ಬೆಂಗಳೂರು: ಬೇಡ ಮತ್ತು ಬುಡ್ಗ ಜಂಗಮ ಜಾತಿಯವರ ಮೀಸಲಾತಿಯನ್ನು ಕಿತ್ತುಕೊಳ್ಳುವ ಕೆಲಸ ಮಾಡಬಾರದು ಎಂದು ಕಾಂಗ್ರೆಸ್ ಎಸ್ ಸಿ ವಿಭಾಗದ ಅಧ್ಯಕ್ಷ ಆರ್.ಧರ್ಮಸೇನ ಲಿಂಗಾಯತ ಸ್ವಾಮೀಜಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೇಡ ಮತ್ತು ಬುಡ್ಗ ಜಂಗಮ ಜನಾಂಗಗಳು ಲಿಂಗಾಯತ ಸಮುದಾಯಕ್ಕಿಂತ ಭಿನ್ನವಾಗಿವೆ ಎಂದು ಕೇಂದ್ರ ಸರ್ಕಾರವೇ ವರದಿ ನೀಡಿದೆ. ಕೇವಲ 3,035 ಇರುವ ಜನಸಂಖ್ಯೆಯನ್ನು ಲಕ್ಷಾಂತರ ಎಂದು ತೋರಿಸಿ ಮೀಸಲಾತಿ ಕಸಿಯಲಾಗುತ್ತಿದೆ. ದಲಿತರ ಹಕ್ಕು ಕಸಿಯುವುದನ್ನು ನಾವು ಎಂದಿಗೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನಮಗೆ ಅನ್ಯಾಯವಾದರೆ ಮಲ್ಲಿಕಾರ್ಜುನ ಖರ್ಗೆ ಅವರ ಹಾಗೂ ಮಾಜಿ ಸಚಿವರಾದ ಎಚ್. ಆಂಜನೇಯ ಅವರ ನೇತೃತ್ವದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದೂ ಅವರು ಎಚ್ಚರಿಸಿದ್ದಾರೆ.
ಪರಿಶಿಷ್ಟರು ಕಾಂಗ್ರೆಸ್ ಆಡಳಿತದಲ್ಲಿ ಮುಂಚೂಣಿಯಲ್ಲಿದ್ದಾರೆ. ಅವರಿಗೆ ಅನ್ಯಾಯ ಮಾಡಲು ಬಿಡುವುದಿಲ್ಲ. ಪರಿಶಿಷ್ಟ ಜಾತಿಯವರು ಕಾಂಗ್ರೆಸ್ ಪಕ್ಷದ ಬೆನ್ನೆಲುಬು. ಕೆಪಿಸಿಸಿ ಅಧ್ಯಕ್ಷರ ಬಳಿಯೂ ಈ ಬಗ್ಗೆ ಚರ್ಚೆ ನಡೆಸಲಾಗುವುದು. ನಾವೆಲ್ಲರೂ ಒಂದು ಕುಟುಂಬದಂತೆ ಕೆಲಸ ಮಾಡುತ್ತೇವೆ ಎಂದರು.
ಹೊಲೆಯರು, ಮಾದಿಗರಿಗೆ ಶೇ. 5, 6 ರಷ್ಟು ಮೀಸಲಾತಿಯನ್ನು ಸರ್ಕಾರ ಹೇಗೆ ತೀರ್ಮಾನ ಮಾಡುತ್ತದೆಯೋ ಆ ರೀತಿ ನೀಡಲಾಗುತ್ತದೆ. ಇಲ್ಲಿ ಲಕ್ಷಾಂತರ ಜನರನ್ನು ಶೇ. 1 ಕ್ಕೆ ಸೇರಿಸಲಾಗುತ್ತದೆ. ಆಗ ವಂಚಿತರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.
