ಬಿಜೆಪಿಗೆ ರಾಷ್ಟ್ರಧ್ವಜಕ್ಕಿಂತ ಭಗವಾಧ್ವಜವೇ ಮುಖ್ಯವಾಯಿತೆ?

Most read

ಆರ್‌ ಎಸ್‌ ಎಸ್‌ ನ ಮುಖವಾಣಿ ಆರ್ಗನೈಸರ್‌ ಪತ್ರಿಕೆಯಲ್ಲಿ 1947ರ  ಜುಲೈ 17 ಮತ್ತು 22 ರ ಸಂಚಿಕೆಗಳಲ್ಲಿ ರಾಷ್ಟ್ರಧ್ವಜಕ್ಕೆ ಸಂಬಂಧಿಸಿದಂಥ ಲೇಖನಗಳು ಪ್ರಕಟಗೊಂಡಿದ್ದವು. ʻʻತ್ರಿವರ್ಣ ಧ್ವಜವನ್ನು ದೇಶದ ಹಿಂದುಗಳು ತಮ್ಮದೆಂದುಕೊಳ್ಳುವುದು ಸಾಧ್ಯವೇ ಇಲ್ಲ ಮತ್ತು ಅದನ್ನು ಗೌರವಿಸುವುದೂ ಇಲ್ಲ. ಮೂರು ಎಂಬ ಸಂಖ್ಯೆಯೇ ಕೇಡಿನ ಸೂಚಕ. ಈ ಧ್ವಜದಲ್ಲಿರುವ ಮೂರು ಬಣ್ಣಗಳು  ಕೆಟ್ಟ ಮಾನಸಿಕ ಪರಿಣಾಮಗಳನ್ನು ಬೀರುತ್ತವೆ ಮತ್ತು ದೇಶಕ್ಕೆ ಹಾನಿಯನ್ನು ಉಂಟುಮಾಡುತ್ತದವೆʼʼ ಎಂದು ಆರ್ಗನೈಸರ್‌ ನಲ್ಲಿ ಬರೆಯಲಾಗಿತ್ತು.

ಹಾಗೆ ನೋಡಿದರೆ ಆರ್‌ ಎಸ್‌ ಎಸ್‌ ಘೋಷಣೆಯಲ್ಲಿ ಯಾವ ತಾರ್ಕಿಕತೆಯೂ ಇರಲಿಲ್ಲ. ಜಗತ್ತಿನ ಸೃಷ್ಟಿ ಮತ್ತು ನಿರ್ವಹಣೆಯನ್ನು ಬ್ರಹ್ಮ, ವಿಷ್ಣು, ಮಹೇಶ್ವರರೆಂಬ ತ್ರಿಮೂರ್ತಿಗಳೇ ನಡೆಸುತ್ತಾರೆ ಎಂಬುದು ಹಿಂದೂ ಪುರಾಣಗಳ ಹೇಳಿಕೆ. ಹಾಗಿದ್ದರೆ ಈ ತ್ರಿಮೂರ್ತಿಗಳು ಕೇಡಿನ ಸಂಕೇತವಾಗಲು ಸಾಧ್ಯವೇ? 

