ಕಳೆದ ಮೂರು ದಶಕಗಳ ಒಳಮೀಸಲಾತಿ ಹೋರಾಟ ಇಂದು ನಿರ್ಣಾಯಕ ಹಂತಕ್ಕೆ ತಲುಪಿದೆ. ಈ ಮೂರು ದಶಕಗಳ ಅವಧಿಯಲ್ಲಿ ಕರ್ನಾಟಕದಲ್ಲಿ ಆಳಿದ ಕಾಂಗ್ರೆಸ್ ಪಕ್ಷವಾಗಲೀ, ಬಿಜೆಪಿ ಜೆಡಿಎಸ್ ಆಗಲೀ ತಾವಾಗಿ ಒಳಮೀಸಲಾತಿಯನ್ನು ಜಾರಿಗೊಳಿಸಲು ಎಂದೂ ಮನಸ್ಸು ಮಾಡಲೇ ಇಲ್ಲ. ಆದರೆ, ಕಳೆದ ಆಗಸ್ಟ್ 1ರಂದು ʼಸುಪ್ರೀಂ ಕೋರ್ಟ್ʼ ನೀಡಿದ ಐತಿಹಾಸಿಕ ತೀರ್ಪು ಸರ್ಕಾರಗಳಿಗೆ ಒಳಮೀಸಲಾತಿ ಜಾರಿಗೊಳಿಸುವ ಅನಿವಾರ್ಯತೆ ಸೃಷ್ಟಿಸಿದೆ. ದಲಿತ ಸಮುದಾಯಗಳೂ ಈ ಸಂದರ್ಭದಲ್ಲಿ ನಿರಂತರವಾಗಿ ಒತ್ತಡ ಹಾಕುತ್ತಿವೆ. ಪರಿಣಾಮವಾಗಿ ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನ್ಯಾ. ನಾಗಮೋಹನ್ ದಾಸ್ ಏಕವ್ಯಕ್ತಿ ಆಯೋಗವನ್ನು ರಚಿಸಿ, ಅದರ ವರದಿಗಾಗಿ ಕಾದು ಕುಳಿತಿದೆ.
ಹಾಗೆ ನೋಡಿದರೆ, ಮಾನ್ಯ ಸಿದ್ದರಾಮಯ್ಯ ಅವರಿಗೆ ಒಳಮೀಸಲಾತಿ ಜಾರಿಗೊಳಿಸಲು ಇದು ಎರಡನೆಯ ಮತ್ತು ಕಡೆಯ ಅವಕಾಶ ಎಂದು ಹೇಳಬಹುದು. ಈ ಹಿಂದೆ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ಅವರು ಒಳಮೀಸಲಾತಿ ಜಾರಿಗೊಳಿಸುವ ಸುವರ್ಣಾವಕಾಶವಿತ್ತು. ಹೇಗೂ ನ್ಯಾ. ಸದಾಶಿವ ಅವರು ತಮ್ಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರಿಂದ ಅದನ್ನು ಮುಕ್ತ ಚರ್ಚೆಗೆ ಒಳಪಡಿಸಿ, ಸಾರ್ವಜನಿಕ ಅಭಿಪ್ರಾಯಗಳನ್ನು ಕ್ರೂಢೀಕರಿಸಿ ಅಂದೇ ಒಳಮೀಸಲಾತಿ ಜಾರಿಗೊಳಿಸಿದ್ದರೆ ಕರ್ನಾಟಕದ ದಲಿತ ಸಮುದಾಯಗಳ ಹೃದಯದಲ್ಲಿ ಸಿದ್ದರಾಮಯ್ಯ ಶಾಶ್ವತ ಸ್ಥಾನ ಪಡೆಯುತ್ತಿದ್ದರು. ಆದರೆ ಅವರು ಅಳುಕಿದರು. ಬಹುಶಃ ಈ ವಿಷಯದಲ್ಲಿ ಅವರ ಮೇಲೆ ಬಂದ ಒತ್ತಡಗಳೋ, ಒಳಮೀಸಲಾತಿಗೆ ವಿರುದ್ಧವಾಗಿದ್ದವರ ಒಳಪಿತೂರಿಗಳೋ ಗೊತ್ತಿಲ್ಲ, ಆದರೆ ನೊಂದ ಸಮುದಾಯಗಳನ್ನು ಆಗ ಸಿದ್ದರಾಮಯ್ಯ ನಿರಾಸೆಗೊಳಿಸಿದ್ದಂತೂ ವಾಸ್ತವ. ಲಿಂಗಾಯತರಿಗೆ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಒಂದು ಹೆಜ್ಜೆ ಮುಂದಿಟ್ಟು ಚಾರಿತ್ರಿಕ ನಿರ್ಣಯ ತೆಗೆದುಕೊಂಡಿದ್ದ ಸಿದ್ದರಾಮಯ್ಯನವರು ಒಳಮೀಸಲಾತಿಗಾಗಿ ಅಂತಹುದೇ ನಿರ್ಣಯ ತೆಗೆದುಕೊಳ್ಳದೇ ಹೋದದ್ದು ವಿಪರ್ಯಾಸ.
