Wednesday, December 11, 2024

ಯಶ್‌ ನಟನೆಯ ಟಾಕ್ಸಿಕ್‌ ಚಿತ್ರತಂಡದ ಮೇಲಿನ FIR ಗೆ ತಡೆ

Most read

 

 ಬೆಂಗಳೂರು: ಯಶ್ ನಟನೆಯ ಟಾಕ್ಸಿಕ್ ಚಿತ್ರತಂಡ ಅರಣ್ಯ ಕಾಯ್ದೆ ಉಲ್ಲಂಘಿಸಿದೆ ಎಂದು ಆರೋಪಿಸಿ ದಾಖಲಾಗಿದ್ದ ಎಫ್​ಐಆರ್​ ಗೆ ಹೈಕೋರ್ಟ್​ ತಡೆ ನೀಡಿದೆ. ಈ ಮೂಲಕ ಸಿನಿಮಾದ ನಿರ್ಮಾಪಕರಾದ ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಯಶ್​  ಗೆ ತಾತ್ಕಾಲಿಕ ನೆಮ್ಮದಿ ಸಿಕ್ಕಂತಾಗಿದೆ.  ಟಾಕ್ಸಿಕ್ ಚಿತ್ರತಂಡ ಅರಣ್ಯ ಕಾಯ್ದೆಯನ್ನು ಉಲ್ಲಂಘಿಸಿತ್ತು ಎಂದು ಆರೋಪಿಸಿ ರಾಜ್ಯ ಅರಣ್ಯ ಇಲಾಖೆ ದೂರು ನೀಡಿತ್ತು. ಈ ದೂರು ಆಧರಿಸಿ ಎಫ್​ಐಆರ್ ದಾಖಲಾಗಿತ್ತು.

ಬೆಂಗಳೂರಿನ ಎಚ್​ಎಂಟಿಯ ಮೈದಾನದಲ್ಲಿ ಬೃಹತ್‌ ವೆಚ್ಚದಲ್ಲಿ ಟಾಕ್ಸಿಕ್’ ಸಿನಿಮಾ ಸೆಟ್​ ನಿರ್ಮಾಣ ಮಾಡಲಾಗಿತ್ತು. ಆದರೆ ಇಲ್ಲಿ  ಸೆಟ್ ನಿರ್ಮಾಣ ಮಾಡಲು ಮೈದಾನದಲ್ಲಿದ್ದ ಮರಗಳನ್ನು ಅಕ್ರಮವಾಗಿ, ಯಾವುದೇ ಪೂರ್ವಾನುಮತಿ ಇಲ್ಲದೆ ಕಡಿಯಲಾಗಿದೆ ಎಂದು ಅರಣ್ಯ ಇಲಾಖೆ ಆರೋಪ ಮಾಡಿತ್ತು, ವಕೀಲರೊಬ್ಬರು  ನ್ಯಾಯಾಲಯದಲ್ಲಿ ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಕೆ ಮಾಡಿದ್ದರು.

ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ   ಅವರೇ ಟಾಕ್ಸಿಕ್ ಸಿನಿಮಾ ಸೆಟ್​ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅರಣ್ಯ ಇಲಾಖೆ ಉಪಗ್ರಹ ಚಿತ್ರಗಳನ್ನು ಬಿಡುಗಡೆ ಮಾಡಿ, ಸೆಟ್ ಹಾಕುವುದಕ್ಕೂ ಮುನ್ನ ಮತ್ತು ನಂತರ ಆ ಪ್ರದೇಶ ಹೇಗಿತ್ತು ಎಂಬ ಚಿತ್ರಗಳನ್ನು ಬಿಡುಗಡೆ ಮಾಡಿತ್ತು. ಈ ಪ್ರಕರಣದಲ್ಲಿ ಎಚ್​ಎಂಟಿ ಸಂಸ್ಥೆ ಮೇಲೆ ಸಹ ಆರೋಪಗಳು ಕೇಳಿ ಬಂದಿದ್ದವು. ಸರ್ಕಾರ ನೀಡಿರುವ ಭೂಮಿಯನ್ನು ಸಿನಿಮಾ ಚಿತ್ರೀಕರಣಗಳಿಗೆ ನೀಡಿ ಎಚ್​ಎಂಟಿ ಅಕ್ರಮವಾಗಿ ಹಣ ಮಾಡುತ್ತಿದೆ. ತಪ್ಪು ಉದ್ದೇಶಗಳಿಗೆ ಸರ್ಕಾರ ನೀಡಿರುವ ಜಾಗವನ್ನು ಬಳಸುತ್ತಿದೆ ಎಂಬ ಆರೋಪವೂ ಕೇಳಿ ಬಂದಿತ್ತು. ಟಾಕ್ಸಿಕ್ ಸಿನಿಮಾಕ್ಕೆ ಸೆಟ್ ಹಾಕಿರುವ ಜಾಗಕ್ಕೂ ತಮಗೂ ಸಂಬಂಧ ಇಲ್ಲ ಎಂದು ಸ್ಪಷ್ಟನೆ ನೀಡಿತ್ತು.