ಪ್ರಶ್ನೆ ಸಂಖ್ಯೆಯದ್ದಾಗಿರಲಿಲ್ಲ, ಆರ್‌ ಎಸ್‌ ಎಸ್‌ ಪ್ರತಿಪಾದಿಸುತ್ತಿದ್ದ, ಎಲ್ಲವನ್ನೂ ಹಿಂದೂ ಎಂಬ ತೆಕ್ಕೆಗೆ ತಂದು ನೋಡುವ ಸಾಮ್ರಾಜ್ಯಶಾಹಿ ಹಿಂದುತ್ವದ್ದಾಗಿತ್ತು. ಅದಕ್ಕೆ ಆರ್‌ ಎಸ್‌ ಎಸ್‌ ನ ಎರಡನೇ ರಾಷ್ಟ್ರೀಯ ಸರಸಂಚಾಲಕ ಮತ್ತು ಹಿಂದುತ್ವ ಪರಿಕಲ್ಪನೆಯ ಮೆದುಳು ಎಂದೇ ಹೆಸರಾದ ಎಂ.ಎಸ್.ಗೋಲ್ವಾಲ್ಕರ್‌ ತಮ್ಮ ಬಂಚ್‌ ಆಫ್‌ ಥಾಟ್ಸ್‌ ನಲ್ಲಿ ತ್ರಿವರ್ಣಧ್ವಜವನ್ನು ವಿರೋಧಿಸುತ್ತ, ʻʻದೇಶಕ್ಕೆ ಹೊಸ ಬಾವುಟ ನೀಡಲಾಗಿದೆ? ಯಾಕೆ ನಮ್ಮ ಬಳಿ ಇರಲಿಲ್ಲವೇ? ನಮ್ಮದು ಪುರಾತನ ನಾಗರಿಕತೆಯ, ವೈಭವದ ಗತ ಇತಿಹಾಸದ ಮಹಾನ್‌ ದೇಶ. ನಮ್ಮ ಬಳಿ ರಾಷ್ಟ್ರೀಯ ಲಾಂಛನಗಳು ಇರಲಿಲ್ಲವೇ? ಈಗ ಹೊಸದಾಗಿ ಸೃಷ್ಟಿಸುವ ಅಗತ್ಯವೇನಿತ್ತು?ʼʼಎಂದು ಪ್ರಶ್ನಿಸಿದ್ದರು.

ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಆರ್‌ ಎಸ್‌ ಎಸ್‌ ಮತ್ತು ಹಿಂದೂ ಮಹಾಸಭಾ ಬಲಪಂಥೀಯ ವಿಚಾರಧಾರೆಗಳನ್ನು ಪ್ರತಿಪಾದಿಸುತ್ತಿದ್ದ ಸಂಘಟನೆಗಳಾಗಿದ್ದವು. ಈ ಪೈಕಿ ಆರ್‌ ಎಸ್‌ ಎಸ್‌ ಸ್ವಾತಂತ್ರ್ಯ ಚಳವಳಿಯಿಂದ ಪ್ರಜ್ಞಾಪೂರ್ವಕವಾಗಿ ದೂರವೇ ಉಳಿಯಿತು. ವಿ.ಡಿ.ಸಾವರ್ಕರ್‌ ಮತ್ತು ಶ್ಯಾಮ್‌ ಪ್ರಸಾದ್‌ ಮುಖರ್ಜಿ ಅವರ ಹಿಂದೂ ಮಹಾಸಭಾ ಇನ್ನೊಂದು ಹೆಜ್ಜೆ ಮುಂದಿಟ್ಟು, ಬ್ರಿಟಿಷರ ಜೊತೆ ಸೇರಿಕೊಂಡಿತ್ತು. ಅಂಡಮಾನ್‌ ಜೈಲಿನಿಂದ ಬಂದ ನಂತರವಂತೂ ಸಾವರ್ಕರ್‌ ಬ್ರಿಟಿಷರಿಂದ ಪಿಂಚಣಿ ಪಡೆಯುತ್ತ ಅವರ ಏಜೆಂಟರಂತೆ ಉಳಿದು ಬಿಟ್ಟರು. ಸ್ವಾತಂತ್ರ್ಯ ಹೋರಾಟದ ಭಾಗವಾಗದೇ ಇದ್ದರೂ ಆರ್‌ ಎಸ್‌ ಎಸ್‌ ಮತ್ತು ಹಿಂದೂ ಮಹಾಸಭಾಗಳಿಗೆ ಸ್ವತಂತ್ರ ಭಾರತದಲ್ಲಿ ತಮ್ಮ ಅಜೆಂಡಾಗಳು ಈಡೇರುವುದು ಬೇಕಾಗಿತ್ತು. 