ಇದೀಗ, ಒಳಮೀಸಲಾತಿಗಾಗಿ ಮೂರು ದಶಕಗಳಿಂದ ಕಾಯುತ್ತಾ, ಬೇಯುತ್ತಾ, ಕುಳಿತ ಸಮುದಾಯಗಳು ಮತ್ತೆ ಆಸೆಗಣ್ಣಿನಿಂದ ನೋಡುತ್ತಿವೆ. ಆದರೆ, ನೆರೆಯ ತೆಲಂಗಾಣದಲ್ಲಿ ಅಲ್ಲಿನ ಸಿಎಂ ರೇವಂತ್ ರೆಡ್ಡಿ ತೋರಿದ ಉತ್ಸಾಹವನ್ನೂ ಕರ್ನಾಟಕ ಸರ್ಕಾರ ತೋರುತ್ತಿಲ್ಲವಲ್ಲ ಎಂಬ ಮಾತುಗಳು ಕೇಳಿಬರತೊಡಗಿವೆ.
ಸಿದ್ದರಾಮಯ್ಯ ಸರ್ಕಾರ, ಕ್ಯಾಬಿನೆಟ್ ಸಭೆಯಲ್ಲಿ ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೊಳಿಸುವವರೆಗೂ ಯಾವುದೇ ಹೊಸ ನೇಮಕಾತಿ ನಡೆಸುವುದಿಲ್ಲ ಎಂಬ ತೀರ್ಮಾನ ತೆಗೆದುಕೊಂಡಿದ್ದು ಬಹಳ ಮಹತ್ವದ ಸಂಗತಿ. ಸಧ್ಯ ದಲಿತ ಸಮುದಾಯಗಳಿಗೆ ಇರುವ ಭರವಸೆ ಇದೊಂದೇ. ಈ ಮಾತಿಗೆ ಸರ್ಕಾರ ಬದ್ಧವಾಗಿದ್ದರೆ ಖಂಡಿತಾ ಒಳಮೀಸಲಾತಿ ಜಾರಿಯಾಗುತ್ತದೆ ಎಂಬ ಆಸೆಯಲ್ಲಿ ಸಮುದಾಯಗಳಿವೆ. ಆದರೆ, ಜಾರಿಯ ಪ್ರಕ್ರಿಯೆ ವಿಳಂಬಗೊಳ್ಳುತ್ತಿರುವುದು ಆತಂಕಕ್ಕೆ, ಅಸಮಧಾನಕ್ಕೆ ಕಾರಣವಾಗಿದೆ. ಅದಾಗಲೇ 40% ಕಮಿಷನ್ ಕುರಿತು ತನಿಖೆಯಲ್ಲಿ ತೊಡಗಿದ್ದ ನ್ಯಾ. ನಾಗಮೋಹನ್ ದಾಸ್ ಅವರನ್ನೇ ಒಳಮೀಸಲಾತಿ ಕುರಿತ ಆಯೋಗಕ್ಕೂ ನೇಮಿಸಲಾಯಿತು. ಅವರಿಗೆ ಈ ಕೆಲಸಕ್ಕಾಗಿ ಕಚೇರಿ ಒದಗಿಸುವುದರಲ್ಲಿಯೂ, ಟರ್ಮ್ಸ್ ಆಫ್ ರೆಫರೆನ್ಸ್ ನೀಡುವುದು ವಿಳಂಬವಾಗಿದ್ದು ಸರ್ಕಾರದ ಮಂದಗತಿಯನ್ನು ತೋರಿತು.
