ಒಳಮೀಸಲಾತಿ: ಅಲೆಮಾರಿಗಳಿಗೂ ಇತರರಿಗೂ ಒಂದೇ ಮಾನದಂಡ ಸಲ್ಲದು

Most read

ಒಳಮೀಸಲಾತಿ ಜಾರಿಯ ಕುರಿತು ಸರ್ಕಾರ ನೇಮಿಸಿರುವ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ಅವರ ಆಯೋಗ ಸಧ್ಯದಲ್ಲೇ ಮಧ್ಯಂತರ ವರದಿ ನೀಡಲಿದೆ ಎಂದು ಗೃಹಸಚಿವ ಡಾ. ಜಿ.ಪರಮೇಶ್ವರ್‌ ತಿಳಿಸಿದ್ದಾರೆ. ಸಧ್ಯದ ಪರಿಸ್ಥಿತಿಗಳನ್ನು ನೋಡಿದರೆ ಈ ಮಧ್ಯಂತರ ವರದಿ ಯಾರಿಗೆ ಎಷ್ಟು ಮೀಸಲಾತಿ ನೀಡಬೇಕು ಎಂಬ ಮ್ಯಾಟ್ರಿಕ್ಸ್‌ ನೀಡುವ ಸಾಧ್ಯತೆ ತೀರಾ ಕಡಿಮೆ. ಹೆಚ್ಚೆಂದರೆ ಸರ್ಕಾರಕ್ಕೆ ಗಡುವು ನೀಡಿ ಮುಂದಿನ ಕ್ರಮಗಳ ಕುರಿತು ಕೆಲವು ತಾಕೀತು ಮಾಡಬಹುದು. ಸುಪ್ರೀಂ ಕೋರ್ಟು ʼಎಂಪಿರಿಕಲ್‌ ಡೇಟಾʼ ಅಥವಾ ಪ್ರಾಯೋಗಿಕ ದತ್ತಾಂಶದ ಮೂಲಕ ಒಳಮೀಸಲಾತಿ ಜಾರಿ ಮಾಡಲು ಆದೇಶಿಸಿರುವುದರಿಂದ ಇದಕ್ಕೆ ಪೂರಕವಾದ ಡೇಟಾಗಳನ್ನು ಒದಗಿಸಲು ನ್ಯಾ. ನಾಗಮೋಹನದಾಸ್‌ ವರದಿ ತಿಳಿಸಬಹುದು. ಈ ನಿಟ್ಟಿನಲ್ಲಿ ʼಕಾಂತರಾಜ್‌ ವರದಿʼ ಒದಗಿಸಲು ಕೇಳಬಹುದು ಇಲ್ಲವೇ ತ್ವರಿತಗತಿಯಲ್ಲಿ ಮತ್ತೊಂದು ಜಾತಿಗಣತಿ ನಡೆಸಲು ಶಿಫಾರಸು ಮಾಡಬಹುದು. ಈ ನಡುವೆ, ಒಳಮೀಸಲಾತಿ ಜಾರಿಗೊಳಿಸುವವರೆಗೆ ಹೊಸ ನೇಮಕಾತಿಗಳನ್ನು ನಡೆಸುವುದಿಲ್ಲ ಎಂದು ಸರ್ಕಾರ ಈ ಹಿಂದೆ ನೀಡಿದ್ದ ವಾಗ್ದಾನವನ್ನು ಮತ್ತೊಮ್ಮೆ ಹೇಳಿರುವುದು ಸ್ವಾಗತಾರ್ಹ.  ಏನೇ ಆಗಲಿ ಆದಷ್ಟು ಬೇಗನೇ ಒಳಮೀಸಲಾತಿ ಜಾರಿಯಾಗಬೇಕು ಎಂಬುದು ಎಲ್ಲರ ಕಾಳಜಿ ಮತ್ತು ಕಳಕಳಿ.