ಭಾರತದ ರಾಷ್ಟ್ರಧ್ವಜ ಅಂತಿಮವಾಗಿ ರೂಪುಗೊಂಡಿದ್ದು1947ರ ಜುಲೈ 22 ರಂದು. Constituent assembly ಸಭೆ ತ್ರಿವರ್ಣ ಧ್ವಜಕ್ಕೆ ಒಪ್ಪಿಗೆ ನೀಡಿತ್ತು. ತ್ರಿವರ್ಣದ ಒಳಗೆ ಇದ್ದ ಚರಕದ ಬದಲು ಅಶೋಕ ಚಕ್ರವನ್ನು ಬಳಸುವ ನಿರ್ಧಾರ ಮೊದಲ ಪ್ರಧಾನಿ ಪಂಡಿತ್‌ ಜವಹರಲಾಲ್‌ ನೆಹರೂ ಅವರದ್ದಾಗಿತ್ತು. 1947ರ  ಆಗಸ್ಟ್‌ 15 ರಂದು ಇದೇ ಧ್ವಜ ಭಾರತದ ಅಧಿಕೃತ ರಾಷ್ಟ್ರಧ್ವಜವಾಯಿತು. ನೆಹರೂ ಅವರೇ ಮೊದಲ ಬಾರಿ ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜವನ್ನು ಅರಳಿಸಿದ್ದರು. ಅಂದಿನಿಂದ ಇಂದಿನವರೆಗೆ ಈ ತ್ರಿವರ್ಣವನ್ನು ಕೋಟ್ಯಂತರ ಭಾರತೀಯರು ಆರಾಧಿಸುತ್ತ ಬಂದಿದ್ದಾರೆ. 

ಆದರೆ ಭಾರತೀಯ ಜನತಾ ಪಕ್ಷದ ಮಾತೃ ಸಂಘಟನೆ ಆರ್‌ ಎಸ್‌ ಎಸ್‌ ಇನ್ನೂ ರಾಷ್ಟ್ರಧ್ವಜವನ್ನು ಪೂರ್ಣ ಮನಸಿನಿಂದ ಒಪ್ಪಿಕೊಂಡೇ ಇಲ್ಲ. ಸ್ವಾತಂತ್ರ್ಯ ಗಳಿಸಿ 52 ವರ್ಷಗಳವರೆಗೆ ಅದು ತನ್ನ ನಾಗಪುರದ ಪ್ರಧಾನ ಕಚೇರಿಯಲ್ಲಿ ಆರ್‌ ಎಸ್‌ ಎಸ್ ರಾಷ್ಟ್ರಧ್ವಜವನ್ನು ಹಾರಿಸುತ್ತಲೇ ಇರಲಿಲ್ಲ. ಇದನ್ನು ಗಮನಿಸಿದ ಕೆಲವು ದೇಶಪ್ರೇಮಿ ಯುವಕರು 2001ರ ಜನವರಿ 26ರಂದು ಆರ್‌ ಎಸ್‌ಎಸ್‌ ಕಚೇರಿಗೆ ನುಗ್ಗಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದರು. ಈ ಯುವಕರ ವಿರುದ್ಧ ಆರ್‌ ಎಸ್‌ ಎಸ್‌ ದೂರು ನೀಡಿದ ಪರಿಣಾಮ ದೇಶಭಕ್ತ ಯುವಕರು ಜೈಲು ಸೇರುವಂತಾಗಿತ್ತು. ಇದಾದ ನಂತರ ಆರ್‌ ಎಸ್‌ ಎಸ್‌ ಕಚೇರಿಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವ ಪರಿಪಾಠ ಆರಂಭವಾಯಿತು. ನಾವು ಪ್ರೊಟೋಕಾಲ್‌ ದೃಷ್ಟಿಯಿಂದ ತ್ರಿವರ್ಣ ಧ್ವಜ ಹಾರಿಸುತ್ತಿರಲಿಲ್ಲ, ನಾವು ತ್ರಿವರ್ಣ ಧ್ವಜ ರೂಪುಗೊಂಡಾಗಿನಿಂದ ಅದನ್ನು ಗೌರವಿಸಿಕೊಂಡು ಬಂದಿದ್ದೇವೆ  ಎಂದು ಆರ್‌ ಎಸ್‌ ಎಸ್‌ ಸರಸಂಚಾಲಕರು ಹೇಳಿಕೊಂಡರೂ ವಾಸ್ತವ ಬೇರೆಯದ್ದೇ ಆಗಿತ್ತು. ವಿಶ್ವ ಹಿಂದೂ ಪರಿಷತ್‌ನ ಅಂತಾರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದ, ರಾಮಜನ್ಮಭೂಮಿ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಶೋಕ್‌ ಸಿಂಘಾಲ್ ʻಕೆಂಪು ಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುವುದೇ ನಮ್ಮ ಗುರಿʼ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದರು.

ಕೆರಗೋಡು

ಮಂಡ್ಯ ಜಿಲ್ಲೆ, ಮಂಡ್ಯ ತಾಲ್ಲೂಕು ಕೆರಗೋಡಿನಲ್ಲಿ ನಡೆಯುತ್ತಿರುವ ಹನುಮಧ್ವಜ ವಿವಾದವನ್ನು ಈ ಎಲ್ಲ ಹಿನ್ನೆಲೆಯಲ್ಲಿ ನೋಡಬೇಕಾಗುತ್ತದೆ. ನೀವು ಒಮ್ಮೆ ಈ ಕ್ರೋನಾಲಜಿ ಗಮನಿಸಿ.

1.  ಕೆರಗೋಡು ಗ್ರಾಮಪಂಚಾಯ್ತಿ ವ್ಯಾಪ್ತಿಯ ಕೆರಗೋಡು ಗ್ರಾಮದಲ್ಲಿ ಧ್ವಜ ಸ್ತಂಭವನ್ನು ಸ್ಥಾಪಿಸಲು ಅನುಮತಿ ಕೋರಿ ಅಲ್ಲಿನ ಗೌರಿಶಂಕರ ಸೇವಾ ಟ್ರಸ್ಟ್ ಅರ್ಜಿ ಸಲ್ಲಿಸಿತ್ತು.

2.  ಅರ್ಜಿ ಸಲ್ಲಿಸುವಾಗಲೇ ಧ್ವಜಸ್ತಂಭ ದಲ್ಲಿ ರಾಷ್ಟ್ರಧ್ವಜ ಮತ್ತು ನಾಡಧ್ವಜದ ಹೊರತಾಗಿ ಬೇರೆ ಧ್ವಜ ಹಾರಿಸುವುದಿಲ್ಲ ಎಂದು ಸ್ವತಃ ಟ್ರಸ್ಟ್ ಹೇಳಿಕೊಂಡಿತ್ತಲ್ಲದೆ, ಈ ಸಂಬಂಧ ಗ್ರಾಮಪಂಚಾಯ್ತಿಯ ಷರತ್ತುಗಳಿಗೆ ಬದ್ಧವಾಗಿರುವುದಾಗಿ ಹೇಳಿತ್ತು.

3. ಟ್ರಸ್ಟ್ ನ ಮನವಿಯನ್ನು ಪುರಸ್ಕರಿಸಿದ ಗ್ರಾಮಪಂಚಾಯ್ತಿ ಧ್ವಜಸ್ತಂಭದಲ್ಲಿ ರಾಷ್ಟ್ರಧ್ವಜ ಮತ್ತು ಕನ್ನಡ ಧ್ವಜವನ್ನು ಹೊರತುಪಡಿಸಿದ ಬೇರೆ ಧ್ವಜ ಹಾರಿಸುವಂತಿಲ್ಲ ಎಂಬ ಕಟ್ಟಳೆಯೊಂದಿಗೆ ಅನುಮತಿ ನೀಡಿತ್ತು.

4. ಆಗಸ್ಟ್‌ 26ರಂದು ಬರೆದುಕೊಟ್ಟ ಮುಚ್ಚಳಿಕೆಯನ್ನು ಉಲ್ಲಂಘಿಸಿ, ಗ್ರಾಮಪಂಚಾಯ್ತಿ ನೀಡಿದ್ದ ಆದೇಶದ ಷರತ್ತುಗಳನ್ನು ಧಿಕ್ಕರಿಸಿ ಹನುಮಧ್ವಜವನ್ನು ಹಾರಿಸಲಾಯಿತು.

5. ಗ್ರಾಮಪಂಚಾಯ್ತಿಗೆ (ಸರ್ಕಾರಿ ಜಾಗ) ಸೇರಿದ ಜಾಗದಲ್ಲಿ ರಾಷ್ಟ್ರಧ್ವಜ ಮತ್ತು ನಾಡಧ್ವಜ ಹೊರತುಪಡಿಸಿ ಬೇರೆ ಧ್ವಜ ಹಾರಿಸಲು ಅವಕಾಶ ಇಲ್ಲದೇ ಕಾರಣ, ಟ್ರಸ್ಟ್‌ ನಿಯಮ ಉಲ್ಲಂಘಿಸಿ ಹನುಮಧ್ವಜ ಹಾರಿಸಿದ ಕಾರಣದಿಂದ ಜಿಲ್ಲಾಡಳಿತ ಬಾವುಟವನ್ನು ತೆರವುಗೊಳಿಸಿ ರಾಷ್ಟ್ರಧ್ವಜವನ್ನು ಹಾರಿಸಿತು.