ಇದಕ್ಕೆ ಭಿನ್ನವಾಗಿ, ತೆಲಂಗಾಣ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಕಳೆದ ನವೆಂಬರ್ ತಿಂಗಳಲ್ಲಿ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಶಮೀಮ್ ಅಖ್ತರ್ ನೇತೃತ್ವದಲ್ಲಿ ಒಂದು ಏಕವ್ಯಕ್ತಿ ಆಯೋಗ ರಚಿಸಿದರು. ಅದು ನಿಗದಿತ ಮೂರು ತಿಂಗಳಲ್ಲಿ ತನ್ನ ವರದಿ ನೀಡಿತು. ಈ ಅವಧಿಯಲ್ಲಿ ಒಳಮೀಸಲಾತಿ ಜಾರಿಯ ಮೇಲ್ವಿಚಾರಣೆಗಾಗಿ ಒಂದು ಕ್ಯಾಬಿನೆಟ್ ಉಪಸಮಿತಿಯನ್ನೂ ರಚಿಸಲಾಗಿತ್ತು. ಆಯೋಗ ತನ್ನ ವರದಿ ನೀಡುತ್ತಿದ್ದಂತೆಯೇ ತಡ ಮಾಡದೇ, ತೆಲಂಗಾಣ ಸರ್ಕಾರ Telangana Scheduled Castes (Rationalization of Reservations) Bill, 2025ನ್ನು ಉಭಯ ಸದನಗಳಲ್ಲಿ ಮಂಡಿಸಿ 18, ಮಾರ್ಚ್ 2025ರಂದು ಸರ್ವಾನುಮತದೀಂದ ಅಂಗೀಕರಿಸಿತು. ಈ ಕಾಯ್ದೆಯಂತೆ ಕೆಳಗಿನಂತೆ ಮೀಸಲಾತಿ ವರ್ಗೀಕರಿಸಿತು:
- ಗುಂಪು 1: ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ 15 ಉಪ-ಜಾತಿಗಳಿಗೆ 1% ಮೀಸಲಾತಿ.
- ಗುಂಪು 2: ಇದುವರೆಗೆ ಹೆಚ್ಚಿನ ಮೀಸಲಾತಿ ಪಡೆಯದ 18 ಉಪ-ಜಾತಿಗಳಿಗೆ (ಮಾದಿಗ ಸೇರಿದಂತೆ) 9% ಮೀಸಲಾತಿ.
- ಗುಂಪು 3: ಈವರೆಗೆ ಹೆಚ್ಚು ಮೀಸಲಾತಿ ಅನುಕೂಲತೆ ಪಡೆದ 26 ಉಪ-ಜಾತಿಗಳಿಗೆ (ಮಾಲ ಸೇರಿದಂತೆ) 5% ಮೀಸಲಾತಿ.
ಇದೇ ಸಂದರ್ಭದಲ್ಲಿ ನ್ಯಾ. ಶಮೀಮ್ ಅಖ್ತರ್ ಆಯೋಗವು ಒಳಮೀಸಲಾತಿಯಲ್ಲಿ ಕ್ರೀಮಿಲೇಯರ್ (ಕೆನೆಪದರ) ಅನುಸರಿಸುವ ಶಿಫಾರಸ್ಸು ನೀಡಿದ್ದರೂ ತೆಲಂಗಾಣ ಸರ್ಕಾರ ಅಂತಹ ಯಡವಟ್ಟಿಗೆ ಕೈ ಹಾಕದೇ ಒಳಮೀಸಲಾತಿ ಜಾರಿಗೊಳಿಸಿರುವುದು ಸಕಾರಾತ್ಮಕ ನಡೆಯಾಗಿದೆ. ಈ ಮೂಲಕ ತೆಲಂಗಾಣ ಸರ್ಕಾರ ಇಡೀ ದೇಶದಲ್ಲೇ ಮಾದರಿ ಕ್ರಮ ಅನುಸರಿಸಿದೆ. ಇದೇ ಕ್ರೆಡಿಟ್ಟನ್ನು ಕರ್ನಾಟಕ ಸರ್ಕಾರ ಪಡೆಯುವ ಅವಕಾಶವಿದ್ದರೂ ಕೈಚೆಲ್ಲಿದ್ದು ವಿಪರ್ಯಾಸ.