ಸದಾಶಿವ ಆಯೋಗ ನಡೆಸಿದ ಸಮೀಕ್ಷೆ ವೇಳೆಯಲ್ಲಿ 20,280, 2011 ರಲ್ಲಿ 1,17,164 ಜನಸಂಖ್ಯೆ ಇದೆ ಎಂದು ಹೇಳಲಾಗಿದೆ. ಈ ವಿಚಾರವನ್ನೇ ಮಲ್ಲಿಕಾರ್ಜುನ ಖರ್ಗೆ ಅವರು ಬೇಡ ಜಂಗಮರ ಜನಸಂಖ್ಯೆ 500 ರಿಂದ 5 ಲಕ್ಷಕ್ಕೆ ಏಕೆ ಏರಿಕೆಯಾಗಿದೆ ಎಂದು ಪ್ರಶ್ನಿಸಿದ್ದಾರೆ.
ಈ ವಿಚಾರವಾಗಿ ಒಳಮೀಸಲಾತಿ ಆಯೋಗದ ಅಧ್ಯಕ್ಷರಾದ ನಾಗಮೋಹನ್ ದಾಸ್ ಅವರನ್ನು ಭೇಟಿ ಮಾಡಿ ಕಾಲಂ ನಂಬರ್ 19.1 ರಲ್ಲಿ ಇದ್ದಂತಹ ಬೇಡ ಜಂಗಮ, ಬುಡ್ಗ ಜಂಗಮ ಹೆಸರನ್ನು ಬಳಸಿಕೊಂಡು ಬೇರೆಯವರು ಒಳಗೆ ಬರುವಂತಹ ಕೆಲಸ ಮಾಡುತ್ತಿದ್ದಾರೆ ಎಂದರು.
ನಿಜವಾಗಿಯೂ ಶೋಷಿತರು ಇದ್ದರೆ ಅವರನ್ನು ಒಳಗೆ ಸೇರಿಸಿಕೊಳ್ಳುವುದಕ್ಕೆ ನಮಗೆ ಯಾವುದೇ ಅಕ್ಷೇಪವಿಲ್ಲ. 1909 ರಲ್ಲಿ ಈ ಸಮುದಾಯ ಅಲೆಮಾರಿ ಜನಾಂಗಕ್ಕೆ ಸೇರುತ್ತದೆ. ಧಾರ್ಮಿಕ ಆಚರಣೆ ವಿಚಾರಕ್ಕೆ ಬಂದರೆ ಇವರು ಶಕುನಗಳನ್ನು ನುಡಿಯುವವರು, ಭವಿಷ್ಯ ಹೇಳುವ ಕಾಯಕ ಮಾಡುತ್ತಿದ್ದವರು. ಕೆಲವು ಸ್ವಾಮೀಜಿಗಳು ನಾವು ಮೀಸಲಾತಿಯನ್ನು ಹೋರಾಟ ಮಾಡಿ ಪಡೆಯುತ್ತೇವೆ ಎಂದು ಹೇಳಿದ್ದಾರೆ. ಇವರು ಕೇಂದ್ರ ಸರ್ಕಾರ ಮಾಡಿರುವ ನಿಯಮಗಳ ಅಡಿ ಬಂದರೆ ತೊಂದರೆಯಿಲ್ಲ. ಅವರು ಇದರ ಅಡಿ ಬರದೇ ಮೀಸಲಾತಿ ಪಡೆಯುತ್ತೇವೆ ಎಂದರೆ ರಾಜ್ಯದಾದ್ಯಂತ ಜನರನ್ನು ಎಚ್ಚರಗೊಳಿಸುವ ಕೆಲಸ ಮಾಡುತ್ತೇವೆ ಎಂದು ಧರ್ಮಸೇನ ಹೇಳಿದರು..
ಮಾನವಶಾಸ್ತ್ರೀಯ ಅಧ್ಯಯನದ ಪ್ರಕಾರ ಕರ್ನಾಟಕದ ಜಂಗಮ ಜಾತಿಗಿಂತ ಬೇಡ, ಬುಡ್ಗ ಜಂಗಮ ಜಾತಿಗಳು ಭಿನ್ನ. 1961 ರಲ್ಲಿ ಜಂಗಮ ಜಾತಿಗಳ ಜನಸಂಖ್ಯೆ 5,141 ಎಂದು ತೋರಿಸಲಾಗಿದೆ. 1981 ರಲ್ಲಿ 3,031 ಕ್ಕೆ ಇಳಿಸಿ ತೋರಿಸಲಾಗಿದೆ. ಅದಕ್ಕೆ ಈಗಲೇ ಈ ಗೊಂದಲದ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಇದರ ಬಗ್ಗೆ ಈಗಾಗಲೇ ನಾವು ತಕರಾರನ್ನು ಸಹ ಸಲ್ಲಿಕೆ ಮಾಡಿದ್ದೇವೆ ಎಂದು ತಿಳಿಸಿದರು.
ಈಗಾಗಲೇ ಅನೇಕ ಸರ್ಕಾರಗಳು ಎಲ್ಲರಿಗೂ ಮೀಸಲಾತಿ ಸೌಲಭ್ಯ ಸಿಗಬೇಕು ಎಂದು ಹೊರಟಿದ್ದಾರೆ. ಇಲ್ಲಿ ನಿಜವಾದ ಅಸ್ಪೃಶ್ಯರು ಎಂದರೆ ಹೊಲೆಯ ಮತ್ತು ಮಾದಿಗ ಜನಾಂಗದವರು ಮಾತ್ರ. ಬುಡ್ಗ ಜಂಗಮರು ಹಂದಿ ಮಾಂಸ ತಿನ್ನುತ್ತಾರೆ. ಆದರೆ ಬೇಡ ಜಂಗಮರು ಸಸ್ಯಹಾರಿಗಳು. ಇವರು ದನದ ಮಾಂಸ ತಿನ್ನುವುದಿಲ್ಲ ಎಂದು ಅಂದೇ ಉಲ್ಲೇಖ ಮಾಡಲಾಗಿದೆ. ಮಾಲಾ ಜಂಗಮ ಎನ್ನುವವರನ್ನು ದೀಕ್ಷೆ ನೀಡಿ ಗುರುಸ್ಥಾನ ನೀಡಲಾಗುತ್ತದೆ. ಬೇಡ ಜಂಗಮರು ಹೊಲೆಯ ಮತ್ತು ಮಾದಿಗ ಸಮುದಾಯದ ಧಾರ್ಮಿಕ ಆಚರಣೆ ವೇಳೆ ನೇತೃತ್ವ ವಹಿಸಿಕೊಳ್ಳುತ್ತಾರೆ. ಇವರ ಮನೆಗಳಲ್ಲಿ ಮಾತ್ರ ಬಿಕ್ಷೆ ಬೇಡುತ್ತಾರೆ. ಇದನ್ನು ನಾವು ಹೇಳುತ್ತಿಲ್ಲ ಬದಲಾಗಿ ಕುಲಶಾಸ್ತ್ರೀಯ ಅಧ್ಯಯನಗಳು ದೃಢಪಡಿಸಿವೆ ಎಂದು ವಿವರಿಸಿದರು.
ಬೇಡ, ಬುಡ್ಗ ಜಂಗಮ ಸಮುದಾಯದವರು ತಲಾತಲಾಂತರದಿಂದ ಊರುಗಳಲ್ಲಿ ವಾಸ ಮಾಡುವವರಲ್ಲ. ಆಂಧ್ರ ಗಡಿ ಭಾಗದಲ್ಲಿ, ಬೀದರ್, ಗುಲ್ಬಾರ್ಗ ಭಾಗದಲ್ಲಿ ಹೆಚ್ಚು ಕಂಡು ಬರುತ್ತಾರೆ. ಇಡೀ ಸಮಾಜದಲ್ಲಿ ಇನ್ನೂ ಯಾವುದೇ ಸೌಲಭ್ಯಗಳು ಸಿಗದಂತಹ ಸಮಾಜಗಳು ಇವೆ. ಇಂತಹ ಗೊಂದಲಗಳು ಉಂಟಾದರೆ ಮತ್ತೆ ನ್ಯಾಯಾಲಯಕ್ಕೆ ಹೋದರೆ ಇನ್ನೂ ತಡವಾಗುತ್ತದೆ. 101 ಜಾತಿಗಳಿಗೆ ಇದರಿಂದ ತೊಂದರೆಯಾಗುತ್ತದೆ. ಈಗಾಗಲೇ ಸರ್ಕಾರ ನೇಮಕಾತಿ, ಪ್ರಮೋಷನ್ ಗಳನ್ನು ನಿಲ್ಲಿಸಿದೆ. ಸಮೀಕ್ಷೆ ಒಂದು ತಿಂಗಳಲ್ಲಿ ಮುಗಿಯಬೇಕು ಎಂದಿತ್ತು ಕಾರಣಾಂತರಗಳಿಂದ ದಿನಾಂಕ ವಿಸ್ತಾರಣೆಯಾಗುತ್ತಲೇ ಇದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ನಾಯಕರನ್ನು ಕೇವಲ ಟೀಕೆ ಮಾಡುವುದಕ್ಕೆ ವಿಧಾನ ಪರಿಷತ್ತಿನ ಸದಸ್ಯ ಸ್ಥಾನವನ್ನು ಪಡೆದ ದೊಡ್ಡ ಗಿರಾಕಿ ಇವರು. ಇವರಿಗೆ ನಾಯಿ ಎನ್ನುವ ಪದದ ಮೇಲೆ ಸಾಕಷ್ಟು ಒಲವಿದೆ ಅನ್ನಿಸುತ್ತದೆ. ಅವರು ಆರ್ ಎಸ್ ಎಸ್ ನ ಬುಲ್‌ಡಾಗ್ ಇರಬಹುದು. ಸಂಘ ಪರಿವಾರದವರು ಅವರನ್ನು ಬುಲ್ ಡಾಗ್ ರೀತಿ ಬೆಳೆಸಿದ್ದಾರಾ ಎಂದು ಹೇಳಬೇಕು ಎಂದು ಪಕ್ಷದ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷರಾದ ರಮೇಶ್ ಬಾಬು ಹೇಳಿದ್ದಾರೆ. ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಹೆಸರು ಹೇಳದೆ ಟೀಕಿಸಿದರು.
ಯಾವುದೇ ಪಕ್ಷವಾದರೂ ಎಲ್ಲೆಯನ್ನು ಮೀರಿ ಭಾಷೆಯನ್ನು ಬಳಸಿ ಟೀಕೆ ಮಾಡುವ ಸಂಪ್ರದಾಯ ನಮ್ಮ ರಾಜ್ಯದಲ್ಲಿ ಇಲ್ಲ. ಆದರೆ ಕಳೆದ ಐದಾರು ವರ್ಷಗಳಿಂದ ಬಿಜೆಪಿಯಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಳವಾಗಿದೆ. ಟೀಕೆ ಮಾಡಿದರೆ ರಾತ್ರೋರಾತ್ರಿ ನಾಯಕರಾಗಬಹುದು ಎಂದು ತರಬೇತಿ ಪಡೆಯುತ್ತಿದ್ದಾರೆ. ಈ ತರಬೇತಿಯನ್ನು ಕೇಶವ ಕೃಪಾ, ಬೈಠಕ್ ಹೀಗೆ ಎಲ್ಲಿ ನೀಡಲಾಗುತ್ತಿದೆ ಎಂದು ಸಂಘ ಪರಿವಾರದವರೇ ಹೇಳಬೇಕು ಎಂದು ಕುಟುಕಿದರು.
ನಮಸ್ತೇ ಸದಾ ವತ್ಸಲೇ ಮಾತೃಭೂಮಿ ಎಂದು ರಾಜಕೀಯ ಮಾಡುತ್ತಿದ್ದವರು ಈಗ ಸದಾ ಬೈಯುವುದೇ ರಾಜಕೀಯ ಎಂದುಕೊಂಡಿದ್ದಾರೆ. ಇದಕ್ಕೆ ಛಲವಾದಿ ನಾರಾಯಣಸ್ವಾಮಿ ಅವರೇ ಉದಾಹರಣೆ. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ದುರ್ಬಲ ವಿರೋಧ ಪಕ್ಷ ಎಂದರೆ ಅದು ಬಿಜೆಪಿ. ಎರಡೂ ಮನೆಗಳಲ್ಲಿ ಅತ್ಯಂತ ಬೌದ್ದಿಕ ಹೀನರಾಗಿ ಕೆಲಸ ಮಾಡುತ್ತಿದ್ದಾರೆ.