6. ರಾಷ್ಟ್ರಧ್ವಜವನ್ನು ತೆರವುಗೊಳಿಸಿ ಹನುಮಧ್ವಜ  (ಭಗವಾಧ್ವಜ) ಹಾರಿಸಬೇಕೆಂದು ಒತ್ತಾಯಿಸಿ ಕೆಲವು ಯುವಕರು ಪ್ರತಿಭಟನೆ ನಡೆಸಿದರು, ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ಅವರನ್ನು ಚದುರಿಸಿದರು.

7. ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಸೇರಿದಂತೆ ಭಾರತೀಯ ಜನತಾ ಪಕ್ಷದ ನಾಯಕರು ಕೆರಗೋಡಿಗೆ ಬಂದರು. ಪ್ರಚೋದನಕಾರಿ ಭಾಷಣಗಳನ್ನು ನಡೆಸಿದರು. ರಾಜ್ಯವ್ಯಾಪಿ ಹೋರಾಟಕ್ಕೆ ಕರೆ ನೀಡಿದರು.

ಈ ಕ್ರೊನಾಲಜಿಯನ್ನು ಸರಿಯಾಗಿ ಗಮನಿಸಿದರೆ ವಿವಾದವನ್ನು ಯಾರು, ಹೇಗೆ, ಯಾಕೆ ಸೃಷ್ಟಿಸಿದರು ಎಂಬುದು ಚೆನ್ನಾಗಿ ಅರ್ಥವಾಗುತ್ತದೆ. ವಿವಾದ ಶುರುವಾಗುತ್ತಿದ್ದಂತೆ ಇದೆಲ್ಲ ಮೊದಲೇ ತಿಳಿದಿದ್ದವರಂತೆ ಆರ್‌ ಅಶೋಕ್‌ ಮತ್ತು ಬಿಜೆಪಿ ನಾಯಕರು ಮಿಂಚಿನ ವೇಗದಲ್ಲಿ ಕೆರಗೋಡಿಗೆ ಹೋಗುತ್ತಾರೆ. ಬಂದ್‌ ಕರೆ ನೀಡುತ್ತಾರೆ. ಇದೆಲ್ಲವೂ ಪೂರ್ವ ನಿಯೋಜಿತ ಎನಿಸುವುದಿಲ್ಲವೇ?

ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಭಾರತೀಯ ಜನತಾಪಕ್ಷಕ್ಕೆ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ವಿವಾದಗಳು ಬೇಕು. ಒಂದು ವೇಳೆ ವಿವಾದಗಳು ಇಲ್ಲದೇ ಇದ್ದರೂ ಅದನ್ನು ಸೃಷ್ಟಿಸುವುದು ಹೇಗೆ ಎಂಬುದು ಅದಕ್ಕೆ ಚೆನ್ನಾಗಿಯೇ ಗೊತ್ತಿದೆ. ಕೆರಗೋಡಿನ ಪ್ರಕರಣ ಇದಕ್ಕೆ ಸ್ಪಷ್ಟ ಉದಾಹರಣೆ.