ಕರ್ನಾಟಕದ ಸರ್ಕಾರದ ವಿಳಂಬ ನೀತಿ ಯಾಕೆ?
ಮುಖ್ಯವಾಗಿ ಕರ್ನಾಟಕದಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ತಾವಾಗಿ ಈ ವಿಷಯದಲ್ಲಿ ಹೆಜ್ಜೆ ಮುಂದಿಡುವುದಕ್ಕಿಂತಲೂ ತಮ್ಮ ಸಚಿವ ಸಂಪುಟದ ಇತರ ಪರಿಶಿಷ್ಟ ಜಾತಿಯ ಸಚಿವರುಗಳ ಮರ್ಜಿಗೇ ಬಿಟ್ಟಂತೆ ತೋರುತ್ತದೆ. ಸಮಾಜ ಕಲ್ಯಾಣ ಇಲಾಖೆಯ ಮಂತ್ರಿ ಮಹದೇವಪ್ಪ ಆಗಲೀ, ಗೃಹ ಸಚಿವ ಪರಮೇಶ್ವರ್ ಆಗಲೀ ಈ ವಿಷಯದಲ್ಲಿ ಅಳೆದೂ ತೂಗುವುದರಲ್ಲೇ ಎರಡು ವರ್ಷಗಳಿಂದ ಕಾಲಹರಣ ಮಾಡುತ್ತಿರುವುದು ಸ್ಪಷ್ಟವಾಗಿದೆ. ಇನ್ನು ಈ ವಿಷಯದಲ್ಲಿ ಎಲ್ಲರಿಗಿಂತ ಜೋರಾಗಿ ಗುಡುಗಬೇಕಿದ್ದ ಕೆ ಎಚ್ ಮುನಿಯಪ್ಪ ಅವರ ಸದ್ದು ಕೇಳಿಸುತ್ತಲೇ ಇಲ್ಲ.
ಮಾನ್ಯ ಗೃಹ ಸಚಿವರಾದ ಜಿ ಪರಮೇಶ್ವರ ಅವರು ಇತ್ತೀಚೆಗೆ ಒಳಮೀಸಲಾತಿ ಕುರಿತು ಮಾತನಾಡುತ್ತಾ, ʼನಾವು ಚಿತ್ರದುರ್ಗದಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಸಮಾವೇಶ ನಡೆಸಿ ಸುಮಾರು 7 ಲಕ್ಷ ಜನ ಸೇರಿಸಿ, ಅಂದೇ ನಾನು ʼಚಿತ್ರದುರ್ಗ ನಿರ್ಣಯʼ ಮಾಡಿಸಿದೆ. ಅದರಲ್ಲಿ, ನಾವು ಒಳಮೀಸಲಾತಿ ಜಾರಿ ಮಾಡಿಯೇ ತೀರುತ್ತೇವೆ ಎಂದು ಸೇರಿಸಿದೆ. ಬೋವಿ ಮತ್ತು ಲಂಬಾಣಿ ಸಮುದಾಯದ ಪ್ರತಿನಿಧಿಗಳು ಒಪ್ಪಲು ಸಿದ್ಧರಿಲ್ಲದಿದ್ದೂ ನಾವು ಅವರನ್ನು ರಾತ್ರಿಯೆಲ್ಲಾ ಕುಳಿತು ಸಮಾಲೋಚನೆ ನಡೆಸಿ ಒಪ್ಪಿಸಿ ಮರುದಿವ ನಾವರ ಕಡೆಯಿಂದಲೇ ಹೇಳಿಸಿದ್ದೆವು. ನಾವು ಆಧಿಕಾರಕ್ಕೆ ಬಂದರೆ ಒಳಮೀಸಲಾತಿ ಜಾರಿ ಮಾಡುತ್ತೇವೆ ಎಂಬುದಕ್ಕೆ ಬದ್ಧರಾಗಿದ್ದೆವುʼ ಎಂದಿದ್ದಾರೆ. ತಮ್ಮ ಮಾತು ಮುಂದುವರೆಸಿ ಮಾನ್ಯ ಪರಮೇಶ್ವರ್ ಅವರು, ʼನಾವು ಒಳಮೀಸಲಾತಿ ಜಾರಿ ಮಾಡಿದರೆ ಯಾರಾದರೂ ಕೋರ್ಟಿಗೆ ಹೋಗಲು ಅವಕಾಶ ಆಗಬಾರದು, ಸಮುದಾಯಗಳ ಜನಸಂಖ್ಯೆಯ ದೃಷ್ಟಿಯಿಂದ 2011ರ ಜನಗಣತಿಯನ್ನು ಪರಿಗಣಿಸಲು ಅದರಲ್ಲಿ ಕೇವಲ ಎಸ್ ಸಿ, ಎಸ್ ಟಿ ಎಂದು ನಮೂದಿಸಲಾಗಿದೆಯೇ ಹೊರತು ಸಮುದಾಯಗಳ ಸಂಖ್ಯೆ ದಾಖಲಾಗಿಲ್ಲ, ಸದಾಶಿವ ಆಯೋಗದ ಡೇಟಾ, ಲೀಗಲ್ ಅಲ್, ಅದು ಕೇವಲ ವರದಿ, ಅದು ಕಾನೂನಿನ ಪರೀಕ್ಷೆಯಲ್ಲಿ ನಿಲ್ಲುವುದಿಲ್ಲ. ಕೇವಲ ಒಂದು ವರದಿ ಅದು ಒಂದು ಲೀಗಲ್ ಡಾಕ್ಯುಮೆಂಟ್ ಅಲ್ಲ, ಆದರೆ ಕಾಂತರಾಜ್ ವರದಿಯನ್ನು ಪರಿಗಣಿಸಬಹುದು, ಆದರೆ ಆ ಡೇಟಾ ನಮಗೆ ಸಿಗಬೇಕುʼ ಎಂಬ ಮಾತುಗಳನ್ನು ಹೇಳಿದ್ದಾರೆ. ʼಕಳೆದ ಎರಡು ವರ್ಷಗಳಲ್ಲಿ ಕನಿಷ್ಟ ಹತ್ತು ಸಲ ಈ ವಿಷಯ ಕ್ಯಾಬಿನೆಟ್ ನಲ್ಲಿ ಚರ್ಚೆಯಾಗಿದೆ, ನಮ್ಮ ಶಾಸಕರನ್ನು ನಾನೇ ನಾಲ್ಕೈದು ಸಲ ಸಭೆ ನಡೆಸಿದ್ದೇನೆ, ಮೂರು ದಿನಗಳ ಹಿಂದೆ ಮಹದೇವಪ್ಪ ಅವರ ಮನೆಯಲ್ಲಿ ಸೇರಿಕೊಂಡು ರಾತ್ರಿ ಹನ್ನೊಂದು ಗಂಟೆಯಲ್ಲಿ ಸಹ ಸಭೆ ನಡೆಸಿದ್ದೇವೆ.ʼ ಎಂದು ಹೇಳುತ್ತಾ ಸಮಸ್ಯೆ ಇರುವುದೇ ಯಾವ ಆಧಾರದಲ್ಲಿ ಒಳಮೀಸಲಾತಿ ಕೊಡಬೇಕು ಎಂಬುದು ಎಂದು ಹೇಳಿದ್ದಾರೆ. ʼಕಾಂತರಾಜ್ ವರದಿಯನ್ನು ಸ್ವೀಕರಿಸಿ, ಅದರ ದತ್ತಾಂಶವನ್ನು ಪಡೆಯಲು ಅವಕಾಶ ಮಾಡಬೇಕುʼ ಎಂದು ಮಾನ್ಯ ಪರಮೇಶ್ವರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಪಡಿಸಿದ್ದಾರೆ.
