ್ರೈವ್ ಗದ್ದಲ ಆರಂಭವಾಗಿದೆ.