ಕೆರಗೋಡಿನಲ್ಲಿ ರಾಷ್ಟ್ರಧ್ವಜ ಹಾರಿಸುವ ಜಾಗದಲ್ಲಿ ಹನುಮಧ್ವಜ ಹಾರಿಸಬೇಕು ಎಂದು ಬಿಜೆಪಿ ಯಾಕೆ ಪಟ್ಟು ಹಿಡಿದಿದೆ? ಬಿಜೆಪಿಗೆ ರಾಷ್ಟ್ರಧ್ವಜಕ್ಕಿಂತ ಹನುಮಧ್ವಜವೇ ಹೆಚ್ಚಾಗಿಹೋಯಿತೇ? ಅಷ್ಟಕ್ಕೂ ಬಿಜೆಪಿ ಬಳಿ ಇನ್ನೂ ಎಷ್ಟು ಬಾವುಟಗಳಿವೆ? ಆರ್‌ ಎಸ್‌ ಎಸ್‌ ಬಳಸುವ ಕೇಸರಿ ಧ್ವಜ, ಶಿವಾಜಿ ಚಿತ್ರವಿರುವ ಭಗವಾಧ್ವಜ, ರಾಮನ ಚಿತ್ರವಿರುವ ರಾಮಧ್ವಜ, ಹನುಮನ ಚಿತ್ರವಿರುವ ಹನುಮಧ್ವಜ… ಹೀಗೆ ಇನ್ನೆಷ್ಟು ಬಾವುಟಗಳನ್ನು ಸೃಷ್ಟಿಸಲಿದೆ? ಇದೆಲ್ಲದರ ನಡುವೆ ಒಂದು ಸಾಮಾನ್ಯ ಅಂಶವೆಂದರೆ ಎಲ್ಲವೂ ಕೇಸರಿ ಬಣ್ಣದಲ್ಲಿವೆ. ರಾಮ, ಸೀತೆ, ಲಕ್ಷ್ಮಣರ ಪಾದದ ಬಳಿ ಕುಳಿತ ಹನುಮನ ಕೈಯಲ್ಲಿ ನಾವು ಇದುವರೆಗೆ ನೋಡಿಕೊಂಡು ಬಂದಿದ್ದು ಹಳದಿ ಬಣ್ಣದ ತ್ರಿಕೋನ ಧ್ವಜ, ಈಗ ಅದೂ ಕೂಡ ಕೇಸರಿಯಾಗಿ ಹೋಗಿದೆ!

ಆರ್‌ ಎಸ್‌ ಎಸ್‌ ಮುಖವಾಣಿ ಆರ್ಗನೈಸರ್‌ ನಲ್ಲಿ ಬರೆದಂತೆ ಸಂಘಪರಿವಾರ ಯಾವತ್ತಿಗೂ ಭಾರತದ ತ್ರಿವರ್ಣವನ್ನು ಒಪ್ಪಿಕೊಂಡೂ ಇಲ್ಲ, ಗೌರವಿಸುವುದೂ ಇಲ್ಲ. ಏನೇ ಗೌರವ ತೋರುತ್ತಿದ್ದರೂ ಅದು ತೋರಿಕೆಗೆ ಮಾತ್ರ. ಆರ್‌ ಎಸ್‌ ಎಸ್‌ ಪ್ರತಿಪಾದಿಸುವ ಹಿಂದೂ ರಾಷ್ಟ್ರೀಯತೆಗೆ ಸ್ಥಾಪನೆಗೆ ಅವರಿಗೆ ಬೇಕಿರುವುದು ಗೋಲ್ವಾಲ್ಕರ್‌ ಹೇಳಿದಂತೆ ಕೇಸರಿ ಬಾವುಟ! ಅದಕ್ಕಾಗಿಯೇ ಸಂಘಪರಿವಾರ ಬಾವುಟಗಳ ವಿಷಯದಲ್ಲಿ ಗದ್ದಲ ಎಬ್ಬಿಸುತ್ತದೆ. ಜನಾಭಿಪ್ರಾಯ ರೂಪಿಸಲು ಯತ್ನಿಸುತ್ತದೆ. 

ಕೆರಗೋಡಿನಲ್ಲಿ ಸ್ಥಾಪನೆಯಾದ ಧ್ವಜಸ್ತಂಭದಲ್ಲಿ ಹಾರಿಸಬೇಕಾಗಿದ್ದು ರಾಷ್ಟ್ರಧ್ವಜ ಅಥವಾ ನಾಡಧ್ವಜಗಳು. ಈ ಎರಡನ್ನೂ ಸಂಘಿಗಳು ಒಪ್ಪುವುದಿಲ್ಲ. ಆ ಕಾರಣಕ್ಕಾಗಿಯೇ ಅಲ್ಲಿ ಹನುಮಧ್ವಜವನ್ನು ಹಾರಿಸಿದ್ದಾರೆ ಮತ್ತು ಅದರ ಮೂಲಕ ಗಲಭೆಗೆ ಸಂಚು ನಡೆಸುತ್ತಿದ್ದಾರೆ. ಈ ಸ್ಪಷ್ಟತೆ ಸರ್ಕಾರಕ್ಕೂ ಇರಬೇಕು, ಸಮಾಜಕ್ಕೂ ಇರಬೇಕು.

ದಿನೇಶ್ ಕುಮಾರ್ ಎಸ್.ಸಿ.

More articles

Latest article