ಒಳಮೀಸಲಾತಿ ಎಂದೊಡನೆ ಅದು ಮಾದಿಗ- ಹೊಲೆಯ- ಲಂಬಾಣಿ- ಭೋವಿ, ಹೀಗೆ ನಾಲ್ಕೈದು ಸಮುದಾಯಗಳ ಹೆಸರುಗಳೇ ಮುನ್ನೆಲೆಗೆ ಬರುತ್ತಿವೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಪರಿಶಿಷ್ಟ ಜಾತಿಗಳ 101 ಜಾತಿಗಳ ಪೈಕಿ ಈ ನಾಲ್ಕೈದು ಸಮುದಾಯಗಳು ಹೆಚ್ಚು ಜನಸಂಖ್ಯೆ ಹೊಂದಿರುವ ಜಾತಿಗಳು. ಆದರೆ ನ್ಯಾ. ಸದಾಶಿವ ಆಯೋಗದ ವರದಿಯ ಮಾನದಂಡದಂತೆ ಎಡಗೈ-ಬಲಗೈ-ಸ್ಪೃಶ್ಯ-ಅಸ್ಪೃಶ್ಯ ಎಂಬ ವಿಭಾಗೀಕರಣ ಮಾಡಿಕೊಂಡಾಗ ಚಿತ್ರಣ ಬೇರಾಗುತ್ತದೆ. ಈಗ ಒಳಮೀಸಲಾತಿ ಜಾರಿಯಲ್ಲಿ ಆಗಿರುವ ದೊಡ್ಡ ಕಗ್ಗಂಟು ಎಂದರೆ ಮೇಲೆ ಹೇಳಿದ ಪ್ರಮುಖ ಜಾತಿಗಳ ಜನಸಂಖ್ಯೆಯ ಕುರಿತು ಇರುವ ಗೊಂದಲ. ತೆಲಂಗಾಣದ ರೀತಿಯಲ್ಲಿ 2011ರ ಜನಗಣತಿಯನ್ನೇ ಮಾನದಂಡವಾಗಿಸಿಕೊಂಡರೆ ಕರ್ನಾಟಕದಲ್ಲಿ ಒಳಮೀಸಲಾತಿ ಜಾರಿ ಸುಲಭವಲ್ಲ. ಯಾಕೆಂದರೆ ಇದುವರೆಗೆ ಭಾರತ ಸರ್ಕಾರ ನಡೆಸಿದ ಜನಗಣತಿಯಲ್ಲಿ Sc, St, ಆದಿ ಕರ್ನಾಟಕ, ಆದಿ ದ್ರಾವಿಡ ಎಂಬ ಉಲ್ಲೇಖಗಳು ಇವೆಯೇ ಹೊರತು 101 ಜಾತಿಗಳ ಜನರೂ ತಮ್ಮ ತಮ್ಮ ಜಾತಿಗಳ ಹೆಸರುಗಳನ್ನು ನಮೂದಿಸಿಲ್ಲ. ಇನ್ನೂ ಸಂಕೀರ್ಣವಾಗಿರುವುದು ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಎರಡು ಜಾತಿಗಳು ಒಂದೇ ಹೆಸರಲ್ಲಿ ನಮೂದಿಸಿಕೊಂಡಿರುವುದು. ಉದಾಹರಣೆಗೆ ಆದಿಕರ್ನಾಟಕ ಎಂಬ ಹೆಸರಿನಲ್ಲಿ ಕೆಲವು ಕಡೆಗಳಲ್ಲಿ ಹೊಲೆಯರೂ ಕೆಲವು ಕಡೆಗಳಲ್ಲಿ ಮಾದಿಗರೂ ನಮೂದಿಸಿರುವುದು ಈಗ ಒಳಮೀಸಲಾತಿ ಸಂದರ್ಭದಲ್ಲಿ ಮತ್ತಷ್ಟು ಗೊಂದಲಕ್ಕೆ ಕಾರಣವಾಗಿದೆ. ಈಗ ಸರ್ಕಾರವಾಗಲೀ, ಆಯೋಗವಾಗಲೀ ಈ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಂಡೇ ಮುಂದೆ ಹೋಗಬೇಕಿದೆ.

