ಒಳಮೀಸಲಾತಿ: ವಾರದೊಳಗೆ ಮಧ್ಯಂತರ ವರದಿ ಬರಲಿದೆ: ಗೃಹ ಸಚಿವ ಡಾ.ಜಿ. ಪರಮೇಶ್ವರ

Most read

ಬೆಂಗಳೂರು: ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಯು ಒಂದು ವಾರದೊಳಗೆ ಒಳ ಮೀಸಲಾತಿಯ ಮಧ್ಯಂತರ ವರದಿ ಸಲ್ಲಿಸುವುದಾಗಿ ತಿಳಿಸಿದ್ದು, ತದನಂತರ ಮುಖ್ಯಮಂತ್ರಿಗಳು ಚರ್ಚಿಸಿ ಶೀಘ್ರದಲ್ಲಿ ಜಾರಿಗೆ ಕ್ರಮ ಕೈಗೊಳ್ಳಲಿದ್ದಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಅವರು ತಿಳಿಸಿದ್ದಾರೆ.

ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸುವ ಕುರಿತಂತೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಜಾರಿಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ನಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲೂ ಇದನ್ನು ಹೇಳಿದ್ದೇವೆ. ವೈಜ್ಞಾನಿಕ ದತ್ತಾಂಶದಿಂದ ನಿರ್ಧಿಷ್ಟವಾದ ಅಭಿಪ್ರಾಯ ಬರುತ್ತದೆ ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಸಭೆಯಲ್ಲಿ ತಿಳಿಸಿದ್ದಾರೆ ಎಂದರು.

ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ.ಮಹದೇವಪ್ಪ ಅವರು ಮಾತನಾಡಿ, ಒಳ ಮೀಸಲಾತಿ ಸಂಬಂಧ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಹಿರಿಯ ಸಚಿವರ ಜೊತೆ ಸುಧೀರ್ಘ ಸಭೆ ನಡೆಸಲಾಗಿದೆ. ಒಳ‌ಮೀಸಲಾತಿ ಜಾರಿಗಾಗಿ ಈವರೆಗೂ ಆಗಿರುವ ಪ್ರಗತಿಯ ಮಾಹಿತಿಯನ್ನು ನಾಗ ಮೋಹನ್ ದಾಸ್ ಸಮಿತಿ ನೀಡಿದೆ. ಆದಷ್ಟು ಬೇಗ ಒಳಮೀಸಲಾತಿ ಜಾರಿಗೆ ಪ್ರಸ್ತಾಪ ಇಟ್ಟಿದ್ದಾರೆ ಎಂದು ತಿಳಿಸಿದರು.

ದತ್ತಾಂಶ ಆಧಾರದ ಮೇಲೆ ಸುದೀರ್ಘ ಚರ್ಚೆ ಮಾಡಿದ್ದೇವೆ ನಾಗಮೋಹನ್ ದಾಸ್ ಅವರು ವಾರದೊಳಗೆ ಮಧ್ಯಂತರ ವರದಿ ನೀಡುತ್ತಾರೆ. ಆ ವರದಿ ಮೇಲೆ ಒಳಮೀಸಲಾತಿ ಜಾರಿ ಕುರಿತು ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದರು. ವೈಜ್ಞಾನಿಕ ದತ್ತಾಂಶ ಸೇರಿದಂತೆ ಎಲ್ಲ ವಿಷಯಗಳನ್ನು ಚರ್ಚೆ ಮಾಡಿ, ನಮ್ಮ ಗಮನಕ್ಕೆ ತಂದಿದ್ದಾರೆ.‌ ಒಳ ಮೀಸಲಾತಿ ಜಾರಿ ಮಾಡಬೇಕು ಎಂಬುದು ನಮ್ಮ ಸರ್ಕಾರದ ಬದ್ಧತೆ. ಯಾವುದೇ ಸಮುದಾಯವೂ ಇಷ್ಟೇ ಪರ್ಸೇಂಟ್ ಮೀಸಲಾತಿ ಕೊಡುವಂತೆ ಬೇಡಿಕೆ ಇಟ್ಟಿಲ್ಲ. ಬಹುತೇಕ ಎಲ್ಲಾ ಇಲಾಖೆಗಳು ದತ್ತಾಂಶ ನೀಡಿವೆ. ಸುಪ್ರೀಂಕೋರ್ಟ್ ಮಾರ್ಗಸೂಚಿ ಪ್ರಕಾರ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಒಳ ಮೀಸಲಾತಿ ಜಾರಿ ಆಗುವವರೆಗೂ ಬ್ಯಾಕ್‌ಲಾಗ್ ಹುದ್ದೆ, ಮುಂಬಡ್ತಿ, ನೇಮಕಾತಿ ಯಾವುದನ್ನೂ ಮಾಡುವುದಿಲ್ಲ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಸಚಿವರಾದ ಕೆ.ಎಚ್‌.ಮುನಿಯಪ್ಪ, ಆರ್.ಬಿ.ತಿಮ್ಮಾಪುರ್, ಶಿವರಾಜ್ ತಂಗಡಗಿ ಮತ್ತು ಇತರರು ಇದ್ದರು.

More articles

Latest article