ಆರ್.ಅಶೋಕ್ ಅವರಿಗೆ ಪ್ರೆಸ್ ಮೀಟ್ ಮಾಡುವುದು ಬಿಟ್ಟು ಬೇರೆ ಏನೂ ಗೊತ್ತಿಲ್ಲ ಜೊತೆಗೆ ಪದ ಬಳಕೆಯೂ ತಿಳಿದಿಲ್ಲ. ದಿನಬೆಳಗಾದರೆ ಆಡಳಿತ ಪಕ್ಷವನ್ನು ಬೈಯ್ಯುವುದು, ಮಾಧ್ಯಮಗೋಷ್ಠಿ ಮಾಡುವುದು ಇಷ್ಟಕ್ಕೆ ನಾಯಕ ಎಂದು ಕೊಂಡಿದ್ದಾರೆ. ಈ ಛಲವಾದಿ ನಾರಾಯಣಸ್ವಾಮಿ ಅವರು ಜನತಾ ಪರಿವಾರದಿಂದ ರಾಜಕೀಯ ಪ್ರಾರಂಭ ಮಾಡಿ ಜೀವರಾಜ ಆಳ್ವ ಅವರಿಂದ ರಾಜಕೀಯ ನೆಲೆ ಪಡೆದು. ಸೈಕಲ್ ನಾರಾಯಣ ಸ್ವಾಮಿ ಎಂದು ಪ್ರಸಿದ್ದರಾಗಿ ಬಂಗಾರಪ್ಪ, ಮಲ್ಲಿಕಾರ್ಜುನ ಖರ್ಗೆ ಅವರ ಬಳಿ ರಾಜಕೀಯ ಆಶ್ರಯ ಪಡೆದು, ಕಾಂಗ್ರೆಸ್ ಪಕ್ಷದಿಂದ ಎಲ್ಲಾ ಅನುಕೂಲ ಪಡೆದು ಈಗ ಪಕ್ಷ ಹಾಗೂ ನಾಯಕರನ್ನು ಟೀಕೆ ಮಾಡುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
ಸಂಘ ಪರಿವಾರದವರು ವಾರಕ್ಕೊಮ್ಮೆ ಬೈಠಕ್ ಮಾಡಿ ಖರ್ಗೆ ಕುಟುಂಬದ ವಿರುದ್ದ, ಕಾಂಗ್ರೆಸ್ ವಿರುದ್ದ ಯಾವ ಪದ ಬಳಕೆ ಮಾಡಬೇಕು ಎಂದು ತರಬೇತಿ ನೀಡುತ್ತಿದ್ದಾರೆ. ಚಿತ್ತಾಪುರ ಸೇರಿದಂತೆ ಇತರೆಡೆ ಅವರು ಬಳಕೆ ಮಾಡಿರುವ ಪದವನ್ನು ಇಡೀ ರಾಜ್ಯ ನೋಡುತ್ತಿದೆ ಎಂದರು.
ಬಿಜೆಪಿಯಿಂದ ಉಚ್ಚಾಟಿತರಾದಂತಹ ಈಶ್ವರಪ್ಪ, ಯತ್ನಾಳ್ ಅವರು, ರಾಜಕೀಯ ನಿರುದ್ಯೋಗಿ ಪ್ರತಾಪ್ ಸಿಂಹ ಅವರು, ಅಶೋಕ್, ಶಾಸಕ ರಘು ಹೀಗೆ ಇಂತಹವರದ್ದೇ ಒಂದು ತಂಡವಿದೆ. ಈ ತಂಡದ ನಾಯಕ ನಾರಾಯಣಸ್ವಾಮಿ. ಇವರು ಆರ್ ಎಸ್ ಎಸ್ ನ ಚಡ್ಡಿ ಹೊತ್ತಂತಹ ವೀರ. ಸ್ವಾಭಿಮಾನ ಅಡವಿಟ್ಟಿದ್ದಾರೆ ಎಂದರು.