ಆದರೆ, ಇದರ ಆಚೆಗೆ ಮತ್ತೊಂದು ಗಂಭೀರ ಸಮಸ್ಯೆ ಇದೆ. ಅದು ಪರಿಶಿಷ್ಟ ಜಾತಿಗಳಲ್ಲಿ ಇರುವ ಅಲೆಮಾರಿ ಸಮುದಾಯಗಳಿಗೆ ಒಳಮೀಸಲಾತಿ ಹಂಚುವ ಕುರಿತಾದದ್ದು. ಮೇಲೆ ಹೇಳಿದ ನಾಲ್ಕಾರು ಪ್ರಮುಖ ಜಾತಿಗಳಿಗೆ ಅಥವಾ ಜಾತಿ ಗುಂಪುಗಳಿಗೆ ಜನಸಂಖ್ಯೆ ಆಧಾರದಲ್ಲಿ ಒಳಮೀಸಲಾತಿ ಹಂಚಿದಂತೆ ಅಲೆಮಾರಿಗಳಿಗೂ ಹಂಚಿದರೆ ಈ ಸಮುದಾಯಗಳ ಪರಿಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಆಗುತ್ತದೆಯೇ ಹೊರತು ಅವರಿಗೆ ಮೀಸಲಾತಿ ಎಂಬುದೇ ಮರೀಚೀಕೆಯಾಗುತ್ತದೆ. ಯಾಕೆಂದರೆ ಈ ಸಮುದಾಯಗಳು ಲಕ್ಷ ಲಕ್ಷ ಸಂಖ್ಯೆಯಲ್ಲಿ ಇಲ್ಲ, ಕೆಲವು ಸಾವಿರಗಳ ಸಂಖ್ಯೆಯಲ್ಲಿ ಇವೆ. ದಕ್ಕಲಿಗ, ಮಾಲ ಸನ್ಯಾಸಿ, ಮಾಸ್ತಿ, ಮಾಂಗ್‌ ಗಾರುಡಿ, ಸಿಳ್ಯೆಕ್ಯಾತ, ಸಿಂದೊಳ್ಳು, ಹಂದಿಜೋಗಿ, ಹಳ್ಳೇರ್‌,  ಮುಕ್ರಿ, ಪಂಬದ, ಬೆಳಾರೆ, ಮನ್ಸ, ಮುಂಡಾಲ,, ನಾಯದ, ನಲ್ಕೆ ಮೊದಲಾದ  ಈ ಅಲೆಮಾರಿ- ಅರೆ ಅಲೆಮಾರಿ, ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಸಮುದಾಯಗಳ ಪರಿಸ್ಥಿತಿ ಹೇಗಿದೆ ಎಂದರೆ ಕಳೆದ 75 ವರ್ಷಗಳ ಅವಧಿಯಲ್ಲಿ ಇಂತಹ ಸಮುದಾಯಗಳಲ್ಲಿ ಮೀಸಲಾತಿಯ ಮೂಲಕ ಸಾಮಾಜಿಕ ನ್ಯಾಯವನ್ನು ಪಡೆದವರ ಸಂಖ್ಯೆ ಕೆಲವೊಮ್ಮೆ ಹತ್ತನ್ನೂ (10) ಮೀರಿರುವುದಿಲ್ಲ. ಒಂದು ಉದಾಹರಣೆ ನೀಡುವುದಾದರೆ ʼಮಾಂಗ್‌ ಗಾರುಡಿʼ ಎಂಬ ಸಮುದಾಯದ ಜನರು ಕಲಬುರಗಿ, ಬೀದರ್‌, ಬಿಜಾಪುರ, ಬೆಳಗಾವಿಗಳಲ್ಲಿ ಮಾತ್ರ ನೆಲೆಸಿದ್ದು, ಇಷ್ಟು ವರ್ಷಗಳಲ್ಲಿ ಈ ಸಮುದಾಯದಿಂದ ಮೀಸಲಾತಿ ಅಡಿ ನೌಕರಿ ಪಡೆದಿರುವುದು ಬಿಜಾಪುರದ ರತನ್‌ ಗೋಸಾವಿ ಎಂಬ ಏಕೈಕ ವ್ಯಕ್ತಿ. ಇವರು ತಲಾಟೆ (ಗ್ರಾಮ ಲೆಕ್ಕಿಗ) ಕೆಲಸವನ್ನು 40 ವರ್ಷಗಳ ಹಿಂದೆ ಪಡೆದಿದ್ದು ಬಿಟ್ಟರೆ ಈ ದಿನದವರೆಗೆ ಮತ್ತೊಬ್ಬ ವ್ಯಕ್ತಿಗೆ ಈ ಸಮುದಾಯದಲ್ಲಿ ಮೀಸಲಾತಿ ಸಿಕ್ಕಿಲ್ಲ. ಹಾಗಂತ ಈ ಸಮುದಾಯದಲ್ಲಿ ಓದಿದವರು ಇಲ್ಲ ಎಂದಲ್ಲ. ಪಿಯುಸಿ, ಬಿಎ, ಬಿ ಎಸ್ಸಿ, ಎಂಎ, ಎಂಟೆಕ್‌, ಇಂಜಿನಿಯರಿಂಗ್‌ ಓದಿದವರೂ ಇದ್ದಾರೆ (ಸಂಖ್ಯೆ ಕಡಿಮೆ ಇದೆ ಎಂಬುದು ಬೇರೆ ಮಾತು). ಆದರೆ ಕಷ್ಟಬಿದ್ದು ಇಷ್ಟೆಲ್ಲಾ ಓದಿಕೊಂಡ ಮೇಲೂ ಅವರಿಗೆ ಸರ್ಕಾರಿ ನೌಕರಿ ಎಂಬುದು ಕನ್ನಡಿಯೊಳಗಿನ ಗಂಟಾಗಿದೆ. ಖಾಸಗಿ ನೌಕರಿ ಕೊಡಲು ಸಂಸ್ಥೆಗಳು ಹಿಂದೇಟು ಹಾಕುತ್ತವೆ. ಯಾಕೆಂದರೆ ಈ ಸಮುದಾಯಗಳ ಮೇಲೆ ಸಮಾಜ ವ್ಯವಸ್ಥೆ ಹೇರಿರುವ ಕಳಂಕಗಳ ಕಾರಣದಿಂದ.  ತಮ್ಮ ಸಮುದಾಯಕ್ಕೆ ಮೀಸಲಾತಿ ಸೌಲಭ್ಯವನ್ನು ನಿರಾಕರಿಸಲಾಗುತ್ತಿರುವ ಬಗ್ಗೆ ತಿಳಿಸುವ ಸ್ನಾತಕೋತ್ತರ ಪದವೀಧರೆ, ಕಲಬುರಗಿಯ ಸಂಧ್ಯಾ ಪೋಪಟ್‌ ಅವರು ಮಾತಾಡುತ್ತಾ, “ನಾನು ಹಾಕಿದ ಮೂರು ಅಪ್ಲಿಕೇಶನ್‌ ವಾಪಾಸು ಬಂದಿವೆ. ತಲಾಟಿ, ಪ್ರೈಮರಿ ಟೀಚರ್‌, ಏಡೆಡ್‌ ಪೋಸ್ಟುಗಳಿಗೆ ಅಪ್ಲೈ ಮಾಡಿದ್ದೆ. ಎಲ್ಲೂ ಕೆಲಸ ಕೊಟ್ಟಿಲ್ಲ. ಹೀಗಾದರೆ ಇಷ್ಟೆಲ್ಲಾ ಓದಿ ಪ್ರಯೋಜನವೇನು? ಎಸ್‌ ಸಿ ಮೀಸಲಾತಿ ಅಥವಾ 371J ಅಡಿಯಲ್ಲಿ ಬರುವ ಮೀಸಲಾತಿ ಎಲ್ಲವುಗಳಿಂದ ಮಾಂಗ್‌ ಗಾರುಡಿ ಅಭ್ಯರ್ಥಿಗಳನ್ನು ದೂರವೇ ಇಡಲಾಗ್ತಿದೆ. ಈ ಬಗ್ಗೆ ಕಮಿಶನರುಗಳು, ಸಚಿವರು ಹಾಜರಿದ್ದ ಸಭೆಯಲ್ಲಿಯೇ ನಾನು ಮೈಕ್‌ ನಲ್ಲಿ ಹೇಳಿದ್ದೆ. ಮೀಸಲಾತಿ ಕೊಡುವುದಿದ್ದರೆ ಎಲ್ಲರಿಗೂ ಕೊಡಿ ನಮಗೂ ಕೊಡಿ, ಇಲ್ಲವಾದರೆ ಈ ಸಮಾನತೆ, ಸ್ವಾತಂತ್ರ್ಯ ಎಲ್ಲಾ ಹಕ್ಕುಗಳನ್ನ ಕಿತ್ತು ಒಕ್ಕಟ್ರಿ (ಬಿಸಾಕಿ), ಶೋಷಣೆ ವಿರುದ್ಧದ ಹಕ್ಕನ್ನ ಕಿತ್ತು ವಕ್ಕಟ್ರಿʼ ಎನ್ನುತ್ತಾರೆ. ಈ ಮಾತುಗಳಲ್ಲಿನ ಅಸಹಾಯಕತೆ, ಹತಾಶೆ, ನೋವು, ಸಂಕಟ ನಮ್ಮ ಸೊ ಕಾಲ್ಡ್‌ ನಾಗರಿಕ ಸಮಾಜಕ್ಕೆ ತಾಕುವುದೇ?  ಇಂತಹ ಪರಿಸ್ಥಿತಿ ಕೇವಲ ಮಾಂಗ್‌ ಗಾರುಡಿಯ ಜನರಿಗೆ ಇಲ್ಲ. ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 40ಕ್ಕೂ ಹೆಚ್ಚಿನ ಸಮುದಾಯಗಳು ಇದೇ ತಾರತಮ್ಯವನ್ನು ನಿತ್ಯವೂ ಅನುಭವಿಸುತ್ತಿವೆ.

ಮಾಧುಸ್ವಾಮಿ ಸಮಿತಿ ಮಾಡಿದ ಅನ್ಯಾಯ

ನ್ಯಾ. ಸದಾಶಿವ ಆಯೋಗದ ವರದಿಯು ನಾಲ್ಕನೆಯ ಗುಂಪಾಗಿ ಈ ಅಲೆಮಾರಿಗಳ 16 ಸಮುದಾಯಗಳನ್ನು ಇಟ್ಟು ಅವರಿಗೆ 1% ಮೀಸಲಾತಿ ನೀಡಿತ್ತು ಎಂದು ಅನಧಿಕೃತ ಮೂಲಗಳು ತಿಳಿಸಿದ್ದವು. ಅಷ್ಟರಮಟ್ಟಿಗೆ ಈ ಸಮುದಾಯಗಳಿಗೆ ಅದು ಒಂದು ಸಮಾಧಾನದ ಅಂಶವೇ. ಆದರೆ, ಸದಾಶಿವ ಆಯೋಗದ ವರದಿಯಲ್ಲಿ ಕಸದ ಬುಟ್ಟಿಗೆ ಹಾಕಿ ಮಾಧುಸ್ವಾಮಿ ಸಮಿತಿಯನ್ನು ನೇಮಿಸಿದ್ದ BJP ಸರ್ಕಾರ ಮಾತ್ರ ಈ ಸಮುದಾಯಗಳಿಗೆ ದೊಡ್ಡ ವಂಚನೆಯನ್ನೇ ಮಾಡಿತೆನ್ನಬಹುದು. ಲಭ್ಯವಿರುವ ಮಾಹಿತಿ ಮತ್ತು ಅಂಕಿ ಅಂಶಗಳ ಪ್ರಕಾರ, ಮಾಧುಸ್ವಾಮಿ ಸಮಿತಿಯು ಒಳಮೀಸಲಾತಿ ಹಂಚುವಾಗ 6,00,000 ಜನರಿಗೆ 1% ಮೀಸಲಾತಿ ಎಂಬ ವಿಚಿತ್ರ ಮಾನದಂಡವನ್ನು ಅನುಸರಿಸಿತ್ತು. ಇದೆಷ್ಟು ಅವೈಜ್ಞಾನಿಕವೆಂದು ಬಿಡಿಸಿ ಹೇಳಬೇಕಿಲ್ಲ. 101 ಸಮುದಾಯಗಳಿಗೆ ಮೀಸಲಾತಿ ಹಂಚುವಾಗ ಎಲ್ಲಾ ಸಮುದಾಯಗಳಿಗೂ ಜನಸಂಖ್ಯೆಯನ್ನೇ ಮಾನದಂಡ ಮಾಡುವುದು ಹಲವಾರು ಸಮುದಾಯಗಳಿಗೆ ಸಾಮಾಜಿಕ ನ್ಯಾಯದ ಶಾಶ್ವತ ವಂಚನೆ ಎಂಬ ಕನಿಷ್ಟ ಪ್ರಜ್ಞೆ ಇವರಿಗೆ ಇರಲಿಲ್ಲ. ಈ 6 ಲಕ್ಷದ ಮಾನದಂಡದಲ್ಲಿ ಮಾಧುಸ್ವಾಮಿ ಸಮಿತಿ, 88 ಅಲೆಮಾರಿ-ಅರೆ ಅಲೆಮಾರಿ ಮತ್ತು ಚಿಕ್ಕಪುಟ್ಟ ಸಮುದಾಯಗಳನ್ನು ಒಂದು ಗುಂಪಾಗಿ ಮಾಡಿ, ಆ ಎಲ್ಲಾ ಜಾತಿಗಳ ಒಟ್ಟು ಜನಸಂಖ್ಯೆ ಕೇವಲ 6 ಲಕ್ಷದ ಒಳಗೆ ಇದೆಯೆಂದೂ ಹೀಗಾಗಿ ಆ 88 ಸಮುದಾಯಗಳಿಗೆ ಕೇವಲ 1% ಮೀಸಲಾತಿ ಸಾಕು ಎಂದೂ ತಿಳಿಸಿತ್ತು. ಹೀಗೆ ಹೇಳುವಾಗ ಈ ಸಮಿತಿ ಜನಸಂಖ್ಯೆಯ ಅಂಕಿಅಂಶಗಳನ್ನು ಎಲ್ಲಿಂದ ಪಡೆದಿತ್ತು ಎಂದು ತಿಳಿಸಲಿಲ್ಲ. ಯಾಕೆಂದರೆ ಕರ್ನಾಟಕದಲ್ಲಿರುವ ಪರಿಶಿಷ್ಟ ಅಲೆಮಾರಿ ಸಮುದಾಯಗಳಲ್ಲಿ ಈವರೆಗೆ ಇತ್ತೀಚಿನ ನಿಖರ ಜನಗಣತಿ ಆಗಿರುವುದು ಕೇವಲ ಎರಡು ಸಮುದಾಯಗಳದ್ದು ಮಾತ್ರ. 2016-2018ರ ನಡುವೆ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ್‌ ಸಂಶೋಧನಾ ಸಂಸ್ಥೆ ನಡೆಸಿದ್ದ ಪರಿಶಿಷ್ಟ ಜಾತಿ/ವರ್ಗದ ಅಲೆಮಾರಿ- ಅರೆ ಅಲೆಮಾರಿ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸಮುದಾಯಗಳ ಕುಲಶಾಸ್ತ್ರೀಯ ಹಾಗೂ ಸಾಮಾಜಿಕ ಅಧ್ಯಯನದ ಭಾಗವಾಗಿ ಗಂಟಿಚೋರ್‌ ಮತ್ತು