ಜೆರುಸಲೆಂ: ದಕ್ಷಿಣ ಇಸ್ರೇಲ್ ನ ಸರೋಕಾ ವೈದ್ಯಕೀಯ ಕೇಂದ್ರದ ಕಟ್ಟಡದ ಮೇಲೆ ಇಂದು ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಇದರ ಪರಿಣಾಮವಾಗಿ ಕಟ್ಟಡದ ಒಳಗಿದ್ದ ಹಲವರು ಗಾಯಗೊಂಡಿದ್ದು, ಅಪಾರ ಹಾನಿಯುಂಟಾಗಿದೆ ಎಂದು ಇಸ್ರೇಲ್ ಸರ್ಕಾರ ತಿಳಿಸಿದೆ.
ದಾಳಿಗೆ ಪ್ರತಿಕ್ರಿಯಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಈ ದಾಳಿಗೆ ಇರಾನ್ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೂಲಗಳ ಈ ಪ್ರಕಾರ ದಾಳಿಯಲ್ಲಿ ಕನಿಷ್ಠ 47 ಮಂದಿ ಗಾಯಗೊಂಡಿದ್ದಾರೆ.
ಸರೋಕಾ ವೈದ್ಯಕೀಯ ಕೇಂದ್ರ ಇಸ್ರೇಲ್ ನಲ್ಲಿನ ಅತಿದೊಡ್ಡ ಆಸ್ಪತ್ರೆ ಎಂದು ತಿಳಿದು ಬಂದಿದೆ. ಕ್ಷಿಪಣಿ ದಾಳಿಯಾದ ಸಂದರ್ಭದಲ್ಲಿ ಆಸ್ಪತ್ರೆಯ ಒಳಗೆ ಉಂಟಾದ ತಲ್ಲಣದ ದೃಶ್ಯಗಳ ವಿಡಿಯೊಗಳನ್ನು ಇಸ್ರೇಲಿ ಮಾಧ್ಯಮಗಳಲ್ಲಿ ಬಿತ್ತರಿಸಲಾಗಿದೆ. ಹಾರಿಹೋದ ಕಿಟಕಿಗಳು, ಕಟ್ಟಡದ ಒಳಗೆ ದಟ್ಟವಾದ ಕಪ್ಪು ಹೊಗೆ ಆವರಿಸುರುವುದು, ಜನರು, ವೈದ್ಯರು ಭಯದಿಂದ ದಿಕ್ಕಾಪಾಲಾಗಿ ಓಡುವ ದೃಶ್ಯಗಳು ವೈರಲ್ ಆಗಿವೆ.
ಇರಾನ್ ರಾಜಧಾನಿ ಟೆಹರಾನ್ ಮೇಲೆ ಇಸ್ರೇಲ್ ಬುಧವಾರ ಮುಂಜಾನೆಯೂ ವೈಮಾನಿಕ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡಾ ಇಸ್ರೇಲ್ ಮೇಲೆ ಸಣ್ಣ ಪ್ರಮಾಣದಲ್ಲಿ ಕ್ಷಿಪಣಿ ದಾಳಿ ನಡೆಸಿದೆ.
ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಸತತ ಏಳನೇ ದಿನವೂ ಮುಂದುವರಿದಿದೆ. ನಿನ್ನೆ ನಡೆಸಿದ ದಾಳಿಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಆದರೆ ಇರಾನ್ ಯುರೇನಿಯಂ ಶುದ್ಧೀಕರಣ ಘಟಕ ಮತ್ತು ಕ್ಷಿಪಣಿಯ ಬಿಡಿಭಾಗಗಳ ತಯಾರಿಕಾ ಕೇಂದ್ರವನ್ನು ನಾಶಪಡಿಸಲಾಗಿದೆ ಎಂದು ಇಸ್ರೇಲ್ ಸೇನೆ ತಿಳಿಸಿದೆ. ದೇಶದ ಪ್ರಮುಖ ರೇಡಾರ್ ವ್ಯವಸ್ಥೆಗೆ ಹಾನಿಯಾಗಿದೆ ಎಂದು ಇರಾನ್ ತಿಳಿಸಿದೆ.
ಟೆಹರಾನ್ನ ಸುತ್ತಮುತ್ತಲಿರುವ ಇರಾನ್ನ ಪರಮಾಣು ಯೋಜನೆಗೆ ಸಂಬಂಧಿಸಿದ ಸ್ಥಳಗಳನ್ನು ಇಸ್ರೇಲ್ ನಾಶಪಡಿಸಿದೆ ಎಂದು ಅಂತರರಾಷ್ಟ್ರೀಯ ಅಣುಶಕ್ತಿ ಏಜೆನ್ಸಿ ಖಚಿತಪಡಿಸಿದೆ.
ವಿಮಾನಗಳಿಗೆ ತೈಲ ಪೂರೈಸುವ ಟ್ಯಾಂಕರ್ಗಳು ಮತ್ತು ಸಿ17 ಯುದ್ಧ ವಿಮಾನಗಳನ್ನು ಅಮೆರಿಕವು ರಾತ್ರೋರಾತ್ರಿ ಪ್ರೆಸ್ಟ್ವಿಕ್, ಸ್ಕಾಟ್ಲೆಂಡ್ ಮತ್ತು ಇಟಲಿಯಲ್ಲಿನ ಯುರೋಪ್ ವಾಯುನೆಲೆಗಳಿಗೆ ಕಳುಹಿಸಿದೆ ಎಂದು ತಿಳಿದು ಬಂದಿದೆ. 12 ಎಫ್–16 ಯುದ್ಧವಿಮಾನಗಳನ್ನು ಅಮೆರಿಕವು ಇಟಲಿಯ ವಾಯುನೆಲೆಯಿಂದ ಸೌದಿ ಅರೇಬಿಯಾದ ವಾಯುನೆಲೆಗೆ ಸ್ಥಳಾಂತರಿಸಿದೆ ಎಂದು ಹೇಳಲಾಗುತ್ತಿದೆ.