ಮಾನ್ಯ ಗೃಹಸಚಿವರು, ರಾಜ್ಯದ ದಲಿತ ಸಮುದಾಯದ ಒಬ್ಬ ಪ್ರಮುಖ ಪ್ರತಿನಿಧಿ. ಆದರೆ ಅವರ ಮೇಲಿನ ಅವರ ಮಾತುಗಳೇ ಅವರ ಹೊಣೆಗೇಡಿತನಕ್ಕೆ ಸಾಕ್ಷಿಯಾಗಿವೆ. ನಿಜಕ್ಕೂ ಇಚ್ಚಾಶಕ್ತಿ ಇದ್ದಿದ್ದರೆ ರಾಜ್ಯ ಸರ್ಕಾರ ಆಯೋಗವನ್ನು ನೇಮಿಸಲು ಸುಪ್ರೀಂ ಕೋರ್ಟ್ ತೀರ್ಪು ಬರುವವರೆಗೂ ಕಾಯಬೇಕಿರಲಿಲ್ಲ. ಎರಡು ವರ್ಷದಿಂದಲೂ ಸಾಕಷ್ಟು ಸಲ ಈ ಬಗ್ಗೆ ಮಾತಾಡಿದ್ದೇವೆ ಎನ್ನುವ ಇವರು ಯಾಕೆ ಸಮಯದ ಮಿತಿಯನ್ನು ಹಾಕಿಕೊಂಡು ಒಳಮೀಸಲಾತಿ ಜಾರಿಗೆ ಹೊರಡಿಲಿಲ್ಲ? ಸಮುದಾಯಗಳ ಜನಸಂಖ್ಯೆಯ ದತ್ತಾಂಶವೇ ದೊಡ್ಡ ಸಮಸ್ಯೆ ಎಂಬುದು ಇವರಿಗೆ ಮನವರಿಕೆಯಾಗಿದ್ದು ಯಾವಾಗ? ಮೊದಲಿಂದಲೂ ಇದೇ ನೆಪವನ್ನು ಹೇಳಿಯೇ ತಕರಾರುಗಳು ಸಲ್ಲಿಕೆಯಾಗುತ್ತಿದ್ದುದು ಇವರಿಗೆ ಗೊತ್ತಿರಲಿಲ್ಲವೆ? ಹಾಗಿದ್ದ ಮೇಲೆ ಈ ಎರಡು ವರ್ಷಗಳಲ್ಲಿ ಮನಸ್ಸು ಮಾಡಿದ್ದರೆ ಕೇವಲ ಎರಡು ಮೂರು ತಿಂಗಳ ಅವಧಿಯಲ್ಲಿ ಪರಿಶಿಷ್ಟ ಜಾತಿಗಳ ಒಂದು ಹೊಸ ಜನಗಣತಿಯನ್ನೇ ನಡೆಸಿಬಿಡಬಹುದಿತ್ತಲ್ಲ? ಹೆಚ್ಚೆಂದರೆ ನೂರು ಕೋಟಿ ರೂಪಾಯಿಗಳು ಖರ್ಚಾಗುತ್ತಿತ್ತು. ಅದೇನು ದೊಡ್ಡ ಮೊತ್ತವೆ? ಇದನ್ನು ಇಷ್ಟರಲ್ಲಿ ಮಾಡಿಕೊಂಡಿದ್ದರೆ ಯಾವ ಬಾಧೆ ಇವರನ್ನು ಕಾಡಲು ಸಾಧ್ಯವಿತ್ತು? ಈಗಲಾದರೂ ಮನಸ್ಸು ಮಾಡಿದರೆ ಇಡೀ ರಾಜ್ಯದ ಜನಸಂಖ್ಯೆಯ ನಿಖರ ದತ್ತಾಂಶಗಳನ್ನು ಕೇವಲ ಒಂದು ತಿಂಗಳ ಅವಧಿಯಲ್ಲಿ ಪಡೆಯಲು ಸಾಧ್ಯವಿದೆ. ಈಗ ಬಾಧಿಸುತ್ತಿರುವ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಇತ್ಯಾದಿ ಸಮಸ್ಯೆಗಳನ್ನೂ ನೀಗಿಸಿಕೊಳ್ಳುವುದು ತೊಡ್ಡ ತೊಂದರೆ ಏನಲ್ಲ. ಆದರೆ, ಇವರ ಇಚ್ಚಾಶಕ್ತಿಯ ಕೊರತೆಯೇ ದೊಡ್ಡ ಸಮಸ್ಯೆ.