ಮಾಂಗ್‌ ಗಾರುಡಿ ಸಮುದಾಯಗಳಲ್ಲಿ ಮಾತ್ರ ವೈಜ್ಞಾನಿಕ ನಿಖರ ಜನಗಣತಿ ಹಾಗೂ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆದಿತ್ತು. ಇದರಲ್ಲಿ ಗಂಟಿಚೋರ್‌ ಸಮುದಾಯದ ಸಂಖ್ಯೆ 8000 ಮತ್ತು ಮಾಂಗ್‌ ಗಾರುಡಿ ಸಮುದಾಯದ ಸಂಖ್ಯೆ 6026 ಎಂದು ದಾಖಲಾಗಿತ್ತು. ಇವೆರಡು ಬಿಟ್ಟರೆ ಮಿಕ್ಕ ಯಾವುದೇ ಸಮುದಾಯದ ನಿಖರ ಜನಗಣತಿ ಈ ಕ್ಷಣದವರೆಗೂ ಲಭ್ಯವಿಲ್ಲ. ಕೆಲವು ಸಮುದಾಯಗಳು ಹತ್ತು ಸಾವಿರ, ಕೆಲವು ಐವತ್ತು ಸಾವಿರ ಮತ್ತು ಕೆಲವು ಲಕ್ಷದ ಆಜುಬಾಜಿನಲ್ಲಿವೆ. ಆದರೆ 88 ಸಮುದಾಯಗಳು ಸೇರಿ ಕೇವಲ 6 ಲಕ್ಷ ಎಂದು ಮಾಧುಸ್ವಾಮಿ ವರದಿ ತಿಳಿಸಿದ್ದು ಅತ್ಯಂತ ಉಡಾಫೆಯ ಬೇಜವಾಬ್ದಾರಿತನದ ನಡೆಯಾಗಿತ್ತು.

ಪರಿಶಿಷ್ಟರಲ್ಲಿರುವ ಹೊಲೆಯ, ಮಾದಿಗ, ಲಂಬಾಣಿ, ಬೋವಿ, ಕೊರಮ ಇತ್ಯಾದಿ ಸಮುದಾಯಗಳಲ್ಲಿ ಕಳೆದ 75 ವರ್ಷಗಳಲ್ಲಿ ಮೀಸಲಾತಿಯ ಪ್ರಯೋಜನ ಪಡೆದ ಸಾವಿರಾರು ಯುವಕ ಯುವತಿಯರು ಇದ್ದಾರೆ. ಆದರೆ, ಅಲೆಮಾರಿ-ಅರೆ ಅಲೆಮಾರಿ ಸಮುದಾಯಗಳಲ್ಲಿ ಅಂತವರ ಸಂಖ್ಯೆ ಬೆರಳೆಣಿಕೆ. ಹೀಗಿರುವಾಗ ನಿಜಕ್ಕೂ ಸಮುದಾಯಗಳ ನಡುವೆ ಈಕ್ವಿಟಿ ಸಾಧಿಸಬೇಕೆಂದರೆ ಏನು ಮಾಡಬೇಕು? ನೂರಾರು ವರ್ಷಗಳಿಂದಲೂ ನಾನಾ ಬಗೆಯ ಶೋಷಣೆಗಳನ್ನು, ದಬ್ಬಾಳಿಕೆಗಳನ್ನು ಕೆಲವೊಮ್ಮೆ ತಮ್ಮದೇ ಸಹಸಮುದಾಯಗಳಿಂದಲೇ ಅನುಭವಿಸಿರುವ ಈ ʼಅನಾಥʼ ಸಮುದಾಯಗಳಿಗೂ ಇತರರಿಗೂ ಒಂದೇ ಮಾನದಂಡ ಅನುಸರಿಸುವುದು ನ್ಯಾಯವೆ? ಖಂಡಿತಾ ನ್ಯಾಯವೊದಗಿಸಲು ಸಾಧ್ಯವಿಲ್ಲ.

