ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಪಂದ್ಯಾವಳಿ ಇಂದಿನಿಂದ ಆರಂಭ. 1 ಪ್ರಶಸ್ತಿ, 10 ತಂಡ, 12 ತಾಣಗಳಲ್ಲಿ ಸೆಣಸು. ಒಟ್ಟು 74 ಪಂದ್ಯಗಳು. ಮಾ.28ರಿಂದ ಮೇ 31ರವರೆಗೆ ಪಂದ್ಯಾವಳಿ. ಗೆದ್ದವರಿಗೆ 20 ಕೋಟಿ ರೂ., ದ್ವಿತೀಯ ಸ್ಥಾನಿಗೆ 13 ಕೋಟಿ ರೂ. ಬಹುಮಾನ ಸಿಗಲಿದೆ.
ಆಟಗಾರರ ಜತೆ ಕುಟುಂಬಸ್ಥರ ಪ್ರಯಾಣಕ್ಕಿಲ್ಲ ಅವಕಾಶ, ಪಂದ್ಯದ ದಿನ ಮೈದಾನದಲ್ಲಿ ತಾಲೀಮು ಸಲ್ಲ, 2 ತಂಡಗಳ ಮಾಲಿಕತ್ವವೇ ಬದಲು ಸೇರಿದಂತೆ ಅನೇಕ ಬದಲಾವಣೆಗಳು. ಸತತ 2ನೇ ಬಾರಿ ಪ್ರಶಸ್ತಿ ಗೆದ್ದ 3ನೇ ತಂಡ ಎನಿಸಿಕೊಳ್ಳಲು ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅವಕಾಶ. 11 ಬಲಿ ಪಡೆದ ಕಾಲ್ತುಳಿತ ದುರಂತದ ಕರಾಳ ನೆನಪಿನ ನಡುವೆಯೇ ಟಿ20 ಕ್ರಿಕೆಟ್ ಸಡಗರಕ್ಕೆ ಕ್ಷಣಗಣನೆ ಆರಂಭವಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರುತಂಡವು ತನ್ನ ಮೊದಲ ಪಂದ್ಯಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆಯಲಿರುವ ಸೀಸನ್ ಓಪನರ್ ಪಂದ್ಯಕ್ಕಾಗಿ ಆಟಗಾರರು ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ.
ಕಠಿಣ ತರಬೇತಿ: ತಂಡದ ಆಟಗಾರರು ಕಳೆದ ಕೆಲವು ದಿನಗಳಿಂದ ತವರು ಮೈದಾನದಲ್ಲಿ ಕಠಿವಾದ ತರಬೇತಿಯಲ್ಲಿ ಭಾಗವಹಿಸಿದ್ದಾರೆ. ವಿಶೇಷವಾಗಿ ಪಂದ್ಯದ ಸನ್ನಿವೇಶವನ್ನೇ ಸೃಷ್ಟಿಸಿ ನಡೆಸಲಾಗುವ ನೈಜ್ಯ ಪದ್ಯದ ಮಾದರಿಯ ಅಭ್ಯಾಸದಲ್ಲಿ ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಅವರಂತಹ ದೈತ್ಯ ಬ್ಯಾಟರ್ಗಳಿಗೆ ಬೌಲಿಂಗ್ ಮಾಡುವ ಮೂಲಕ ಬೌಲರ್ಗಳು ತಮ್ಮ ಲಯವನ್ನು ಕಂಡುಕೊಂಡಿದ್ದಾರೆ. “ನಮ್ಮ ಸಿದ್ಧತೆ ಅತ್ಯುತ್ತಮವಾಗಿದೆ, ಆಟಗಾರರು ದೈಹಿಕವಾಗಿ ಮತ್ತು ಮಾನಸಿಕವಾಗಿ ಪಂದ್ಯದ ಒತ್ತಡವನ್ನು ಎದುರಿಸಲು ಸಜ್ಜಾಗಿದ್ದಾರೆ” ಎಂದು ತಂಡದ ಮ್ಯಾನೇಜ್ಮೆಂಟ್ ವಿಶ್ವಾಸ ವ್ಯಕ್ತಪಡಿಸಿದೆ.
ಬೌಲಿಂಗ್ ವಿಭಾಗಕ್ಕೆ ಹೊಸ ಬಲ: ಈ ಬಾರಿ ಆರ್ಸಿಬಿ ಬೌಲಿಂಗ್ ವಿಭಾಗವು ಸಾಕಷ್ಟು ಕುತೂಹಲ ಮೂಡಿಸಿದೆ. ಅದರಲ್ಲೂ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಅವರ ಸೇರ್ಪಡೆಯು ತಂಡದ ಶಕ್ತಿಯನ್ನು ದ್ವಿಗುಣಗೊಳಿಸಿದೆ. ಅವರ ಸ್ವಿಂಗ್ ಮತ್ತು ನಿಖರ ಯಾರ್ಕರ್ಗಳು ಎದುರಾಳಿ ಬ್ಯಾಟರ್ಗಳಿಗೆ ಸವಾಲಾಗಲಿವೆ. ಯುವ ಬೌಲರ್ಗಳೊಂದಿಗೆ ಭುವಿ ಅವರ ಅನುಭವವು ತಂಡಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ ಎಂದು ಕೋಚ್ಗಳು ಅಭಿಪ್ರಾಯಪಟ್ಟಿದ್ದಾರೆ.
ತವರು ಮೈದಾನದ ಲಾಭ: ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ವರ್ತನೆ ಬಗ್ಗೆ ಸಣ್ಣ ಮಟ್ಟದ ಕುತೂಹಲವಿದ್ದರೂ, ಕಳೆದ ಹಲವು ದಿನಗಳಿಂದ ಇದೇ ಮೈದಾನದಲ್ಲಿ ಅಭ್ಯಾಸ ಮಾಡಿರುವುದು ಆರ್ಸಿಬಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಿದೆ. ಕ್ರೀಡಾಂಗಣವು ಕೆಂಪು ಬಣ್ಣದ ಆರ್ಸಿಬಿ ಜೆರ್ಸಿಗಳಿಂದ ಕಂಗೊಳಿಸುತ್ತಿದ್ದು, ಅಭಿಮಾನಿಗಳ ಬೆಂಬಲದೊಂದಿಗೆ ಟೂರ್ನಿಯನ್ನು ಗೆಲುವಿನೊಂದಿಗೆ ಆರಂಭಿಸಲು ತಂಡ ಹವಣಿಸುತ್ತಿದೆ.
“ನಮ್ಮನ್ನು ಬೆಂಬಲಿಸುತ್ತಿರುವ ಅಭಿಮಾನಿಗಳಿಗೆ ಧನ್ಯವಾದಗಳು. ಈ ಸುದೀರ್ಘ ಟೂರ್ನಿಯಲ್ಲಿ ನಿಮ್ಮ ಪ್ರೀತಿ ಮತ್ತು ಬೆಂಬಲ ಹೀಗೆಯೇ ಇರಲಿ” ಎಂದು RCB ತಂಡದ ನಿರ್ದೇಶಕ ಮೊ ಬೊಬಾಟ್ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