ಸರ್ಕಾರ, ಸಚಿವರುಗಳು ಯಾವುದೇ ಕೆಲಸ ಮಾಡುವಾಗ ನೆಪಗಳನ್ನು ತೋರಿಸುವುದೇ ಹಾಸ್ಯಾಸ್ಪದ. ಅಡೆತಡೆಗಳು, ಕೊರತೆಗಳು ಯಾವುದೇ ಕೆಲಸಕ್ಕೆ ಎಲ್ಲಾ ಕಾಲದಲ್ಲಿಯೂ ಇರುತ್ತವೆ. ಅವುಗಳಲ್ಲಿ ಕೆಲವು ದೊಡ್ಡ ತೊಡಕುಗಳೂ ಕೆಲವು ಸಣ್ಣವೂ ಇರುತ್ತವೆ. ಅಡೆತಡೆಗಳಿವೆ ಂದು ಅವುಗಳನ್ನು ಹಾಗೆಯೇ ಬಿಟ್ಟುಕೊಳ್ಳುವುದಾದರೆ ಜನರು ಓಟು ಹಾಕಿ ಇವರನ್ನು ಶಾಸಕ, ಸಚಿವ, ಮಂತ್ರಿಗಳಾಗಿ ಮಾಡುವುದಾದರೂ ಯಾಕಾಗಿ? ಅಂತಹ ಸಮಸ್ಯೆಗಳನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗನೇ ನಿವಾರಿಸಿ ಜನರಿಗೆ ತ್ವರಿತವಾಗಿ ನ್ಯಾಯ ಒದಗಿಸಲಿ ಎಂಬ ಕಾರಣಕ್ಕೇ ಅಲ್ಲವೇ? ಅಧಿಕಾರದಲ್ಲಿರುವಾಗಲೂ, ತಾವೇನೋ ಅಸಹಾಯಕರು ಎಂಬಂತೆ ವರ್ತಿಸುವುದು ಇವರ ಅಸಹಾಯಕತೆಯನ್ನು ತೋರಿಸುವುದಿಲ್ಲ, ಹೊಣೆಗೇಡಿತನವನ್ನು ತೋರಿಸುತ್ತದೆ.
ಇವರ ಇಂತಹ ವಿಳಂಬ ನೀತಿಗಳು, ಹೊಣೆಗೇಡಿತನಗಳು ಮೀಸಲಾತಿಯನ್ನೇ ಆಳವಾಗಿ ದ್ವೇಷಿಸುವ, ದಲಿತ ಸಮುದಾಯಗಳ ನಡುವೆ ಶಾಶ್ವತ ದ್ವೇಷ ಸಾಧಿಸಲು ಹವಣಿಸುತ್ತಿರುವ, ಒಳಮೀಸಲಾತಿ ವಿಷಯದಲ್ಲಿ ಹಿಪೊಕ್ರೈಟ್ ಗಳಾಗಿರುವ ಪಟ್ಟಭದ್ರ ಹಿತಾಸಕ್ತಿಗಳಿಗೆ ಮೃಷ್ಟಾನ್ನ ಭೋಜನ ಒದಗಿಸಿದಂತಾಗಿದೆ. ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ಇದು ಕಟ್ಟ ಕಡೆಯ ಅವಕಾಶ. ಕಳೆದ ಚುನಾವಣೆಯಲ್ಲಿ ತಾನು ನೀಡಿದ ಪ್ರಣಾಳಿಕೆಯ ಆಶ್ವಾಸನೆಗೆ ಬದ್ಧವಾಗಿ, ಎಷ್ಟು ತ್ವರಿತವಾಗಿ ಅದು ಒಳಮೀಸಲಾತಿ ಜಾರಿಗೊಳಿಸುತ್ತದೆಯೋ ಅಷ್ಟು ಸಮುದಾಯಗಳ ವಿಶ್ವಾಸವನ್ನು ಉಳಿಸುಕೊಳ್ಳುತ್ತದೆ, ಸಮುದಾಯಗಳ ನಡುವೆ ಸೌಹಾರ್ದವನ್ನು ಉಳಿಸುತ್ತದೆ. ಈ ಅವಕಾಶವನ್ನು ಯಾವುದೇ ನೆಪವೊಡ್ಡಿ ವಿಳಂಬಿಸಿದರೆ, ಇಲ್ಲವೇ ಕೈಚೆಲ್ಲಿ ಕೂತರೆ ಯಾರೂ ಕ್ಷಮಿಸಲು ಸಾಧ್ಯವಿಲ್ಲ