ಈ ವಿಷಯದಲ್ಲಿ ನ್ಯಾ. ನಾಗಮೋಹನ್‌ ದಾಸ್‌ ಆಯೋಗವಿರಲಿ, ಸರ್ಕಾರವೇ ಇರಲಿ ಹೆಚ್ಚಿನ ಮುತುವರ್ಜಿ ವಹಿಸಬೇಕು. ಉಳಿದವರಿಗೆ ಸ್ವಲ್ಪ ಕಡಿಮೆಯಾದರೂ ಚಿಂತೆಯಿಂದ ಈ ನಿರ್ಗತಿಕ ಸಮುದಾಯಗಳಿಗೆ ನ್ಯಾಯದ ತಕ್ಕಡಿ ತುಸು ಹೆಚ್ಚೇ ತೂಗಬೇಕು. ನೆರೆಯ ತೆಲಂಗಾಣ ಸರ್ಕಾರ ಇಂತಹ ಅತಿಹಿಂದುಳಿದ 18 ಸಮುದಾಯಗಳಿಗೆ 1% ಮೀಸಲಾತಿ ನೀಡಿದೆ. ನಮ್ಮ ಕರ್ನಾಟಕ ಸರ್ಕಾರ ಈ ಅತಿ ಹಿಂದುಳಿದ ಸಮುದಾಯಗಳನ್ನು ಗುಂಪು ಮಾಡುವಾಗ ಯಾವ ಯಾವ ಎಷ್ಟು ಸಮುದಾಯಗಳನ್ನು ಗುಂಪು ಮಾಡುತ್ತದೆ ಮತ್ತು ಅವುಗಳಿಗೆ ಜನಸಂಖ್ಯೆಯ ಮಾನದಂಡವನ್ನು ಮುಂದೆ ಮಾಡದೇ, ಸಾಮಾಜಿಕ- ಆರ್ಥಿಕ- ಶೈಕ್ಷಣಿಕ ಹಿಂದುಳಿದಿರುವಿಕೆ ಮತ್ತು ಈ ಸಮುದಾಯಗಳು ಎದುರಿಸುತ್ತಿರುವ ಕಳಂಕ, ದಬ್ಬಾಳಿಕೆ ಅನ್ಯಾಯಗಳನ್ನೇ  ಪ್ರಮುಖವಾಗಿ ಪರಿಗಣಿಸಿ ಎಷ್ಟು ಮೀಸಲಾತಿ ಹಂಚುತ್ತದೆ ಎಂಬುದು ಬಹಳ ಮುಖ್ಯ. ಈ ವಿಷಯದಲ್ಲಿ ಇಡೀ ರಾಜ್ಯದ ತುಂಬೆಲ್ಲಾ ದಿಕ್ಕಾಪಾಲಾಗಿ ಹರಡಿಕೊಂಡಿರುವ ಈ ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳು ಆಸೆಗಣ್ಣಿನಿಂದ ನೋಡುತ್ತಿವೆ. ಈಗಾಗಲೇ ಆಯೋಗದ ಎದುರು ತಮ್ಮ ಅಹವಾಲುಗಳನ್ನು ಕೊಂಡೊಯ್ದು ಬಿನ್ನವಿಸಿಕೊಂಡಿವೆ.

ಹಿಂದಿನ ಬಿಜೆಪಿ ಸರ್ಕಾರ ಈ ಅತ್ಯಂತ ದುರ್ಬಲವಾಗ ಸಮುದಾಯಗಳಿಗೆ ಮಾಡಿದ ಅನ್ಯಾಯ ಮತ್ತು ವಂಚನೆಯನ್ನು, ದೌರ್ಜನ್ಯವನ್ನು  ಸಿದ್ದರಾಮಯ್ಯ ನೇತೃತ್ವದ ಹಾಲಿ ಕಾಂಗ್ರೆಸ್‌ ಸರ್ಕಾರ ಮಾಡದೇ ಇರಲಿ, ಕೊಡುವ ಕೈಗಳು ಈ ಸಮುದಾಯಗಳಿಗೆ ತುಸು ಉದಾರವಾಗಿ ವರ್ತಿಸಲಿ ಎಂಬ ಆಶಯ ಎಲ್ಲರದ್ದು.

More articles

Latest article