ಹೈಕೋರ್ಟ್​ನ ನ್ಯಾ.ಎಂ. ನಾಗಪ್ರಸನ್ನ ಅವರಿದ್ದ ಪೀಠವು ಪ್ರಕರಣದ ವಿಚಾರಣೆ ನಡೆಸಿ ಸಿನಿಮಾದ ನಿರ್ಮಾಪಕರ ಮೇಲೆ ಸಲ್ಲಿಸಲಾಗಿದ್ದ ಎಫ್​ಐಆರ್​ಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಸಿನಿಮಾದ ನಿರ್ಮಾಪಕರ ಪರವಾಗಿ ವಾದಿಸಿದ ವಕೀಲ ಬಿಪಿನ್ ಹೆಗ್ಡೆ, 400 ಎಕರೆ ಜಮೀನಿನ 18 ಎಕರೆ ಜಾಗವನ್ನು ಹೆಚ್ ಎಂ ಟಿ ಸಂಸ್ಥೆ ಕೆನರಾ ಬ್ಯಾಂಕ್​ಗೆ ಮಾರಾಟ ಮಾಡಿದೆ. ಇಲ್ಲಿ, 30 ಕೋಟಿ ಹೂಡಿಕೆ ಮಾಡಿ ಸಿನಿಮಾ ಸೆಟ್ ಹಾಕಲಾಗಿದೆ. ಈಗ ಸೆಟ್ ನಿರ್ಮಿಸಲಾಗಿರುವ ಜಾಗ ಅರಣ್ಯ ಭೂಮಿ ವಶದಲ್ಲಿಲ್ಲ. ಎಂದು ಸ್ವತಃ ಸರ್ಕಾರವೇ ಸುಪ್ರೀಂ ಕೋರ್ಟ್ ಗೆ ಹೇಳಿದೆ. ಅಲ್ಲದೆ ಶೂಟಿಂಗ್ ಸೆಟ್​ ಹಾಕಲು ಯಾವುದೇ ಮರಗಳನ್ನು ಕಡಿದಿಲ್ಲ ಎಂದು ಮಾಹಿತಿ ನೀಡಿದರು.  ವಾದ ಆಲಿಸಿದ ನ್ಯಾಯಮೂರ್ತಿಗಳು ಮಧ್ಯಂತರ ತಡೆ ಆದೇಶ ನೀಡಿದರು.

‘ಟಾಕ್ಸಿಕ್’ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್ ಅವರ ಮಾನ್​ಸ್ಟರ್ ಮೈಂಡ್ಸ್ ಕ್ರಿಯೇಷನ್ಸ್​ ಒಟ್ಟಿಗೆ ನಿರ್ಮಾಣ ಮಾಡುತ್ತಿದೆ. ಬೆಂಗಳೂರಿನಲ್ಲಿ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಇದೀಗ ಮುಂಬೈಗೆ ಸ್ಥಳಾಂತರಗೊಂಡಿದೆ. ಸಿನಿಮಾನಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ ಇನ್ನೂ ಹಲವು ಖ್ಯಾತ ನಟ-ನಟಿಯರು ನಟಿಸುತ್ತಿದ್ದಾರೆ.

ಗಳನ್ನು ಕಡಿದಿಲ್ಲವೆಂದು, ಅಲ್ಲದೆ ಮೈದಾನದಲ್ಲಿದ್ದ ಗಿಡಗಂಟೆಗಳನ್ನಷ್ಟೆ ಸ್ವಚ್ಛ ಮಾಡಿರುವುದಾಗಿ ಹೇಳಿಕೊಂಡಿತ್ತು.

More articles

Latest article