ಒಳಮೀಸಲಾತಿ ವರದಿ ಬಂದ 20 ದಿನಗಳಲ್ಲಿ ಜಾರಿ: ಸಚಿವ ಎಚ್‌.ಸಿ. ಮಹದೇವಪ್ಪ ಭರವಸೆ

Most read

ಬೆಂಗಳೂರು: ಪರಿಶಿಷ್ಟ ಜಾತಿಯಲ್ಲಿ ಒಳ ಮಿಸಲಾತಿ ಕಲ್ಪಿಸುವ ಉದ್ದೇಶದಿಂದ ಸರ್ಕಾರಕ್ಕೆ ಶಿಫಾರಸು ಮಾಡಲು ರಚಿಸಲಾಗಿರುವ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ್‌ ದಾಸ್‌‍ ನೇತೃತ್ವದ ಏಕ ಸದಸ್ಯ ಆಯೋಗ ವರದಿ ಸಲ್ಲಿಸಿದ ಕೇವಲ 20 ದಿನಗಳಲ್ಲಿ ರಾಜ್ಯ ಸರ್ಕಾರವು ಒಳ ಮೀಸಲಾತಿ ಜಾರಿ ಮಾಡಲಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಹೇಳಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ಒಳ ಮೀಸಲಾತಿ ವಿಚಾರದಲ್ಲಿ ಬಿಜೆಪಿ ನಾಯಕರು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಒಳ ಮೀಸಲಾತಿಗಾಗಿ 1992ರಲ್ಲಿ ಕಾಂಗ್ರೆಸ್‌‍ ಸರ್ಕಾರ ರಚಿಸಿದ್ದ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ವರದಿ ಸಲ್ಲಿಸಿತ್ತು. ಆದರೆ, ಬಿಜೆಪಿ ಸರ್ಕಾರ ಆ ವರದಿಯನ್ನು ತಿರಸ್ಕರಿಸಿ, ಮುಗಿದ ಅಧ್ಯಾಯ ಎಂದು ಹೇಳಿತ್ತು. ಒಳ ಮೀಸಲಾತಿ ಆಗ್ರಹಿಸಿ ಹೋರಾಟ ಮಾಡುವುದಾಗಿ ಈಗ ಹೇಳುತ್ತಿರುವ ಗೋವಿಂದ ಕಾರಜೋಳ ಅವರು ರಾಜ್ಯದಲ್ಲಿ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದರು. ಎ. ನಾರಾಯಣ ಸ್ವಾಮಿ ಕೇಂದ್ರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದರು. ಈ ಇಬ್ಬರ ಅಧಿಕಾರಾವಧಿಯಲ್ಲಿಯೇ ಸದಾಶಿವ ಅಯೋಗ ವರದಿ ತಿರಸ್ಕಾರ ಆಗಿತ್ತು ಎನ್ನುವುದನ್ನು ನೆನಪಿಸಿದರು.

ಕಾಂಗ್ರೆಸ್‌‍ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಒಳ ಮೀಸಲಾತಿ ಜಾರಿಗೊಳಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಆ ಬಳಿಕ ಸುಪ್ರೀಂ ಕೋರ್ಟ್‌ ಒಳ ಮೀಸಲಾತಿ ನೀಡಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ಇದೆ ಎಂದು ತೀರ್ಪು ನೀಡಿದೆ. ಅದನ್ನು ಆಧರಿಸಿ ಎಂಫರಿಕಲ್‌ ದತ್ತಾಂಶ ಸಂಗ್ರಹಿಸಲು ಏಕಸದಸ್ಯ ಆಯೋಗ ರಚಿಸಿದ್ದೇವೆ. ಆಯೋಗ ವರದಿ ಸಲ್ಲಿಸಿದ 15ರಿಂದ 20 ದಿನಗಳ ಒಳಗೆ ಒಳ ಮೀಸಲಾತಿ ಜಾರಿ ಮಾಡುತ್ತೇವೆ ಎಂದರು.

ಚಿತ್ರದುರ್ಗದ ಸಮಾವೇಶದಲ್ಲೇ ಒಳ ಮೀಸಲಾತಿ ಜಾರಿ ಮಾಡುವುದಾಗಿ ಕಾಂಗ್ರೆಸ್‌‍ ಘೋಷಣೆ ಮಾಡಿತ್ತು. ಪಕ್ಷ ತನ್ನ ಮಾತಿಗೆ ಬದ್ಧವಾಗಿದೆ. ನಾವು ಒಳ ಮೀಸಲಾತಿ ಜಾರಿ ಮಾಡಲು ಪ್ರಯತ್ನಗಳನ್ನು ಮಡೆಸುತ್ತಿದ್ದರೆ  ರಾಜಕೀಯ ಕಾರಣಗಳಿಗಾಗಿ ಬಿಜೆಪಿಯವರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಮೀಸಲಾತಿ ವಿರುದ್ಧ ಇರುವ ಇವರಿಂದ ನಾವು ನೈತಿಕತೆಯ ಪಾಠ ಕಲಿಯಬೇಕಿಲ್ಲ ಎಂದು ತಿರುಗೇಟು ನೀಡಿದರು.

More articles

Latest article